ದಿಗಂತ ವರದಿ ರಾಮನಗರ :
ಕೊರೋನಾ ಎರಡನೇ ಅಲೆ ಪ್ರಾರಂಭವಾಗಿರುವ ಹಿನ್ನೆಲೆ ದೇಶದ ಮೂಲೆ-ಮೂಲೆಗಳಲ್ಲಿ ಜನರು ತತ್ತರಿಸಿ ಹೋಗಿದ್ದಾರೆ. ಅದರಲ್ಲಿಯೂ ವಿಶೇಷವಾಗಿ ರೇಷ್ಮೆನಗರಿ ರಾಮನಗರ ಜಿಲ್ಲೆಯಲ್ಲಿಯೂ ಸಹ ಜನರು ಕೊರೋನಾ ಎರಡನೇ ಅಲೆಗೆ ಬೇಸತ್ತಿದ್ದಾರೆ. ಎರಡನೇ ಕೊರೋನಾ ಅಲೆ ಪ್ರಾರಂಭವಾದ ಮೇಲೆ ರಾಮನಗರ ಜಿಲ್ಲೆಯಲ್ಲಿ ಪ್ರತಿದಿನವೂ ಸಹ 100 ಕೇಸ್ ಗಳ ಮೇಲೆ ಪ್ರಕರಣಗಳು ದಾಖಲಾಗುತ್ತಿವೆ. ಈಗಾಗಲೇ ರಾಮನಗರ ಜಿಲ್ಲೆಯಲ್ಲಿ 12 ಸಾವಿರಕ್ಕೂ ಹೆಚ್ಚು ಕೊರೋನಾ ಪಾಸಿಟಿವ್ ಕೇಸ್ ಪತ್ತೆಯಾಗಿವೆ. ಈ ಮಧ್ಯೆ ಜಿಲ್ಲೆಯ ಜನಪ್ರತಿನಿಧಿಗಳಾದ ಮಾಜಿ ಸಿಎಂ ಹೆಚ್.ಡಿ. ಕುಮಾರಸ್ವಾಮಿ, ಮಾಗಡಿ ಶಾಸಕ ಎ. ಮಂಜುಗೆ ಕೊರೋನಾ ಪಾಸಿಟಿವ್ ಕಾಣಿಸಿಕೊಂಡಿದೆ. ಆದರೆ, ಇದರ ಮಧ್ಯೆಯೂ ಸಹ ಸಂಸದ ಡಿ.ಕೆ. ಸುರೇಶ್ ವಿಭಿನ್ನವಾಗಿ ಕಾಣಿಸಿಕೊಂಡಿದ್ದಾರೆ.
ಕೊರೋನಾ ಕಾಲದಲ್ಲಿ ಜನರ ಮಧ್ಯೆ ಬೆರೆಯುವುದೇ ಕಷ್ಟವಾಗಿದೆ.ಅದರಲ್ಲಿಯೂ ಕೆಲ ಜನಪ್ರತಿನಿಧಿಗಳು ಮಾತ್ರ ಕೊರೋನಾ ಎರಡನೇ ಪ್ರಾರಂಭವಾದ ನಂತರ ಜನರ ಮಧ್ಯೆ ಕಾಣುಸಿಕೊಳ್ಳುವುದೇ ವಿರಳವಾಗಿದೆ. ಕನಕಪುರದ ಮುಳ್ಳಹಳ್ಳಿ ಗ್ರಾಮ ಪಂಚಾಯತ್ ನ ಮಾಜಿ ಉಪಾಧ್ಯಕ್ಷರಾಗಿ ಕಾರ್ಯನಿರ್ವಹಿಸಿದ್ದ ಲೋಕೇಶ್ ಎಂಬಾತ ಕೊರೋನಾ ಸೋಂಕಿನಿಂದ ಸಾವನ್ನಪ್ಪಿದ್ದರು. ಇವರ ಅಂತ್ಯಕ್ರಿಯೆಯಲ್ಲಿ ಸ್ವತಃ ಸಂಸದ ಡಿ.ಕೆ. ಸುರೇಶ್ ಭಾಗಿಯಾಗಿ ಮೃತರ ಕುಟುಂಬಸ್ಥರಿಗೆ ಧೈರ್ಯ ತುಂಬುವ ಕೆಲಸ ಮಾಡಿದ್ದಾರೆ. ಆರೋಗ್ಯ ಇಲಾಖೆಯ ಸಿಬ್ಬಂದಿಗಳ ಜೊತೆಗೆ ಸ್ವತಃ ತಾವೇ ಭಾಗಿಯಾಗಿ ಕೊರೋನಾ ಸೋಂಕಿತನ ಅಂತ್ಯಕ್ರಿಯೆ ನೆರವೇರಿಸಿದ್ದಾರೆ. ಈ ಮೂಲಕ ಸಮಾಜಕ್ಕೆ ಸ್ಪಷ್ಟ ಸಂದೇಶ ನೀಡಿರುವ ಡಿ.ಕೆ. ಸುರೇಶ್ ಕೊರೋನಾ ಸೋಂಕಿತರ ವಿಚಾರವಾಗಿ ಯಾರು ಸಹ ಕೀಳರಿಮೆ ಇಟ್ಟುಕೊಳ್ಳಬಾರದೆಂದು ತಿಳಿಸಿದ್ದಾರೆ.
ಕೊರೋನಾ ಮೊದಲನೇ ಅಲೆ ಬಂದಾಗಲೂ ಸಹ ಡಿ.ಕೆ. ಸುರೇಶ್ ರಾಮನಗರ ಜಿಲ್ಲೆಯಲ್ಲಿ ಉತ್ತಮವಾಗಿ ಕಾರ್ಯ ನಿರ್ವಹಿಸಿದ್ದರು. ಸರಿಸುಮಾರು 2 ಲಕ್ಷ ಮಾಸ್ಕ್ ಗಳನ್ನ ಜಿಲ್ಲೆಯ ಜನರಿಗೆ ಹಂಚಿಕೆ ಮಾಡಿದ್ದರು. ಇದರ ಜೊತೆಗೆ 17 ಸಾವಿರ ಲೀಟರ್ ಸ್ಯಾನಿಟೈಜರ್ ಅನ್ನು ಆಶಾಕಾರ್ಯಕರ್ತರ ಮೂಲಕ ನೀಡಲಾಗಿತ್ತು. ಇದರ ಜೊತೆಗೆ ಜಿಲ್ಲೆಯ ಕ್ವಾರಂಟೈನ್ ಸೆಂಟರ್ ಗಳಲ್ಲಿ ಚಿಕಿತ್ಸೆ ಪಡೆಯುತ್ತಿದ್ದ ಕೊರೋನಾ ಸೋಂಕಿತರಿಗೆ ತಮ್ಮ ಡಿ.ಕೆ.ಎಸ್ ಚಾರಿಟೆಬಲ್ ಟ್ರಸ್ಟ್ ನಿಂದ ಬೆಳಗ್ಗೆ ತಿಂಡಿಯ ಜೊತೆಗೆ ಮಧ್ಯಾಹ್ನ, ರಾತ್ರಿಯ ಊಟದ ವ್ಯವಸ್ಥೆಯನ್ನ ಮಾಡಲಾಗಿತ್ತು.