ಪ್ರೀತಿಯ ಓದುಗರೇ,
ಕೋವಿಡ್ ನಿರ್ನಾಮ ನಮ್ಮ ಕೈಯಲ್ಲೇ ಇದೆ. ಮಾಸ್ಕ್ ಧರಿಸಿ, ಸಾಮಾಜಿಕ ಅಂತರ ಕಾಯ್ದುಕೊಳ್ಳಿ, ಕೈ, ಮುಖವನ್ನು ಸ್ವಚ್ಛವಾಗಿ ಇಟ್ಟುಕೊಳ್ಳಿ. ನೀವೂ ಸುರಕ್ಷಿತರಾಗಿರಿ, ನಿಮ್ಮವರನ್ನೂ ಸುರಕ್ಷಿತರಾಗಿ ಇರುವಂತೆ ನೋಡಿಕೊಳ್ಳಿ.
………………………………………………………………………..
ಹೊಸದಿಗಂತ ವರದಿ, ಉಡುಪಿ:
ನಾಯಕತ್ವ ಬದಲಾವಣೆ ಇಲ್ಲವೆಂದು ಸ್ವತಃ ಬಿಜೆಪಿ ರಾಜ್ಯಾಧ್ಯಕ್ಷ ನಳಿನ್ ಕುಮಾರ್ ಕಟೀಲ್ ಹೇಳಿದ್ದಾರೆ. ಆದ್ದರಿಂದ ನಳಿನ್ ವಿವಾದಾಸ್ಪದ ಆಡಿಯೋವನ್ನು ಗಂಭೀರವಾಗಿ ಪರಿಗಣಿಸಬೇಕಾಗಿಲ್ಲ ಎಂದು ಉಡುಪಿ ಶಾಸಕ ಕೆ. ರಘುಪತಿ ಭಟ್ ಅಭಿಪ್ರಾಯಪಟ್ಟಿದ್ದಾರೆ.
ಸುದ್ದಿಗಾರರಿಗೆ ಪ್ರತಿಕ್ರಿಯಿಸಿದ ಶಾಸಕರು, ಆಡಿಯೋ ನನ್ನದಲ್ಲವೆಂದು ನಳಿನ್ ಮುಖ್ಯಮಂತ್ರಿಗಳಿಗೆ ಸ್ಪಷ್ಟಪಡಿಸಿದ್ದಾರೆ. ನಳಿನ್ ಅದು ತಮ್ಮದೇ ಧ್ವನಿ ಎಂದಿದ್ದರೆ ಸಂಚಲನವಾಗುತ್ತಿತ್ತು. ಅವರೇ ನಾನಲ್ಲ ಹೇಳಿದ್ದರಿಂದ ಅದರಲ್ಲಿರುವುದು ನಳಿನ್ ಧ್ವನಿಯೇ ಅಲ್ಲ ಎಂದು ಭಾವಿಸಿದ್ದೇವೆ. ಅಲ್ಲದೇ ಅದನ್ನು ಮುಖ್ಯಮಂತ್ರಿಗಳಿಗೆ ತನಿಖೆಗಾಗಿ ಕೊಟ್ಟಿದ್ದಾರೆ. ಆದ್ದರಿಂದ ತನಿಖೆಯಾದ ನಂತರ ಅಸಲಿಯತ್ತು ಗೊತ್ತಾಗಲಿದೆ ಎಂದರು.
ಜಗದೀಶ ಶೆಟ್ಟರ್ ಮತ್ತು ಕೆ.ಎಸ್. ಈಶ್ವರಪ್ಪ ಇಬ್ಬರೂ ನಮ್ಮ ಪಕ್ಷದ ಪ್ರಮುಖ ನಾಯಕರು. ಇಬ್ಬರು ರಾಜ್ಯಾಧ್ಯಕ್ಷರಾಗಿ ಕೆಲಸ ಮಾಡಿದವರು, ಇಬ್ಬರೂ ಉತ್ತಮ ಕೆಲಸ ಮಾಡುತ್ತಿದ್ದಾರೆ. ಅವರ ಹೆಸರು ಪ್ರಸ್ತಾಪವಾಗಿರುವುದರಿಂದ ಈ ಆಡಿಯೋ ಸುಳ್ಳು ಎಂಬುದು ಸಾಬೀತಾಗುತ್ತದೆ ಎಂದು ಶಾಸಕ ಭಟ್ ಹೇಳಿದರು.
ಶಾಸಕಾಂಗ ಸಭೆಯ ಬಗ್ಗೆ ಇನ್ನೂ ಅಧಿಕೃತವಾಗಿ ಆಹ್ವಾನ ಬಂದಿಲ್ಲ. ಶಾಸಕಾಂಗ ಸಭೆ ಕರೆಯಬೇಕೆಂದು ಶಾಸಕನಾಗಿ ನಾನು ಒತ್ತಾಯಿಸುತ್ತೇನೆ. ನಾಯಕತ್ವದ ಬದಲಾವಣೆ ಸಲುವಾಗಿ ನನ್ನ ಬೇಡಿಕೆ ಅಲ್ಲ. ಪಕ್ಷದ ಇಮೇಜ್ ಹೆಚ್ಚಿಸುವ ದೃಷ್ಟಿಯಿಂದ ಸಭೆ ಮಾಡಬೇಕು. ಅಧಿವೇಶನಕ್ಕೂ ಮುನ್ನ ಶಾಸಕರ ಸಭೆ ಕರೆಯುವುದು ಸಂಪ್ರದಾಯ. ಶಾಸಕರ ಅಭಿಪ್ರಾಯ ತೆಗೆದುಕೊಂಡು ಅಧಿವೇಶನ ಆರಂಭಿಸುವುದು ಒಳ್ಳೆಯದು ಎಂದು ತಿಳಿಸಿದರು.