ಕೇಂದ್ರ ಪರಿಸರ ಸಚಿವರನ್ನು ಭೇಟಿಯಾದ ಡಿಕೆಶಿ: ಕಳಸಾ-ಬಂಡೂರಿ ಯೋಜನೆಗೆ ಶೀಘ್ರ ಅನುಮತಿಗೆ ಮನವಿ!

ಹೊಸದಿಗಂತ ಡಿಜಿಟಲ್ ಡೆಸ್ಕ್: 

ಕೇಂದ್ರ ಪರಿಸರ ಸಚಿವ ಭೂಪೇಂದರ್ ಯಾದವ್ ಅವರನ್ನು ಉಪಮುಖ್ಯಮಂತ್ರಿ ಡಿಕೆ ಶಿವಕುಮಾರ್ ಅವರು ಬುಧವಾರ ಭೇಟಿ ಮಾಡಿ, ಕಳಸಾ-ಬಂಡೂರಿ ನೀರಾವರಿ ಯೋಜನೆಗೆ ಪರಿಸರ ಅನುಮತಿಯನ್ನು ತ್ವರಿತವಾಗಿ ನೀಡುವಂತೆ ಮನವಿ ಮಾಡಿದ್ದಾರೆ.

ಕಳಸಾ-ಬಂಡೂರಿ ಯೋಜನೆಯು ರಾಜ್ಯದ ನೀರಿನ ಅಗತ್ಯಗಳಿಗೆ ನಿರ್ಣಾಯಕವಾಗಿದ್ದು, ಇದಕ್ಕೆ ಅಗತ್ಯವಿರುವ ಅರಣ್ಯ ಹಾಗೂ ವನ್ಯಜೀವಿ ಮಂಡಳಿ ಅನುಮತಿ ಕೊಡಿಸಬೇಕು ಎಂದು ಮನವಿ ಸಲ್ಲಿಸಿದರು.

ಕಳಸಾ-ಬಂಡೂರಿ ಯೋಜನೆಗೆ ಕಾಳಿ ಹಾಗೂ ಸಹ್ಯಾದ್ರಿ ಹುಲಿ ಸಂರಕ್ಷಣಾ ಪ್ರದೇಶದಲ್ಲಿ 10.6852 ಹೆಕ್ಟೇರ್ ಅರಣ್ಯ ಭೂಮಿ ಅಗತ್ಯವಿದೆ. ಬೆಳಗಾವಿ ಜಿಲ್ಲೆಯ ಖಾನಾಪುರ ತಾಲ್ಲೂಕಿನ ಕಣಕುಂಬಿ ಸುತ್ತಲಿನ ಹಳ್ಳಿಗಳ ಪ್ರದೇಶವನ್ನು ಇದು ಹೊಂದಿದೆ. ಇದರಲ್ಲಿ ಜಾಕ್ ವೆಲ್ ಸಹಿತ ಪಂಪ್ ಹೌಸ್, ವಿದ್ಯುತ್ ಉಪಕೇಂದ್ರಗಳನ್ನು ನಿರ್ಮಾಣ ಮಾಡಲಾಗುವುದು ಎಂದು ಡಿಸಿಎಂ ಕೇಂದ್ರ ಸಚಿವರಿಗೆ ನೀಡಿದ ಮನವಿ ಪತ್ರದಲ್ಲಿ ವಿವರಿಸಿದ್ದಾರೆ.

ಅಕ್ಟೋಬರ್ 9 ರಂದು ಕೇಂದ್ರ ಸಚಿವ ಭೂಪೇಂದರ್ ಯದಾವ್ ನೇತೃತ್ವದಲ್ಲಿ ನಡೆದ ಸ್ಥಾಯಿ ಸಮಿತಿಯ 80ನೇ ಸಭೆಯಲ್ಲಿ ಈ ಪ್ರಸ್ತಾವನೆ ಬಗ್ಗೆ ವಿಸ್ತೃತವಾಗಿ ಚರ್ಚಿಸಲಾಗಿದ್ದು, ಗೋವಾದ ವನ್ಯಜೀವಿ ಮಂಡಳಿ ಮುಖ್ಯಸ್ಥರು ವನ್ಯಜೀವಿ ಸಂರಕ್ಷಣಾ ಕಾಯ್ದೆ 1972 ಸೆಕ್ಷನ್ 29 ಅನ್ನು ಪ್ರಸ್ತಾಪಿಸಿ ಈ ಯೋಜನೆ ಕಾಮಗಾರಿಗೆ ಆಕ್ಷೇಪ ವ್ಯಕ್ತಪಡಿಸಿದ್ದರು. ಇದಕ್ಕೆ ಪ್ರತಿಯಾಗಿ ಕರ್ನಾಟಕ ರಾಜ್ಯವು ಸುಪ್ರೀಂ ಕೋರ್ಟ್ ಮುಂದೆ ಸೂಕ್ತ ದಾಖಲೆಗಳನ್ನು ಸಲ್ಲಿಸಿದೆ ಎಂದು ಹೇಳಿದ್ದಾರೆ.

ಈ ಎಲ್ಲಾ ವಿಚಾರವಾಗಿ ಕರ್ನಾಟಕ ಸರ್ಕಾರದ ಅರಣ್ಯ ಮತ್ತು ಪರಿಸರ ಇಲಾಖೆಯ ಹೆಚ್ಚುವರಿ ಮುಖ್ಯ ಕಾರ್ಯದರ್ಶಿಗಳು ಸ್ಪಷ್ಟನೆ ನೀಡಿದ್ದು, ಸುಪ್ರೀಂ ಕೋರ್ಟ್ ಈ ಯೋಜನೆ ಜಾರಿ ವಿಚಾರದಲ್ಲಿ ಕರ್ನಾಟಕ ರಾಜ್ಯಕ್ಕೆ ಯಾವುದೇ ಆಕ್ಷೇಪ ವ್ಯಕ್ತಪಡಿಸಿಲ್ಲ. ಇದರ ಜತೆಗೆ ಕಾನೂನು ಪ್ರಕಾರವಾಗಿ ಕೇಂದ್ರ ಸರ್ಕಾರದ ಎಲ್ಲಾ ಅನುಮತಿಗಳು ಸಿಕ್ಕ ನಂತರವಷ್ಟೇ ಈ ಯೋಜನೆ ಕಾಮಗಾರಿ ಕೈಗೊಳ್ಳಲು ನಿರ್ಧರಿಸಿದೆ ಎಂದು ಡಿಸಿಎಂ ಮಾಹಿತಿ ನೀಡಿದ್ದಾರೆ.

ಇನ್ನು ಕೇಂದ್ರ ಆಹಾರ ಸಚಿವ ಪ್ರಹ್ಲಾದ್ ಜೋಶಿ ಅವರನ್ನು ಭೇಟಿ ಡಿಸಿಎಂ ಡಿಕೆ ಶಿವಕುಮಾರ್ ಭೇಟಿ ಮಾಡಿದ್ದು, ಮೇಕೆದಾಟು ನೀರಾವರಿ ಯೋಜನೆ ಸೇರಿದಂತೆ ಹಲವು ನೀರಾವರಿ ಯೋಜನೆಗಳಿಗೆ ಅನುಮತಿ ಪಡೆಯುವ ತುರ್ತು ಅಗತ್ಯದ ಬಗ್ಗೆ ಮತ್ತು ನೀರು ಹಂಚಿಕೆ ವಿವಾದಗಳನ್ನು ಪರಿಹರಿಸುವ ಕುರಿತು ಚರ್ಚಿಸಿದರು.

- Advertisement - Prestige

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!