Wednesday, August 10, 2022

Latest Posts

ಜಿಲ್ಲಾಡಳಿತದಿಂದ ಅಂಕಿತಾ ಸುರೇಶ್‌ಗೆ ಆತ್ಮೀಯ ಸನ್ಮಾನ

ಪ್ರೀತಿಯ ಓದುಗರೇ,
ಕೋವಿಡ್ ನಿರ್ನಾಮ ನಮ್ಮ ಕೈಯಲ್ಲೇ ಇದೆ. ಮಾಸ್ಕ್ ಧರಿಸಿ, ಸಾಮಾಜಿಕ ಅಂತರ ಕಾಯ್ದುಕೊಳ್ಳಿ, ಕೈ, ಮುಖವನ್ನು ಸ್ವಚ್ಛವಾಗಿ ಇಟ್ಟುಕೊಳ್ಳಿ. ನೀವೂ ಸುರಕ್ಷಿತರಾಗಿರಿ, ನಿಮ್ಮವರನ್ನೂ ಸುರಕ್ಷಿತರಾಗಿ ಇರುವಂತೆ ನೋಡಿಕೊಳ್ಳಿ.
………………………………………………………………………..

ಹೊಸ ದಿಗಂತ ವರದಿ, ಮಡಿಕೇರಿ:

