Monday, August 15, 2022

Latest Posts

ಕೋವಿಡ್ ನಿಯಂತ್ರಣಕ್ಕೆ ಡಿಎಂಎಫ್ ಹಣ ಬಳಕೆ, ಜೀವ ಉಳಿಸುವುದಕ್ಕೆ ಹೆಚ್ಚಿನ ಆದ್ಯತೆ: ಸಚಿವ ಆನಂದಸಿಂಗ್

ಪ್ರೀತಿಯ ಓದುಗರೇ,
ಕೋವಿಡ್ ನಿರ್ನಾಮ ನಮ್ಮ ಕೈಯಲ್ಲೇ ಇದೆ. ಮಾಸ್ಕ್ ಧರಿಸಿ, ಸಾಮಾಜಿಕ ಅಂತರ ಕಾಯ್ದುಕೊಳ್ಳಿ, ಕೈ, ಮುಖವನ್ನು ಸ್ವಚ್ಛವಾಗಿ ಇಟ್ಟುಕೊಳ್ಳಿ. ನೀವೂ ಸುರಕ್ಷಿತರಾಗಿರಿ, ನಿಮ್ಮವರನ್ನೂ ಸುರಕ್ಷಿತರಾಗಿ ಇರುವಂತೆ ನೋಡಿಕೊಳ್ಳಿ.
…………………………………………………..

ಹೊಸದಿಗಂತ ವರದಿ, ಬಳ್ಳಾರಿ:

