ರಾಜಕಾರಣಕ್ಕಾಗಿ ನಾರಾಯಣ ಗುರುಗಳ ಹೆಸರು ಬಳಕೆ ಬೇಡ: ಸಚಿವ ಸುನೀಲ್ ಕುಮಾರ್

ಹೊಸದಿಗಂತ ವರದಿ, ಮಂಗಳೂರು:

ನಾರಾಯಣ ಗುರುಗಳಿಗೆ ಗೌರವ ಕೊಡುವ ನಿಟ್ಟಿನಲ್ಲಿ ಯಾವುದೇ ಕಾರ್ಯಕ್ರಮ ಹಮ್ಮಿಕೊಂಡರೂ ಸ್ವಾಗತಿಸಲಾಗುವುದು. ಆದರೆ ರಾಜಕಾರಣ ಮಾಡುವುದಕ್ಕಾಗಿ ಕಮ್ಯುನಿಸ್ಟರು ಮತ್ತು ಕಾಂಗ್ರೆಸ್ಸಿಗರು ಗುರುಗಳ ಹೆಸರನ್ನು ಬಳಕೆ ಮಾಡುತ್ತಿದ್ದಾರೆ. ಇದು ಒಳ್ಳೆಯದಲ್ಲ. ನಾರಾಯಣಗುರುಗಳನ್ನು ಯಾರೂ ರಾಜಕಾರಣಕ್ಕೆ ಬಳಸಬಾರದು ಎಂದು ದಕ್ಷಿಣ ಕನ್ನಡ ಜಿಲ್ಲಾ ಉಸ್ತುವಾರಿ ಸಚಿವ ಸುನೀಲ್ ಕುಮಾರ್ ಪ್ರತಿಕ್ರಿಯಿಸಿದ್ದಾರೆ.
ಅವರು ಬುಧವಾರ ನಗರದಲ್ಲಿ ಸುದ್ದಿಗಾರರ ಜತೆ ಮಾತನಾಡುತ್ತಾ ಈ ಪ್ರತಿಕ್ರಿಯೆ ನೀಡಿ, ನಾರಾಯಣಗುರು ಒಂದು ಜಾತಿ, ವ್ಯವಸ್ಥೆಗೆ ಸೀಮಿತವಲ್ಲ. ಎಲ್ಲವನ್ನೂ ಮೀರಿ ನಿಂತ ಕಾರಣವೇ ಅವರು ಮಹಾಪುರುಷರಾಗಿದ್ದಾರೆ. ಹಾಗಾಗಿಯೇ ಅವರನ್ನು ಭಕ್ತಿಯಿಂದ ಪೂಜಿಸಲಾಗುತ್ತಿದೆ. ಆ ಹಿನ್ನೆಲೆಯಲ್ಲಿ ಗೌರವ ಕೊಡುವ ನಿಟ್ಟಿನಲ್ಲಿ ಸ್ತಬ್ಧಚಿತ್ರ ಮೆರವಣಿಗೆಯನ್ನು ನಾನು ಬೆಂಬಲಿಸುತ್ತೇನೆ ಎಂದರು.
ಆದರೆ ಕಮ್ಯುನಿಸ್ಟರು ಹಾಗೂ ಕಾಂಗ್ರೆಸ್ಸಿಗರು ಜನರಿಗೆ ಗೊಂದಲ ಸೃಷ್ಟಿಸುವ ಕಾರ್ಯ ಮಾಡಬಾರದು. ಈ ಹಿಂದೆ ಮಂಗಳೂರಿನ ಲೇಡಿಹಿಲ್ ಸರ್ಕಲ್‌ಗೆ ನಾರಾಯಣಗುರುಗಳ ಹೆಸರನ್ನು ಇಡಲು ಮನಪಾದ ಬಿಜೆಪಿ ಆಡಳಿತ ಮುಂದಾದಾಗ ಕಾಂಗ್ರೆಸ್‌ನ ಸದಸ್ಯರು ಲಿಖಿತವಾಗಿ ಆಕ್ಷೇಪಣೆ ನೀಡಿದ್ದಾರೆ. ಅಂದು ಅಪಮಾನ ಮಾಡಿದವರು ಇಂದು ಅಪಮಾನ ಆಗಿದೆ ಎಂದು ಹೇಳುವುದು ಎಷ್ಟು ಸರಿ ಎಂದು ಪ್ರಶ್ನಿಸಿದ ಸಚಿವರು, ಕೇರಳದಲ್ಲಿ ಆಗಿರುವ ಬೆಂಕಿಯ ಶಾಖವನ್ನು ಇಲ್ಲಿನ ಕಾಂಗ್ರೆಸಿಗರು ಬೇಯಿಸಿಕೊಳ್ಳುವ ಪ್ರಯತ್ನ ಮಾಡುತ್ತಿದ್ದಾರೆ ಎಂದರು.
ಇಲ್ಲಿ ನಡೆಸುತ್ತಿರುವ ಟ್ಯಾಬ್ಲೋ ಮೆರವಣಿಗೆ ಯಾರ ವಿರುದ್ಧವಾಗಲಿ, ಯಾರನ್ನೂ ದ್ವೇಷಿಸಿ ಆಗಲಿ ಅಲ್ಲ ಎಂಬುದನ್ನು ಸ್ಪಷ್ಟಪಡಿಸಿದ್ದಾರೆ. ಹಾಗಾಗಿ ನಾವು ಬೆಂಬಲ ನೀಡಿದ್ದೇವೆ. ನಾರಾಯಣ ಗುರುಗಳಿಗೆ ಸಂಬಂಧಿಸಿ ಏನು ಮಾಡಿದರೂ ಬೆಂಬಲ ಇದೆ. ಆದರೆ ನಾರಾಯಣಗುರುಗಳಿಗೆ ಟ್ಯಾಬ್ಲೋ ಮಾಡಿ ಗೌರವ ಕೊಡಬೇಕೆಂದಿಲ್ಲ. ಆ ಗೌರವ ನಮ್ಮ ವ್ಯಕ್ತಿಗತ ನಡವಳಿಕೆಯಲ್ಲಿದೆ ಎಂದು ಸಚಿವರು ಹೇಳಿದರು.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!