ಹೊಸದಿಗಂತ ವರದಿ, ಚಿಕ್ಕಮಗಳೂರು:
ಸರ್ಕಾರಿ ಕೆಲಸಕ್ಕೆ ಅಡ್ಡಿಪಡಿಸಿದ ಆರೋಪಿಗಳಿಗೆ ನರಸಿಂಹರಾಜಪುರದ ಸಿವಿಲ್ ಜಡ್ಜ್ ಮತ್ತು ಜೆ.ಎಂ.ಎಫ್.ಸಿ ನ್ಯಾಯಾಲಯವು ದಂಡ ವಿಧಿಸಿ ತೀರ್ಪು ನೀಡಿದೆ.
ದುಗ್ಗಪ್ಪಗೌಡ, ಹೆಚ್.ಮಹೇಶ್ ಹಾಗೂ ಎಂ.ಬಾಬು ಎಂಬುವವರು ಶುಕ್ಷಿಗೆ ಗುರಿಯಾದ ಆರೋಪಿಗಳಾಗಿದ್ದಾರೆ.
2015 ಜೂನ್ 24 ರಂದು ಮಧ್ಯಾಹ್ನ 1.30ರ ಸಮಯದಲ್ಲಿ ನರಸಿಂಹರಾಜಪುರದ ಬೈರಾಪುರ ಗ್ರಾಮದ ಆಲ್ದಾರ್ ಎಂಬಲ್ಲಿ ಸರ್ವೆ ನಂ.69ರ ಗದ್ದೆಯಲ್ಲಿ ಇದ್ದ ಮರದ ವಿದ್ಯುತ್ ಕಂಬಗಳು ಭಾರಿ ಗಾಳಿ ಮಳೆಗೆ ಮುರಿದು ಬಿದ್ದು ಗದ್ದೆಯಲ್ಲಿ ಮೇಯುತ್ತಿದ್ದ 2 ದನಗಳ ಮೇಲೆ ವಿದ್ಯುತ್ ಹರಿದು ಮೃತಪಟ್ಟಿದ್ದು, ಈ ವಿಚಾರದಲ್ಲಿ ಸ್ಥಳ ಪರಿಶೀಲನೆಗೆ ಮೆಸ್ಕಾಂ ಸಹಾಯ ಇಂಜಿನೀಯರ್ ಹೆಚ್.ಪಿ.ಗೌತಮ್ ಮತ್ತು ಡಿ.ಪ್ರಶಾಂತ್ ಕುಮಾರ್ ಎಂಬುವವರಿಗೆ ಆರೋಪಿಗಳು ಕೈಯಿಂದ ಮತ್ತು ಕಟ್ಟಿಂಗ್ ಪ್ಲೇಯರ್ನಿಂದ ಹೊಡೆದು ಅವಾಚ್ಯ ಶಬ್ದಗಳಿಂದ ನಿಂದಿಸಿ ಪ್ರಾಣ ಬೆದರಿಕೆಯನ್ನು ಹಾಕಿ ಸರ್ಕಾರಿ ಕೆಲಸಕ್ಕೆ ಅಡ್ಡಿಪಡಿಸಿದ್ದರು. ಈ ಬಗ್ಗೆ ನ.ರಾ.ಪುರ ಪೊಲೀಸರು ಪ್ರಕರಣ ದಾಖಲಿಸಿಕೊಂಡು ಆರೋಪಿತರ ವಿರುದ್ಧ ನ್ಯಾಯಾಲಯಕ್ಕೆ ದೋಷಾರೋಪಣ ಪತ್ರ ಸಲ್ಲಿಸಿದ್ದರು.
ಪ್ರಕರಣ ವಿಚಾರಣೆ ನಡೆಸಿದ ನರಸಿಂಹರಾಜಪುರದ ಸಿವಿಲ್ ಜಡ್ಜ್ ಮತ್ತು ಜೆ.ಎಂ.ಎಫ್.ಸಿ ನ್ಯಾಯಾಲಯದ ನ್ಯಾಯಾಧೀಶೆ ಬಿ.ಪ್ರಿಯಾಂಕ ಅವರು ಆರೋಪಿತರನ್ನು ದೋಷಿ ಎಂದು ತೀರ್ಪು ನೀಡಿ, ತಲಾ ರೂ 1000 ದಂಡವನ್ನು ವಿಧಿಸಿದ್ದು ತಪ್ಪಿದ್ದಲ್ಲಿ 1 ತಿಂಗಳು ಜೈಲು ಶಿಕ್ಷೆ ಅನುಭವಿಸುವಂತೆ ತೀರ್ಪು ನೀಡಿದ್ದಾರೆ. ಸರ್ಕಾರದ ಪರವಾಗಿ ಸಹಾಯಕ ಸರ್ಕಾರಿ ಅಭಿಯೋಜಕಿ ಶಾಂಭವಿ ವಾದ ಮಂಡಿಸಿದರು.