ಪ್ರಧಾನಿ ಮೋದಿ ರೋಡ್ ಶೋಗೆ ಅನುಮತಿಕೊಡಬೇಡಿ: ಎಲೆಕ್ಷನ್‌ ಕಮಿಷನ್‌ಗೆ ಕಾಂಗ್ರೆಸ್ ದೂರು

ಹೊಸದಿಗಂತ ಡಿಜಿಟಲ್‌ ಡೆಸ್ಕ್:‌   

ರಾಜ್ಯ ಚುನಾವಣಾ ಪ್ರಚಾರದಲ್ಲಿ ಪ್ರಧಾನಿ ಮೋದಿ ಭರ್ಜರಿ ಮತಬೇಟೆ ಮಾಡುತ್ತಿದ್ದು, ಮೇ 6 ಮತ್ತು 7ರಂದು ಮತ್ತೊಮ್ಮೆ ರಾಜಧಾನಿ ಬೆಂಗಳೂರಿನಲ್ಲಿ ಮೆಗಾ ರೋಡ್ ಶೋ ನಡೆಸಲಿದ್ದು, 37 ಕಿಮೀ ಕ್ರಮಿಸಲಿದ್ದಾರೆ.

ಈ ಮೂಲಕ 18ಕ್ಕೂ ಹೆಚ್ಚು ಕ್ಷೇತ್ರಗಳಲ್ಲಿ ಮೋಡಿ ಮಾಡಲು ಪ್ಲ್ಯಾನ್‌ ಹೊಂದಿದ್ದಾರೆ. ಆದರೆ, ಇದಕ್ಕೆ ಈಗ ಕಾಂಗ್ರೆಸ್‌ ಅಪಸ್ವರ ಎತ್ತಿದ್ದು, ಅವರಿಗೆ ಅಷ್ಟು ದೂರ ರೋಡ್‌ ಶೋ ನಡೆಸಲು ಅವಕಾಶ ಕೊಡದಂತೆ ಚುನಾವಣಾ ಆಯೋಗಕ್ಕೆ ದೂರು ನೀಡಿದೆ.

ಬೆಂಗಳೂರಲ್ಲಿ ಮೋದಿ ರೋಡ್ ಶೋ ಹಿನ್ನೆಲೆಯಲ್ಲಿ ಕಾಂಗ್ರೆಸ್ ಕಾನೂನು ಘಟಕವು ಚುನಾವಣೆ ಆಯೋಗಕ್ಕೆ ದೂರು ಸಲ್ಲಿಸಿದೆ. ಮೋದಿ ರೋಡ್ ಶೋವನ್ನು ತೀವ್ರವಾಗಿ ವಿರೋಧ ಮಾಡಿರುವ ಕಾಂಗ್ರೆಸ್‌, ಇದು ಮಾದರಿ ನೀತಿ ಸಂಹಿತೆಗೆ ವಿರುದ್ಧವಾಗಿದೆ ಎಂದು ದೂರಿದೆ.

ಶನಿವಾರ ಮತ್ತು ಭಾನುವಾರ ಮೋದಿ ರೋಡ್ ಶೋ ನಿಗದಿಯಾಗಿದೆ. ಅಲ್ಲದೆ, ಈಗ ಎರಡು ದಿನಗಳ ಚುನಾವಣಾ ಭಾಷಣಗಳಲ್ಲಿ ಮೋದಿ ಅವರು ಧಾರ್ಮಿಕ ಭಾವನೆಗಳನ್ನು ಬಳಸಿಕೊಂಡಿದ್ದಾರೆ. ಕೇವಲ ಚುನಾವಣೆ ಲಾಭಕ್ಕೋಸ್ಕರ ದೇವ ದೇವತೆಗಳನ್ನು ಬಳಸುತ್ತಿದ್ದಾರೆ. ಈ ರೀತಿ ಅವಕಾಶ ನೀಡಬಾರದು. ಜಾತಿ, ಧರ್ಮದ ಹೆಸರು ಬಳಸಿಕೊಂಡು ಚುನಾವಣೆ ಪ್ರಚಾರಕ್ಕೆ ಅವಕಾಶ ನೀಡಬಾರದು. 37 ಕಿ.ಮೀ. ರೋಡ್ ಶೋಗೆ ಅವಕಾಶ ನೀಡಬಾರದು ಎಂದು ದೂರಿನಲ್ಲಿ ಉಲ್ಲೇಖಿಸಲಾಗಿದೆ.

ಹೈಕೋರ್ಟ್ ರಿಟ್ ಪಿಟಿಷನ್‌ನಲ್ಲಿಯೂ ಸಹ ಜನರಿಗೆ ತೊಂದರೆ ಆಗದ ರೀತಿ ನಿರ್ದೇಶನ ನೀಡಲಾಗಿದೆ. ಹೈಕೋರ್ಟ್ ನಿರ್ದೇಶನ ಪಾಲನೆ ಮಾಡದೆಯೇ ರೋಡ್ ಶೋಗೆ ಅವಕಾಶ ನೀಡಲಾಗಿದೆ. ಆಂಬ್ಯುಲೆನ್ಸ್ ಓಡಾಟಕ್ಕೆ ಅನನುಕೂಲವಾಗುತ್ತದೆ. ಸಾರ್ವಜನಿಕರಿಗೆ ತೊಂದರೆಯಾಗುತ್ತದೆ. ಹೀಗಾಗಿ ರೋಡ್ ಶೋ ಅವಕಾಶ ನೀಡಬಾರದು. ಮೋದಿ ರೋಡ್ ಶೋಗೆ ಸರ್ಕಾರದ ಹಣವನ್ನೂ ಖರ್ಚು ಮಾಡಲಾಗುತ್ತಿದೆ. ಇದನ್ನು ಲೆಕ್ಕ ಹಾಕಲು ಸರಿಯಾದ ಸಿಬ್ಬಂದಿಯನ್ನು ನೇಮಕ ಮಾಡಬೇಕು ಎಂದು ಕಾಂಗ್ರೆಸ್ ಕಾನೂನು ಘಟಕವು ಸಲ್ಲಿಸಿದ ದೂರಿನಲ್ಲಿ ಉಲ್ಲೇಖ ಮಾಡಲಾಗಿದೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!