ಟೋಕಿಯೊದಲ್ಲಿ ನಡೆದ ಒಲಂಪಿಕ್ಸ್ ನಲ್ಲಿ ಭಾರತದ ಮಹಿಳೆಯರ ಹಾಕಿ ತಂಡದ ಸಹಾಯಕ ಹಾಕಿ ತರಬೇತುದಾರರಾಗಿ ಕಾರ್ಯ ನಿರ್ವಹಿಸಿದ ಬಿ.ಎಸ್.ಅಂಕಿತಾ ಸುರೇಶ್ ಅವರಿಗೆ ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್ ಹಾಗೂ ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆ ವತಿಯಿಂದ ಆತ್ಮೀಯವಾಗಿ ಗೌರವಿಸಲಾಯಿತು.
ನಗರದ ಜಿಲ್ಲಾ ಪಂಚಾಯತ್ ಸಭಾಂಗಣದಲ್ಲಿ ಮಂಗಳವಾರ ಸಂಜೆ ನಡೆದ ಅಭಿನಂದನಾ ಸಮಾರಂಭದಲ್ಲಿ ಅಂಕಿತಾ ಸುರೇಶ್ ಅವರಿಗೆ ಶಾಲು, ಮೈಸೂರು ಪೇಟ, ಪುಸ್ತಕ, ಪ್ರಶಸ್ತಿ ಪತ್ರ ಮತ್ತಿತರವನ್ನು ನೀಡಿ ಹೃದಯ ಪೂರ್ವಕವಾಗಿ ಸನ್ಮಾನಿಸಲಾಯಿತು.
ಸನ್ಮಾನ ಸ್ವೀಕರಿಸಿ ಮಾತನಾಡಿದ ಅಂಕಿತಾ ಸುರೇಶ್ ಅವರು, ಹಿರಿಯರ ಮಾರ್ಗದರ್ಶನ, ವ್ಯಾಸಂಗ ಮಾಡುವ ಸಂದರ್ಭದಲ್ಲಿ ಹಾಕಿ ತರಬೇತುದಾರರು, ಶಿಕ್ಷಕರು, ಕುಟುಂಬದವರು ಹೀಗೆ ಎಲ್ಲರ ಸಹಕಾರ ಮತ್ತು ಪ್ರೋತ್ಸಾಹದಿಂದ ಹಾಕಿ ಕ್ರಿಡಾ ತಂಡದ ಸಹಾಯಕ ತರಬೇತುದಾರರಾಗುವ ಹಂತಕ್ಕೆ ತಲುಪಲು ಸಾಧ್ಯವಾಯಿತು ಎಂದು ಸ್ಮರಿಸಿದರು.
ಜಿಲ್ಲೆಯಲ್ಲಿ ಸಾಕಷ್ಟು ಪ್ರತಿಭಾವಂತ ಕ್ರೀಡಾಪಟುಗಳು ಇದ್ದು, ಕ್ರೀಡಾಪಟುಗಳಿಗೆ ಅಗತ್ಯ ಸಹಕಾರ ಮತ್ತು ಪ್ರೋತ್ಸಾಹ ನೀಡಿದ್ದಲ್ಲಿ ರಾಷ್ಟ್ರ ಮತ್ತು ಅಂತರ‌ರಾಷ್ಟ್ರೀಯ ಮಟ್ಟದ ಕ್ರೀಡಾಕೂಟಗಳಲ್ಲಿ ಪಾಲ್ಗೊಂಡು, ಜಿಲ್ಲೆ, ರಾಜ್ಯ ಹಾಗೂ ರಾಷ್ಟ್ರಕ್ಕೆ ಕೀರ್ತಿ ತರಲಿದ್ದಾರೆ ಎಂದು ಅಂಕಿತಾ ಸುರೇಶ್ ಹೇಳಿದರು.
ಅಂಕಿತಾ ಸುರೇಶ್ ಅವರನ್ನು ಸನ್ಮಾನಿಸಿ ಮಾತನಾಡಿದ ಜಿಲ್ಲಾಧಿಕಾರಿ ಚಾರುಲತಾ ಸೋಮಲ್ ಅವರು, ಯಾವುದೇ ಕ್ರೀಡಾಕೂಟದಲ್ಲಿ ಕ್ರೀಡಾಪಟುಗಳನ್ನು ಪ್ರೋತ್ಸಾಹಿಸುವಲ್ಲಿ ಮತ್ತು ಆತ್ಮವಿಶ್ವಾಸ ತುಂಬುವಲ್ಲಿ ಕ್ರೀಡಾ ತರಬೇತುದಾರರ ಪಾತ್ರ ಅತಿ ಅಮೂಲ್ಯವಾಗಿದೆ ಎಂದು ನುಡಿದರು.
ಅಂಕಿತಾ ಸುರೇಶ್ ಅವರು ಚಿಕ್ಕ ವಯಸ್ಸಿನಲ್ಲಿಯೇ ಅಂತರರಾಷ್ಟ್ರೀಯ ಮಟ್ಟದಲ್ಲಿ ಒಳ್ಳೆಯ ಸಾಧನೆ ಮಾಡಿ ಜಿಲ್ಲೆ, ರಾಜ್ಯ ಮತ್ತು ರಾಷ್ಟ್ರಕ್ಕೆ ಒಳ್ಳೆಯ ಹೆಸರು ತಂದಿದ್ದಾರೆ ಎಂದು ಜಿಲ್ಲಾಧಿಕಾರಿ ಶ್ಲಾಘಿಸಿದರು.
ಜಿಲ್ಲೆಯ ಕ್ರೀಡಾಪಟುಗಳಿಗೆ ಹೆಚ್ಚಿನ ಪ್ರೋತ್ಸಾಹ ನೀಡುವಲ್ಲಿ ಜಿಲ್ಲಾಡಳಿತ ವತಿಯಿಂದ ಅಗತ್ಯ ಸಹಕಾರ ನೀಡಲಾಗುವುದು ಎಂದು ಜಿಲ್ಲಾಧಿಕಾರಿ ಚಾರುಲತಾ ಸೋಮಲ್ ಅವರು ಹೇಳಿದರು.
ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಕ್ಷಮಾ ಮಿಶ್ರಾ ಅವರು ಮಾತನಾಡಿ, ಅಂಕಿತಾ ಸುರೇಶ್ ಅವರು ಭಾರತ ಮಹಿಳಾ ಹಾಕಿ ತಂಡದ ಸಹಾಯಕ ತರಬೇತುದಾರರಾಗಿ ಕರ್ತವ್ಯ ನಿರ್ವಹಿಸಿ, ಟೋಕಿಯೊ ಒಲಂಪಿಕ್ಸ್ ಮಹಿಳಾ ಹಾಕಿ ತಂಡವು ಉತ್ತಮ ಸಾಧನೆ ಮಾಡಿದ್ದು ಮರೆಯುವಂತಿಲ್ಲ ಎಂದರು.
ಕೂಡಿಗೆ ಕ್ರೀಡಾ ಶಾಲೆಯ ಅಥ್ಲೆಟಿಕ್ ತರಬೇತುದಾರ ಅಂತೋಣಿ ಡಿಸೋಜಾ ಅವರು ಅಂಕಿತಾ ಸುರೇಶ ಅವರ ಕುರಿತು ಕಿರು ಪರಿಚಯ ಮಾಡಿದರು.
ಉಪ ವಿಭಾಗಾಧಿಕಾರಿ ಈಶ್ವರ ಕುಮಾರ್ ಖಂಡೂ, ಅಂಕಿತಾ ಸುರೇಶ್ ಕುಟುಂಬದವರು, ಇತರರು ಇದ್ದರು.
ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆಯ ಸಹಾಯಕ ನಿರ್ದೇಶಕ ಜಿ.ಎಸ್.ಗುರುಸ್ವಾಮಿ ಸ್ವಾಗತಿಸಿದರೇ, ಕೂಡಿಗೆ ಕ್ರೀಡಾ ಶಾಲೆಯ ಪ್ರಾಂಶುಪಾಲ ದೇವಕುಮಾರ್ ನಿರೂಪಿಸಿದರು. ಅಂತೋಣಿ ಡಿಸೋಜಾ ಪ್ರಾರ್ಥಿಸಿದರೆ, ಮುರಳಿ ವಂದಿಸಿದರು.

ಈ ಸುದ್ದಿ ಇತರರೊಂದಿಗೂ ಹಂಚಿಕೊಳ್ಳಿ

Whatsapp Group
Telegram

Latest Posts

Don't Miss