ದಿವ್ಯಾ ಹಾಗರಗಿ ನಮ್ಮ ಪಕ್ಷದ ಕಾರ್ಯಕರ್ತರೂ ಅಲ್ಲ: ಸಚಿವ ಆರ್.ಅಶೋಕ್

ಹೊಸದಿಗಂತ ವರದಿ,ದಾವಣಗೆರೆ:

ಪಿಎಸ್ಐ ನೇಮಕಾತಿ ಅಕ್ರಮದ ಆರೋಪಿ ದಿವ್ಯಾ ಹಾಗರಗಿ ಅವರಿಗೂ ನಮ್ಮ ಪಕ್ಷಕ್ಕೂ ಸಂಬಂಧವಿಲ್ಲ, ಅವರು ನಮ್ಮ ಪಕ್ಷದ ಕಾರ್ಯಕರ್ತರೂ ಅಲ್ಲ ಎಂದು ಕಂದಾಯ ಸಚಿವ ಆರ್.ಅಶೋಕ ಸ್ಪಷ್ಟಪಡಿಸಿದ್ದಾರೆ.
ನಗರದ ಜಿಎಂಐಟಿ ಅತಿಥಿ ಗೃಹದಲ್ಲಿ ಮಂಗಳವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಪಕ್ಷದ ಕಾರ್ಯಕರ್ತರೆಂದರೆ ಅದಕ್ಕೆ ಆದಂತಹ ಮಾನದಂಡಗಳಿವೆ. ಈಗಾಗಲೇ ಅಲ್ಲಿನ ಬಿಜೆಪಿ ಜಿಲ್ಲಾಧ್ಯಕ್ಷರೂ ಇದೇ ಮಾತನ್ನು ಸ್ಪಷ್ಟಪಡಿಸಿದ್ದಾರೆ. ಮುಖ್ಯಮಂತ್ರಿಗಳ ವಿವೇಚನಾಧಿಕಾರದಲ್ಲಿ ಯಾರನ್ನು ಬೇಕಾದರೂ ನಾಮ ನಿರ್ದೇಶನ ಮಾಡಬಹುದು. ಹಾಗೆಂದ ಮಾತ್ರಕ್ಕೆ ಬಿಜೆಪಿ ಕಾರ್ಯಕರ್ತರೆಂದು ಹೇಳಲಾಗದು. ನಮ್ಮ ಪಕ್ಷದಿಂದ ಯಾರನ್ನೂ ನಾಮ ನಿರ್ದೇಶನ ಮಾಡಿಲ್ಲ ಎಂದರು.
ಕೆ.ಎಸ್.ಈಶ್ವರಪ್ಪ ಮೇಲ್ನೋಟಕ್ಕೆ ತಪ್ಪಿತಸ್ಥರಲ್ಲ. ಆದರೆ, ಬೆಳಗಾವಿ ಮೂಲದ ಗುತ್ತಿಗೆದಾರ ಸಂತೋಷ ಪಾಟೀಲ್ ಪ್ರಕರಣದಲ್ಲಿ ವಿನಾಕಾರಣ ಈಶ್ವರಪ್ಪ ಹೆಸರು ಎಳೆದು ತರಲಾಗಿದೆ. ಆತ್ಮಹತ್ಯೆ ಮಾಡಿಕೊಂಡ ಗುತ್ತಿಗೆದಾರ ಸಂತೋಷ ಪಾಟೀಲ್ ಕಾಂಗ್ರೆಸ್ ಪಕ್ಷದವರು. ಮೃತ ಗುತ್ತಿಗೆದಾರ ಹಿಂದೆ ಕಾಂಗ್ರೆಸ್ ಪಕ್ಷದಲ್ಲಿದ್ದರೆಂಬ ಮಾಹಿತಿ ಇದೆ. ಪ್ರಕರಣ ಈಗ ತನಿಖಾ ಹಂತದಲ್ಲಿರುವುದರಿಂದ ಹೆಚ್ಚು ಮಾತನಾಡುವುದಕ್ಕೆ ಆಗುವುದಿಲ್ಲ. ಬೇರೆಯವರು ಕಾಮಗಾರಿ ಮಾಡಿದ್ದು, ಅಂತಹವರ ಕೈಕೆಳಗೆ ಸಬ್ ಕಾಂಟ್ರ್ಯಾಕ್ಟರ್ ಆಗಿ ಸಂತೋಷ ಪಾಟೀಲ್ ಕೆಲಸ ಮಾಡುತ್ತಿದ್ದರು. ದುಡ್ಡು ಹಾಕಿರುವವರೇ ಬೇರೆ. ಕೆಲಸ ಮಾಡಿರುವುದಕ್ಕೆ ಹಣ ಕೊಟ್ಟಿದ್ದಾರೆ ಎಂಬ ವಿಚಾರವೂ ಗೊತ್ತಾಗಿದೆ. ತನಿಖೆ ನಂತರ ಸತ್ಯಾಸತ್ಯತೆ ಬಯಲಿಗೆ ಬರಲಿದೆ ಎಂದು ಅವರು ಪ್ರಶ್ನೆಯೊಂದಕ್ಕೆ ಪ್ರತಿಕ್ರಿಯಿಸಿದರು.
ಉತ್ತರ ಪ್ರದೇಶ ಸೇರಿದಂತೆ ಅನೇಕ ಕಡೆ ಕಾಂಗ್ರೆಸ್ ಠೇವಣಿ ಕಳೆದುಕೊಂಡಿದೆ. ಮುಂಬರುವ ವಿಧಾನಸಭೆ ಚುನಾವಣೆಯಲ್ಲಿ ನಮ್ಮ ರಾಜ್ಯದಲ್ಲೂ ಕಾಂಗ್ರೆಸ್ ಪಕ್ಷಕ್ಕೆ ಅದೇ ಸ್ಥಿತಿ ಬರಲಿದೆ. ರಾಜ್ಯದಲ್ಲೂ ಕಾಂಗ್ರೆಸ್ ಠೇವಣಿಯನ್ನು ಕಳೆದುಕೊಳ್ಳುವ ದಿನಗಳು ದೂರವಿಲ್ಲ ಎಂದು ಅವರು ಹೇಳಿದರು.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!