Sunday, July 3, 2022

Latest Posts

ವಿವಿಧ ಬೇಡಿಕೆಗಳ ಈಡೇರಿಕೆಗೆ ಒತ್ತಾಯಿಸಿ ಅತಿಥಿ ಉಪನ್ಯಾಸಕರ ಪ್ರತಿಭಟನೆ

ಹೊಸ ದಿಗಂತ ವರದಿ, ಚಿತ್ರದುರ್ಗ:

ಬೇರೆ ರಾಜ್ಯಗಳ ಮಾದರಿಯಂತೆ ಸೇವಾ ಭದ್ರತೆ ಒದಗಿಸಿ ಯುಜಿಸಿ ನಿಯಮಾವಳಿಯಂತೆ ಗೌರವಧನ ನೀಡುವಂತೆ ಅತಿಥಿ ಉಪನ್ಯಾಸಕರು ಗುರುವಾರ ಜಿಲ್ಲಾಧಿಕಾರಿ ಕಚೇರಿ ಎದುರು ಪ್ರತಿಭಟನೆ ನಡೆಸಿದರು.
ಸರ್ಕಾರಿ ಪದವಿ ಕಾಲೇಜುಗಳ ಅತಿಥಿ ಉಪನ್ಯಾಸಕರ ಸಂಘದಿಂದ ಮೆರವಣಿಗೆ ಮೂಲಕ ಜಿಲ್ಲಾಧಿಕಾರಿಗೆ ಕಚೇರಿಗೆ ಆಗಮಿಸಿದ ಪ್ರತಿಭಟನಾಕಾರರು, ಕರ್ನಾಟಕ ರಾಜ್ಯದ 430 ಸರ್ಕಾರಿ ಪದವಿ ಕಾಲೇಜುಗಳಲ್ಲಿ 14,447 ಅತಿಥಿ ಉಪನ್ಯಾಸಕರುಗಳು 20 ವರ್ಷಗಳಿಂದಲೂ ಸೇವೆ ಸಲ್ಲಿಸುತ್ತಿದ್ದು, ಲಕ್ಷಾಂತರ ವಿದ್ಯಾರ್ಥಿಗಳ ಭವಿಷ್ಯ ರೂಪಿಸಿದ್ದಾರೆ. ಕೇವಲ 11 ರಿಂದ 13ಸಾವಿರ ರೂ.ಗಳ ಗೌರವಧನದಲ್ಲಿ ಜೀವಿಸುವುದು ಕಷ್ಟವಾಗಿದೆ ಎಂದು ಅಲವತ್ತುಕೊಂಡರು.
ಸೇವಾ ಭದ್ರೆಯಾಗಲಿ, ಇ.ಎಸ್.ಐ., ಪಿ.ಎಫ್. ಇರುವುದಿಲ್ಲ. ಮಹಿಳಾ ಅತಿಥಿ ಉಪನ್ಯಾಸಕರಿಗೆ ವೇತನ ಸಹಿತ ಹೆರಿಗೆ ಸೌಲಭ್ಯವಿಲ್ಲದಂತಾಗಿದೆ. ನಮ್ಮ ನ್ಯಾಯಯುತವಾದ ಬೇಡಿಕೆಗಳನ್ನು ಈಡೇರಿಸಿಕೊಳ್ಳಲು ಹತ್ತಾರು ವರ್ಷಗಳಿಂದಲೂ ಪ್ರತಿಭಟನೆ ನಡೆಸುತ್ತಿದ್ದರೂ ಯಾವ ಸರ್ಕಾರಗಳು ಕಾಳಜಿ ತೋರುತ್ತಿಲ್ಲ ಎಂದು ತಮ್ಮ ಸಂಕಷ್ಟಗಳನ್ನು ತೋಡಿಕೊಂಡರು.
ಕೋವಿಡ್-19 ರ ನಂತರ ಜೀವನ ಸಾಗಿಸುವುದು ಕಷ್ಟಕರವಾಗಿರುವುದರಿಂದ 70 ಕ್ಕೂ ಹೆಚ್ಚು ಅತಿಥಿ ಉಪನ್ಯಾಸಕರುಗಳು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಇನ್ನು ಕೆಲವರು ಗಂಭೀರವಾದ ಕಾಯಿಲೆಗಳಿಗೆ ತುತ್ತಾಗಿ ಚಿಕಿತ್ಸೆ ಪಡೆಯಲು ಕೈಯಲ್ಲಿ ಕಾಸಿಲ್ಲದೆ ಸತ್ತವರ ಸಂಖ್ಯೆ 100 ಕ್ಕೇರಿದೆ. ಹಾಗಾಗಿ ಸರ್ಕಾರ ಅತಿಥಿ ಉಪನ್ಯಾಸಕರುಗಳ ಸಮಸ್ಯೆಗಳಿಗೆ ಸ್ಪಂದಿಸಿ ಬೇಡಿಕೆಗಳನ್ನು ಈಡೇರಿಸುವಂತೆ ಒತ್ತಾಯಿಸಿದರು.

ಈ ಸುದ್ದಿ ಇತರರೊಂದಿಗೂ ಹಂಚಿಕೊಳ್ಳಿ

Whatsapp Group
Telegram

Latest Posts

Don't Miss