ನಳಿನ್‌ರನ್ನು ಬೆಳ್ಳಾರೆಯಲ್ಲಿ ತಡೆದಿದ್ದು ಅತೃಪ್ತರು, ಬಿಜೆಪಿ ರಾಜ್ಯಾಧ್ಯಕ್ಷರ ವಿರುದ್ಧ ಷಡ್ಯಂತ್ರ: ದ.ಕ ವಕ್ತಾರ ಆರೋಪ

ಹೊಸದಿಗಂತ ವರದಿ, ಮಂಗಳೂರು:
ಇತ್ತೀಚೆಗೆ ಬೆಳ್ಳಾರೆಯಲ್ಲಿ ಬಿಜೆಪಿ ರಾಜ್ಯಾಧ್ಯಕ್ಷ ನಳಿನ್ ಕುಮಾರ್ ಕಟೀಲ್ ಅವರ ಕಾರನ್ನು ತಡೆದು ದಿಗ್ಬಂಧನ ಹಾಕುವ ಕೆಲಸ ಆಕಾಂಕ್ಷಿಗಳು, ಅತೃಪ್ತರು, ಅವಕಾಶ ವಂಚಿತರಿಂದ ಆಗಿದ್ದು, ಬಿಜೆಪಿಯ ನಿಜವಾದ ಕಾರ್ಯಕರ್ತರು ಆ ಕೆಲಸ ಮಾಡಿಲ್ಲ ಎಂದು ದ.ಕ ಜಿಲ್ಲಾ ಬಿಜೆಪಿ ವಕ್ತಾರ ಜಗದೀಶ ಶೇಣವ ಆರೋಪಿಸಿದ್ದಾರೆ.
ಸೋಮವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಹತ್ಯೆಯಾದ ಪ್ರವೀಣ್ ನೆಟ್ಟಾರ್ ಮನೆಗೆ ತೆರಳುವಾಗ ಜಿಲ್ಲಾ ಉಸ್ತುವಾರಿ ಸಚಿವ ಸುನಿಲ್ ಕುಮಾರ್ ಸೇರಿದಂತೆ ಇತರೆ ಶಾಸಕರಿದ್ದರೂ ಕೇವಲ ನಳಿನ್ ಕುಮಾರ್ ಅವರನ್ನೇ ಟಾರ್ಗೆಟ್ ಮಾಡಲಾಗಿದೆ. ಇದರ ಹಿಂದೆ ಷಡ್ಯಂತ್ರವಿದೆ ಎಂದರು.
ಪ್ರವೀಣ್ ಹತ್ಯೆಯಾದ ದಿನ ನಳಿನ್ ಕುಮಾರ್ ತುರ್ತು ಕಾರ್ಯನಿಮಿತ್ತ ದೆಹಲಿಗೆ ತೆರಳಿದ್ದರು. ಕೆಲಸ ಮುಗಿಸಿ ಅಲ್ಲಿಂದ ಬರುವಾಗ ತಡವಾಗಿದೆ. ಮಂಗಳೂರಿಗೆ ಬಂದ ತಕ್ಷಣ ನಳಿನ್ ಬೆಳ್ಳಾರೆಗೆ ತೆರಳಿದ್ದರು. ಅವರ ಜೊತೆಗೆ ಸುನಿಲ್ ಕುಮಾರ್ ಸೇರಿದಂತೆ ಇತರೆ ಜನಪ್ರತಿನಿಧಿಗಳೂ ಇದ್ದರು. ಆದರೆ ಬೆಳ್ಳಾರೆಗೆ ತೆರಳಿದಾಗ ಪರಿಸ್ಥಿತಿ ಉಲ್ಬಣಗೊಂಡಿತ್ತು. ಅಲ್ಲಿ ನಳಿನ್‌ಒಬ್ಬರನ್ನೇ ಟಾರ್ಗೆಟ್ ಮಾಡಲಾಯಿತು. ಬಿಜೆಪಿಯ ನಿಜವಾದ ಕಾರ್ಯಕರ್ತರು ಹೀಗೆ ಮಾಡಿರಲಾರರು. ನಳಿನ್ ಕಳೆದ ಹಲವು ವರ್ಷಗಳಿಂದ ಸಂಘಟನೆಯಲ್ಲಿ ತೊಡಗಿಸಿಕೊಂಡವರು. ಕಷ್ಟಕರ ಸ್ಥಿತಿಯಲ್ಲೂ ಸಂಘಟನೆ ಕಟ್ಟಲು ಶ್ರಮಿಸಿದವರು. ಇದು ಈಗಿನ ಯುವ ಕಾರ್ಯಕರ್ತರಿಗೆ ತಿಳಿದಿಲ್ಲ. ನಳಿನ್ ಕುಮಾರ್ 5 ವರ್ಷ ಪ್ರಚಾರಕರಾಗಿ, 7 ವರ್ಷ ಕಾರ್ಯವಾಹರಾಗಿ, 4 ವರ್ಷ ಧರ್ಮ ಜಾಗರಣದ ಜವಾಬ್ಧಾರಿ, 5 ವರ್ಷ ಬಿಜೆಪಿ ಪ್ರಧಾನ ಕಾರ್ಯದರ್ಶಿಯಾಗಿ ಜವಾಬ್ಧಾರಿ ನಿರ್ವಹಿಸಿದವರು. ಆವರಿಗೆ ಈ ರೀತಿ ತಡೆ ಒಡ್ಡಿದ್ದು ಸರಿಯಲ್ಲ ಎಂದವರು ಹೇಳಿದರು.
ಬಿಜೆಪಿ ರಾಜ್ಯಾಧ್ಯಕ್ಷರಾಗಿ ಎಲ್ಲಾ ಜಿಲ್ಲೆಗಳಿಗೆ ತೆರಳಿ ಪಕ್ಷ ಬಲಪಡಿಸುವಲ್ಲಿ ಶ್ರಮಿಸುತ್ತಿದ್ದಾರೆ. ಕಳೆದ 13 ವರ್ಷದಿಂದ ಸಂಸದರಾಗಿ ಉತ್ತಮ ಕೆಲಸ ಮಾಡಿದ್ದಾರೆ. ಭ್ರಷ್ಟಾಚಾರವಿಲ್ಲದ ಸ್ವಚ್ಛ ರಾಜಕಾರಣ ಅವರದ್ದು ಎಂದು ಶೇಣವ ಹೇಳಿದರು.
ಸುದ್ದಿಗೋಷ್ಠಿಯಲ್ಲಿ ಬಿಜೆಪಿ ವಕ್ತಾರರಾದ ರವಿಶಂಕರ ಮಿಜಾರು, ರಾಧಾಕೃಷ್ಣ, ಜಿಲ್ಲಾ ಮಾಧ್ಯಮ ಪ್ರಮುಖ್ ಸಂದೇಶ್ ಶೆಟ್ಟಿ, ಸಂಯೋಜಕ ರಂದೀಪ್ ಕಾಂಚನ್ ಉಪಸ್ಥಿತರಿದ್ದರು.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!