ಜಿಲ್ಲೆಯಲ್ಲಿ ಕೋವಿಡ್ ನಿಯಂತ್ರಣಕ್ಕೆ ನಮ್ಮಲ್ಲಿ ಹಣದ ಕೊರತೆ ಇಲ್ಲ ಮತ್ತು ಸರಕಾರದ ಬಳಿ ಕೈಚಾಚುವ ಪ್ರಶ್ನೆಯೇ ಇಲ್ಲ;ನಮ್ಮಲ್ಲಿ ಜಿಲ್ಲಾ ಖನಿಜ ನಿಧಿ ಅಡಿ ಅಪಾರ ಪ್ರಮಾಣದ ಹಣವಿದ್ದು,ಅದನ್ನು ಬಳಸಿಕೊಂಡು ಕೋವಿಡ್ ನಿಯಂತ್ರಣಕ್ಕೆ ಕ್ರಮ ವಹಿಸಲಾಗುವುದು ಮತ್ತು ಜೀವ ಉಳಿಸುವುದಕ್ಕೆ ಹೆಚ್ಚಿನ ಆದ್ಯತೆ ನೀಡಲಾಗುವುದು ಎಂದು ಮೂಲಸೌಕರ್ಯ ಅಭಿವೃದ್ಧಿ, ಹಜ್ ಮತ್ತು ವಕ್ಫ್ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಆನಂದಸಿಂಗ್ ಅವರು ಹೇಳಿದರು.
ನಗರದ ಬಿಡಿಎಎ ಫುಟ್ಬಾಲ್ ಮೈದಾನದ ಸಭಾಂಗಣದಲ್ಲಿ ಸೋಮವಾರ ಹಮ್ಮಿಕೊಂಡಿದ್ದ ಕೋವಿಡ್ ಪ್ರಗತಿ ಪರಿಶೀಲನಾ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.
ಕೋವಿಡ್ ನಿಯಂತ್ರಣಕ್ಕೆ ಸಂಬಂಧಿಸಿದಂತೆ ಜನಪ್ರತಿನಿಧಿಗಳು ನೀಡುವ ಸಲಹೆ-ಸೂಚನೆಗಳನ್ನು ಸ್ವೀಕರಿಸಿ ಅವುಗಳ ಅನುಷ್ಠಾನಕ್ಕೆ ಕ್ರಮವಹಿಸಲಾಗುವುದು ಎಂದು ಅವರು ತಿಳಿಸಿದರು.
ಈಗಾಗಲೇ ಪ್ರತಿ ತಾಲೂಕುಗಳಲ್ಲಿ ಕೋವಿಡ್ ಸಂಬಂಧಿಸಿದಂತೆ ಸಭೆ ನಡೆಸಿ ಕೋವಿಡ್ ಸೊಂಕಿತರಿಗೆ ಅಗತ್ಯ ಚಿಕಿತ್ಸೆ ಮತ್ತು ನಿಯಂತ್ರಣ ಮಾಡುವ ನಿಟ್ಟಿನಲ್ಲಿ ಕ್ರಮವಹಿಸಲಾಗಿದೆ ಎಂದರು.
ಸೊಂಕಿನ ಪ್ರಕರಣಗಳು ವರದಿಯಾದ ಕಡೆ ಈ ಮುಂಚೆ ಮಾಡಿದಂತೆ ಅತ್ಯಂತ ಆ್ಯಕ್ಟಿವ್ ಆಗಿ ಸ್ಯಾನಿಟೈಸೇಶನ್ ಮಾಡುವಂತೆ ಜಿಲ್ಲಾಧಿಕಾರಿಗಳಿಗೆ ಸೂಚಿಸಿದರು.
3ನೇ ಅಲೆ ಬರದಂತೆ ತಡೆಗಟ್ಟುವ ಹಾಗೂ ಅಗತ್ಯ ಸಿದ್ಧತೆ ಕೈಗೊಳ್ಳುವ ನಿಟ್ಟಿನಲ್ಲಿ ಪ್ರತಿ ತಾಲೂಕು ಆಸ್ಪತ್ರೆಗಳಲ್ಲಿ 10ವೆಂಟಿಲೇಟರ್ ವ್ಯವಸ್ಥೆ ಹಾಗೂ 10ಬ್ಯೂರೋ ಸಿಲಿಂಡರ್‍ಗಳ ವ್ಯವಸ್ಥೆ ಮಾಡಲು ಉದ್ದೇಶಿಸಲಾಗಿದೆ ಎಂದರು.
ಈಗಾಗಲೇ ರಾಜ್ಯ ಸರಕಾರದಿಂದ 40 ವೆಂಟಿಲೇಟರ್ ಗಳು ಬಳ್ಳಾರಿಗೆ ಬಂದಿವೆ ಎಂದರು.
ಹೆಚ್ಚಿನ ಚಿಕಿತ್ಸೆ; ತಜ್ಞ ವೈದ್ಯರು ಹಾಗೂ ಸಿಬ್ಬಂದಿ ನೇಮಕಕ್ಕೆ ಕ್ರಮ:
