ಕ್ಯಾರೆಟ್ ಹಲ್ವಾ ತೆಗೆದುಕೊಂಡು ಹೋಗಿದ್ದೀರಾ?: ಶುಭಾಂಶು ಶುಕ್ಲಾ ಜೊತೆ ಪ್ರಧಾನಿ ಮೋದಿ ಮಾತು!

ಹೊಸ ದಿಗಂತ ಡಿಜಿಟಲ್ ಡೆಸ್ಕ್: 

ಅಂತಾರಾಷ್ಟ್ರೀಯ ಬಾಹ್ಯಾಕಾಶ ನಿಲ್ದಾಣದಲ್ಲಿರುವ (ಐಎಸ್​ಎಸ್) ಗಗನಯಾತ್ರಿ ಭಾರತೀಯ ವಾಯುಪಡೆಯ ಗ್ರೂಪ್ ಕ್ಯಾಪ್ಟನ್ ಶುಭಾಂಶು ಶುಕ್ಲಾ ಅವರೊಂದಿಗೆ ಪ್ರಧಾನಿ ನರೇಂದ್ರ ಮೋದಿ ಅವರು ಸಂವಾದ ನಡೆಸಿದ್ದಾರೆ.

ಇಂದು, ನೀವು ನಮ್ಮ ತಾಯ್ನಾಡಿನಿಂದ ದೂರವಾಗಿದ್ದೀರಿ, ಆದರೆ ನೀವು ಭಾರತೀಯರ ಹೃದಯಕ್ಕೆ ಹತ್ತಿರವಾಗಿದ್ದೀರಿ ಎಂದು ಮೋದಿ ಹೇಳಿದ್ದಾರೆ. ನಿಮ್ಮ ಹೆಸರಿನಲ್ಲಿಯೇ ಶುಭ ಇದೆ. ಇದು ನವಯುಗದ ಶುಭಾರಂಭ ಎಂದು ಅವರು ಹೇಳಿದರು.

ಬಳಿಕ ಮಾತು ಮುಂದುವರಿಸಿ ಕ್ಯಾರೆಟ್ ಹಲ್ವಾ ತೆಗೆದುಕೊಂಡು ಹೋಗಿದ್ದೀರಾ? ಅದನ್ನು ಬೇರೆಯವರಿಗೂ ಕೊಟ್ಟಿರಾ? ಎಂದು ಮೋದಿ ಪ್ರಶ್ನಿಸಿದರು. ಅದಕ್ಕೆ ಉತ್ತರಿಸಿದ ಗ್ರೂಪ್ ಕ್ಯಾಪ್ಟನ್ ಶುಭಾಂಶು ಶುಕ್ಲಾ, ನಾನು ನಿಜವಾಗಿಯೂ ಕ್ಯಾರೆಟ್ ಹಲ್ವಾ, ಹೆಸರುಬೇಳೆ ಹಲ್ವಾ, ಮಾವಿನ ರಸ ತೆಗೆದುಕೊಂಡು ಬಂದಿದ್ದೆ. ನಮ್ಮ ದೇಶದ ಪಾಕಪದ್ಧತಿಯ ಬಗ್ಗೆ ಬೇರೆ ದೇಶದವರಿಗೂ ತಿಳಿಸಬೇಕೆಂದು ಇಲ್ಲಿದ್ದ ಬೇರೆ ದೇಶಿಗರಿಗೂ ಕೊಟ್ಟೆ. ಎಲ್ಲರೂ ಕೂತು ಹಲ್ವಾ ತಿಂದೆವು. ಎಲ್ಲರಿಗೂ ಅದು ತುಂಬಾ ಹಿಡಿಸಿತು ಎಂದು ಶುಕ್ಲಾ ಹೇಳಿದ್ದಾರೆ.

ರಾಕೇಶ್‌ ಶರ್ಮಾ ಅವರ ಬಳಿಕ ಬಾಹ್ಯಾಕಾಶ ಪ್ರಯಾಣ ಕೈಗೊಂಡ ಎರಡನೇ ಭಾರತೀಯ ಎಂಬ ಹೆಗ್ಗಳಿಕೆಗೆ ಶುಭಾಂಶು ಪಾತ್ರರಾಗಿದ್ದಾರೆ. ಪ್ರಧಾನಿ ಮೋದಿ ಅವರು ಈ ಮಿಷನ್ ಪೈಲಟ್ ಶುಭಾಂಶು ಶುಕ್ಲಾ ಮತ್ತು ಇತರ ಸಿಬ್ಬಂದಿ ಸದಸ್ಯರಾದ ಮಿಷನ್ ಕಮಾಂಡರ್ ಪೆಗ್ಗಿ ವಿಟ್ಸನ್ ಮತ್ತು ಮಿಷನ್ ತಜ್ಞರಾದ ಪೋಲೆಂಡ್‌ನ ಸ್ಲಾವೋಸ್ಜ್ ಉಜ್ನಾನ್ಸ್ಕಿ-ವಿಸ್ನಿವ್ಸ್ಕಿ ಮತ್ತು ಹಂಗೇರಿಯ ಟಿಬೋರ್ ಕಪು ಅವರನ್ನು ಅಭಿನಂದಿಸಿದರು.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!