ಹೊಸದಿಗಂತ ಡಿಜಿಟಲ್ ಡೆಸ್ಕ್:
ಬಾಂಗ್ಲಾದೇಶ ಪ್ರಧಾನಿ ಹುದ್ದೆಗೆ ಶೇಖ್ ಹಸೀನಾ ಅವರು ಪ್ರಧಾನಿ ರಾಜೀನಾಮೆ ನೀಡಿ ದೇಶವನ್ನು ತೊರೆದು ಭಾರತಕ್ಕೆ ಆಗಮಿಸಿದ್ದು, ಅತ್ತ ಬಾಂಗ್ಲಾದೇಶ ರಾಷ್ಟ್ರಪತಿ ಮೊಹಮ್ಮದ್ ಶಹಬುದ್ದೀನ್ ಇಂದು ಸಂಸತ್ ವಿಸರ್ಜಿಸಿದ್ದಾರೆ.
ಮೂರು ಸೇನೆಯ ಮುಖ್ಯಸ್ಥರು, ವಿವಿಧ ಪಕ್ಷಗಳ ಮುಖಂಡರು, ನಾಗರಿಕ ಸಮಾಜದ ಮುಖಂಡರು ಹಾಗೂ ತಾರತಮ್ಯ ವಿರೋಧಿ ವಿದ್ಯಾರ್ಥಿಗಳ ಸಂಘಟನೆ ಮುಖಂಡರ ಜೊತೆ ಚರ್ಚೆ ನಡೆಸಿದ ಬಳಿಕ ರಾಷ್ಟ್ರಪತಿಯವರು ಈ ನಿರ್ಧಾರವನ್ನು ಘೋಷಿಸಿದ್ದಾರೆ.
ಮತ್ತೊಂದೆಡೆ ಶೇಖ್ ಹಸೀನಾ ಅವರ ಬದ್ಧ ವಿರೋಧಿ ಜೈಲಿನಲ್ಲಿದ್ದ ಮಾಜಿ ಪ್ರಧಾನಿ ಖಲೀದಾ ಜಿಯಾ ಅವರನ್ನೂ ಇಂದು ಬಿಡುಗಡೆಗೊಳಿಸಲಾಗಿದೆ.
ಜಿಯಾರನ್ನು 2018ರಲ್ಲಿ ಭ್ರಷ್ಟಾಚಾರ ಪ್ರಕರಣದಲ್ಲಿ ಅರೆಸ್ಟ್ ಮಾಡಲಾಗಿತ್ತು. ಶಹಾಬುದ್ದೀನ್ ನೇತೃತ್ವದ ಸಭೆಯಲ್ಲಿ ಬಾಂಗ್ಲಾದೇಶ ನ್ಯಾಶನಲಿಸ್ಟ್ ಪಾರ್ಟಿ (ಬಿಎನ್‌ಪಿ) ಅಧ್ಯಕ್ಷೆ ಬೇಗಂ ಖಲೀದಾ ಜಿಯಾ ಅವರನ್ನು ತಕ್ಷಣವೇ ಬಿಡುಗಡೆ ಮಾಡಲು ಸರ್ವಾನುಮತದ ನಿರ್ಧಾರವನ್ನು ತೆಗೆದುಕೊಳ್ಳಲಾಗಿದೆ ಎಂದು ಅಧ್ಯಕ್ಷರ ಪತ್ರಿಕಾ ತಂಡವು ಹೇಳಿಕೆಯಲ್ಲಿ ತಿಳಿಸಿದೆ.
ಸಭೆಯಲ್ಲಿ ಸೇನಾ ಮುಖ್ಯಸ್ಥ ಜನರಲ್ ವಕಾರ್ ಉಜ್ ಜಮಾನ್, ನೌಕಾಪಡೆ ಮತ್ತು ವಾಯುಪಡೆ ಮುಖ್ಯಸ್ಥರು ಮತ್ತು ಬಿಎನ್‌ಪಿ, ಜಮಾತ್-ಎ-ಇಸ್ಲಾಮಿ ಪಾರ್ಟಿ ಸೇರಿದಂತೆ ಹಲವು ವಿರೋಧ ಪಕ್ಷಗಳ ಉನ್ನತ ನಾಯಕರು ಉಪಸ್ಥಿತರಿದ್ದರು.