ಬಳ್ಳಾರಿ ಮತ್ತು ವಿಜಯನಗರ ಜಿಲ್ಲೆಗಳಲ್ಲಿ ವಿಮ್ಸ್, ಜಿಲ್ಲಾ ಆಸ್ಪತ್ರೆ ಹಾಗೂ ಎಲ್ಲಾ ತಾಲ್ಲೂಕು ಮಟ್ಟದ ಆಸ್ಪತ್ರೆಗಳಲ್ಲಿ ಆಕ್ಸಿಜನೇಟೆಡ್ ಬೆಡ್‍ಗಳನ್ನು ಹೆಚ್ಚಿಸಿ ಹೆಚ್ಚಿನ ಸಂಖ್ಯೆಯ ಕೋಏಡ್-19 ಪ್ರಕರಣಗಳಿಗೆ ಚಿಕಿತ್ಸೆ ನೀಡಲು ಅಗತ್ಯವಾಗಿರುವ ತಜ್ಞ ವೈದ್ಯರು, ವೈದ್ಯರ, ಹಾಗೂ ಇತರೆ ಆರೋಗ್ಯ ಸಿಬ್ಬಂದಿಯವರನ್ನು ತಾತ್ಕಾಲಿಕವಾಗಿ ಡಿಎಂಎಫ್ ಅನುದಾನದಡಿ ನೇಮಕಕ್ಕೆ ಕ್ರಮವಹಿಸಲಾಗಿದೆ ಎಂದು ಜಿಲ್ಲಾ ಉಸ್ತುವಾರಿ ಸಚಿವ ಆನಂದಸಿಂಗ್ ಅವರು ತಿಳಿಸಿದರು.
ಹೆಚ್ಚುವರಿಯಾಗಿ 50 ವೆಂಟಿಲೇಟರ್‍ಗಳನ್ನು ಪೂರೈಸಲು ಸರಕಾರಕ್ಕೆ ಮನವಿ ಮಾಡಿಕೊಳ್ಳಲಾಗಿದ್ದು,40ವೆಂಟಿಲೇಟರ್‍ಗಳನ್ನು ಸರಕಾರದಿಂದ ಜಿಲ್ಲೆಗೆ ಹಂಚಿಕೆ ಮಾಡಿ ಪೂರೈಕೆ ಮಾಡಲು ಅನುಮತಿ ದೊರೆತಿದೆ. ಜಿಲ್ಲೆಯ ವಿಮ್ಸ್, ಜಿಲ್ಲಾಸ್ಪತ್ರೆ ಹಾಗೂ ತಾಲೂಕು ಮಟ್ಟದ ಆಸ್ಪತ್ರೆಗಳಲ್ಲಿ ಕೋವಿಡ್ ಪ್ರಕರಣಗಳ ಆರೈಕೆಗಾಗಿ ಐಸಿಯು ಬೆಡ್‍ಗಳನ್ನು ಹೆಚ್ಚಿಸಲಾಗಿದೆ ಎಂದರು.
ಜಿಂದಾಲ್ ಎದುರುಗಡೆ 1ಸಾವಿರ ಆಕ್ಸಿಜನ್ ಬೆಡ್ ತಾತ್ಕಾಲಿಕ ಆಸ್ಪತ್ರೆ:
ಜೆಎಸ್‍ಡಬ್ಲ್ಯೂ ಸಹಯೋಗದೊಂದಿಗೆ ತೋರಣಗಲ್ಲುವಿನಲ್ಲಿ 40 ಐಸಿಯು ಸೇರಿದಂತೆ ಒಟ್ಟು 1ಸಾವಿರ ಆಮ್ಲಜನಕಯುಕ್ತ ಹಾಸಿಗೆಗಳ ಕೋವಿಡ್ ಆಸ್ಪತ್ರೆಯನ್ನು ಸಿದ್ಧಪಡಿಸಲಾಗುತ್ತಿದ್ದು, ಇದಕ್ಕಾಗಿ ತಜ್ಞ ವೈದ್ಯರ ಹಾಗೂ ಸಿಬ್ಬಂದಿಯವರ ನೇಮಕಾತಿಗಾಗಿ ಪತ್ರಿಕಾ ಪ್ರಕಟಣೆ ಹೊರಡಿಸಲಾಗಿದೆ. ಅಲ್ಲದೆ ಸಿದ್ಧತೆಯ ಭರದಿಂದ ಸಾಗಿದ್ದು, ಶಿಘ್ರದಲ್ಲಿ ಸಂಪೂರ್ಣವಾಗಿ ಸಿದ್ಧವಾಗಿ ಕಾರ್ಯಾರಂಭವಾಗಲಿದೆ ಎಂದು ಸಚಿವ ಆನಂದಸಿಂಗ್ ಅವರು ತಿಳಿಸಿದರು.
ಜಿಲ್ಲೆಯಲ್ಲಿ 109 ಅಂಬ್ಯುಲೆನ್ಸ್‍ಗಳಿದ್ದು ಇನ್ನೂ ಹೆಚ್ಚುವರಿಯಾಗಿ ಅಂಬುಲೆನ್ಸ್‍ಗಳನ್ನು ಖರೀದಿಸಲಾಗುತ್ತಿದೆ ಎಂದರು.
*ಹಡಗಲಿ,ಹೊಸಪೇಟೆಯಲ್ಲಿ ವಿಆರ್ಡಿಎಲ್ ಲ್ಯಾಬ್ ಪರೀಕ್ಷಾ ಕೇಂದ್ರ:ಹೊಸದಾಗಿ ವಿಆರ್‍ಡಿಎಲ್ ಲ್ಯಾಬ್ ಪರೀಕ್ಷಾ ಕೇಂದ್ರಗಳನ್ನು ಹೊಸಪೇಟೆ ಮತ್ತು ಹೂವಿನಹಡಗಲಿ ತಾಲೂಕುಗಳಲ್ಲಿ ಆರಂಭಿಸಲು ಉದ್ದೇಶಿಸಲಾಗಿದೆ ಎಂದು ಜಿಲ್ಲಾ ಉಸ್ತುವಾರಿ ಸಚಿವ ಆನಂದಸಿಂಗ್ ತಿಳಿಸಿದರು. ಈ ಸಂದರ್ಭದಲ್ಲಿ ಸಚಿವರಾದ ಬಿ.ಶ್ರೀರಾಮುಲು ಸೇರಿದಂತೆ ಇತರರಿದ್ದರು.

ಈ ಸುದ್ದಿ ಇತರರೊಂದಿಗೂ ಹಂಚಿಕೊಳ್ಳಿ

Whatsapp Group
Telegram

Latest Posts

Don't Miss