ಪ್ರೀತಿಯ ಓದುಗರೇ,
ಕೋವಿಡ್ ನಿರ್ನಾಮ ನಮ್ಮ ಕೈಯಲ್ಲೇ ಇದೆ. ಮಾಸ್ಕ್ ಧರಿಸಿ, ಸಾಮಾಜಿಕ ಅಂತರ ಕಾಯ್ದುಕೊಳ್ಳಿ, ಕೈ, ಮುಖವನ್ನು ಸ್ವಚ್ಛವಾಗಿ ಇಟ್ಟುಕೊಳ್ಳಿ. ನೀವೂ ಸುರಕ್ಷಿತರಾಗಿರಿ, ನಿಮ್ಮವರನ್ನೂ ಸುರಕ್ಷಿತರಾಗಿ ಇರುವಂತೆ ನೋಡಿಕೊಳ್ಳಿ.
…………………………………………………………………
ಹೊಸದಿಗಂತ ವರದಿ, ಹಾವೇರಿ:
ಪಕ್ಷದ ಒಬ್ಬ ಶಾಸಕರ ಮೇಲೆ ಶಿಸ್ತು ಕ್ರಮಗಳನ್ನು ಕೈಗೊಳ್ಳಬೇಕಾದರೆ ಅವರಿಗೆ ಮೂರು ಬಾರಿ ನೊಟೀಸ್ ನೀಡಬೇಕಾಗುತ್ತದೆ. ಮುಖ್ಯಮಂತ್ರಿ ಯಡಿಯೂರಪ್ಪ ಹಾಗೂ ಅವರ ಮಗನ ಮೇಲೆ ಪದೇ ಪದೇ ಆಪಾದನೆ ಮಾತನಾಡುತ್ತಿರುವ ಶಾಸಕ ಯತ್ನಾಳ ಅವರಿಗೆ ಪಕ್ಷದ ಶಿಸ್ತು ಸಮೀತಿ ಈಗಾಗಲೇ ಎರಡು ಬಾರಿ ನೊಟೀಸ್ ನೀಡಿದೆ ಎಂದು ಬಿಜೆಪಿ ರಾಜ್ಯಾಧ್ಯಕ್ಷ ನಳಿನ್ ಕುಮಾರ್ ಕಟೀಲ್ ಹೇಳಿದರು.
ನಗರದ ಪ್ರವಾಸಿ ಮಂದಿರದಲ್ಲಿ ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತನಾಡಿದ ಅವರು, ಸಿ.ಎಂ ಹಾಗೂ ಅವರ ಮಗನ ಮೇಲೆ ಪದೇ ಪದೇ ಆಪಾದನೆ ಮಾಡುತ್ತಿರುವ ಶಾಸಕ ಯತ್ನಾಳ ಅವರ ಮೇಲೆ ಪಕ್ಷ ಏಕೆ ಕ್ರಮ ಕೈಗೊಳ್ಳುತ್ತಿಲ್ಲ ಎಂಬ ಪ್ರಶ್ನೆಗೆ ಮೇಲಿನಂತೆ ಪ್ರತಿಕ್ರೀಯಿಸಿದರಲ್ಲದೆ ನಮ್ಮದೊಂದು ಪ್ರಜಾಪ್ರಭುತ್ವ ಆಧಾರಿತ ಸಂಘಟನೆಯಾಗಿದ್ದು, ನಮ್ಮಲ್ಲಿ ವ್ಯವಸ್ಥೆಗಳಿವೆ. ನಮ್ಮಲ್ಲಿನ ಶಿಸ್ತು ಸಮಿತಿ ಈಗಾಗಲೆ ಎಚ್ಚರಿಕೆ ನೊಟೀಸ್ನ್ನ ಕೊಟ್ಟಿದೆ. ಒಬ್ಬ ಶಾಸಕನಿಗೆ ಮೂರು ಹಂತದ ನೊಟೀಸ್ಗಳನ್ನ ಕೊಡಬೇಕಿದೆ. ಅವೆಲ್ಲ ಕಾರ್ಯವನ್ನ ಮಾಡ್ತಿದೆ ಸಮಿತಿ. ಇನ್ನಷ್ಟು ತಪ್ಪು ಮಾಡಿದರೆ ಮುಂದಿನ ಎಲ್ಲ ನಿರ್ಧಾರಗಳನ್ನ ಕೇಂದ್ರ ತೆಗೆದುಕೊಳ್ಳುತ್ತದೆ ಎಂದರು.
ಕಾಂಗ್ರೆಸ್ ಆಡಳಿತದಲ್ಲಿದ್ದಾಗ ವಿಪರೀತ ಬೆಲೆ ಏರಿಕೆ ಇತ್ತು. ಆಗ ಯಾವುದೇ ಕೋವಿಡ್ ಇರಲಿಲ್ಲ ಪೆಟ್ರೋಲ್, ಡಿಸೇಲ್ ಹಾಗೂ ಅಗತ್ಯ ವಸ್ತುಗಳ ಬೆಲೆ ಏರಿಕೆ ವಿಚಾರವಾಗಿ ಕಾಂಗ್ರೆಸ್ ಟೀಕೆ ಮಾಡಲಿಕ್ಕೇ ಇರುವ ಪಾರ್ಟಿ. ವಿರೋಧ ಮಾಡೋದೆ ಅವರ ಪಾರ್ಟಿ ಗುಣ ಆಗಿದೆ. ದೇಶದಲ್ಲಿ ಕೋವಿಡ್ ನಿಯಂತ್ರಣ ಮಾಡೋ ಕೆಲಸ ಮಾಡ್ತಿದೆ ಎಂದು ಹೇಳಿದರು.
ಬೆಲೆ ಏರಿಕೆ ಕೋವಿಡ್ ಕಾರಣಕ್ಕಲ್ಲದೆ ವಿವಿಧ ಕಾರಣಕ್ಕಾಗಿದ್ದರೂ ಸಹ ಕೋವಿಡ್ ನಿಯಂತ್ರಣದೊಂದಿಗೆ ಬೆಲೆ ಏರಿಕೆಯ ನಿಯಂತ್ರಣವನ್ನು ಕೇಂದ್ರ ಸರ್ಕಾರ ಮಾಡಲಿದೆ. ಆತ್ಮ ನಿರ್ಭರ ಯೋಜನೆಯಲ್ಲಿ ಕೇಂದ್ರ ಸರ್ಕಾರ ೨೦ ಲಕ್ಷ ಕೋಟಿ ರೂಗಳನ್ನು ನೀಡಿದೆ ಎಂದರು. ದೇಶದಲ್ಲಿ ಕೊರೋನಾ ಒಂದನೆ ಅಲೆ ಬಂದಾಗಲೂ ಆರ್ಥಿಕ ಕುಸಿತ ಕಾಣಲಿಲ್ಲ. ಎರಡನೇ ಅಲೆಯ ಸಂದರ್ಭದಲ್ಲಿಯೂ ಆರ್ಥಿಕ ಕುಸಿತ ಕಂಡಿಲ್ಲ ಎಂದು ತಿಳಿಸಿದರು.