‘ಸಿಎಂ ಎಷ್ಟೊತ್ತಿಗೆ ಫೋನ್ ಮಾಡಿದ್ದಾರೆ ಗೊತ್ತಾ?, ಮನೆ ಕಾಂಪೌಂಡ್ ಬಳಿಯೇ ಆಹ್ವಾನ ಕೊಟ್ಟಿದ್ದಾರೆ’

ಹೊಸದಿಗಂತ ವರದಿ ರಾಮನಗರ :

ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದ ಬಳಿ ನಿರ್ಮಿಸಲಾದ ಕೆಂಪೇಗೌಡರ ಪ್ರತಿಮೆ ಅನಾವರಣ ಕಾರ್ಯಕ್ರಮಕ್ಕೆ ಮಾಜಿ ಪ್ರಧಾನಿ ದೇವೇಗೌಡರನ್ನು ಕಡೆಗಣಿಸಿರುವ ವಿಚಾರ ಗಮನಿಸಿದ್ದೇನೆ. ಆದರೆ, ಬಿಜೆಪಿಯವರು ದೇವೇಗೌಡರನ್ನು ಮೊದಲ ಆದ್ಯತೆಯಾಗಿ ಪ್ರತಿಮೆ ಅನಾವರಣ ಕಾರ್ಯಕ್ರಮಕ್ಕೆ ಆಹ್ವಾನ ಮಾಡಿದ್ದೆವು ಎಂದು ಬಿಜೆಪಿಯವರು ಟ್ವಿಟ್ ಮಾಡಿದ್ದಾರೆ.

ಈ ಟ್ವೀಟ್‌ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ ಕುಮಾರಸ್ವಾಮಿ ಬಿಜೆಪಿ ನಾಯಕರು ಹಾಗೂ ಬಿಜೆಪಿ ಪಕ್ಷಕ್ಕೆ ನಾಗರಿಕತೆ ಇದೀಯಾ ಎಂದು ಕಿಡಿಕಾರಿದ್ದಾರೆ. ರಾಮನಗರ ತಾಲ್ಲೂಕಿನ ‌ಬಿಡದಿಯಲ್ಲಿ ಬೆಳಗ್ಗೆ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಕೆಂಪೇಗೌಡರ ಪ್ರತಿಮೆ ಅನಾವರಣ ವಿಚಾರವಾಗಿ ಬಿಜೆಪಿ ನಾಯಕರು ಮತ್ತು ಸರ್ಕಾರ ಮಾಜಿ ಪ್ರಧಾನಿಯವರನ್ನು ಕಡೆಗಣಿಸಿದ ವಿಚಾರವನ್ನು ಜನರು ಗಮನಿಸಿದ್ದಾರೆ. ಈ ಬಗ್ಗೆ ಜೆಡಿಎಸ್‌ ಸರಣಿ ಟ್ವೀಟ್‌ಗಳನ್ನು ಮಾಡಲಾಗಿತ್ತು. ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ದೇವೇಗೌಡರನ್ನು ಆಹ್ವಾನಿಸಿರುವ ಬಗ್ಗೆ ಪ್ರತಿಕ್ರಿಯೆ ನೀಡಿದ್ದಾರೆ. ಆದರೆ, ಸಿಎಂ ಎಷ್ಟೋತ್ತಿಗೆ ದೇವೇಗೌಡರಿಗೆ ದೂರವಾಣಿ ಕರೆ ಮಾಡಿದ್ದರು ಎನ್ನುವುದನ್ನು ಗಮನಿಸಬೇಕು. ಗುರುವಾರ ರಾತ್ರಿ 9.30 ಕ್ಕೆ ಕರೆ ಮಾಡಿದ್ದಾರೆ. ಮಧ್ಯರಾತ್ರಿ ಸಮಯದಲ್ಲಿ ದೇವೇಗೌಡರು ಮಲಗಿದ್ದಾಗ ಮನೆಯ ಕಾಪೌಂಡಿಗೆ ಲೇಟರ್ ಕೊಟ್ಟು ಹೋಗುತ್ತಾರೆ. ಆಹ್ವಾನದ ಪತ್ರದಲ್ಲಿ ದೇವೇಗೌಡರ ಹೆಸರು ಕೂಡ ಸಮರ್ಪಕವಾಗಿ ನಮೂದಿಸಿಲ್ಲ. ಹೆಸರಿನ ಬದಲಾಗಿ ಮಾನ್ಯರೇ ಎಂದು ಬರೆಯಲಾಗಿದ್ದು, ಹೆಸರನ್ನ ಕೆಳಗೆ ಹಾಕಿದ್ದಾರೆ ಎಂದು ಹೇಳಿದರು.

ಹಳ್ಳಿ ಹಳ್ಳಿಯಲ್ಲಿ ಕೆಂಪೇಗೌಡರ ಪ್ರತಿಮೆ:
ರಾಜ್ಯವನ್ನು ಅಭಿವೃದ್ಧಿ ಹೆಸರಿನಲ್ಲಿ ಬಿಜೆಪಿಯವರು ಲೂಟಿ ಹೊಡೆದುಕೊಂಡು ಕುಳಿತಿದ್ದಾರೆ. ಇವರಿಂದ ಸಬ್ ಕಾ ಸಾಥ್, ಸಬ್ ಕಾ ವಿಕಾಸ್ ಕಲಿಯಬೇಕಾ ಎಂಬುದು ಆಶ್ವರ್ಯವಾಗಿದೆ. ರಾಜಕಾರಣದ ಉದ್ದೇಶಕ್ಕಾಗಿ ಪ್ರತಿಮೆ ಲೋಕಾರ್ಪಣೆ ಕಾರ್ಯಕ್ರಮ ಮಾಡಲಾಗಿದೆ. ಆದರೆ, ಜನರು ಹಳ್ಳಿ ಹಳ್ಳಿಯಲ್ಲಿ ಕೆಂಪೇಗೌಡರ ಪ್ರತಿಮೆ ಅನಾವರಣ ಮಾಡುತ್ತಿದ್ದಾರೆ. ಸರ್ಕಾರದಿಂದ ಹಣ ಖರ್ಚು ಮಾಡಿ ಪ್ರತಿಮೆ ಅನಾವರಣ ಮಾಡಬೇಕಾದರೆ, ಎಲ್ಲರನ್ನೂ ಕರೆಯಬೇಕು. ಇದು ಪಕ್ಷದ ಕಾರ್ಯಕ್ರಮ ಆಗಿದ್ದರೆ ನಮ್ಮದೇನು ತಕರಾರು ಇರಲಿಲ್ಲ. ದೇಶದ ಅಭಿವೃದ್ಧಿಯೆಂದರೆ ಪ್ರತಿಮೆ ಅನಾವರಣ ಮಾಡಿ, ಪುಷ್ಪಾರ್ಚನೆ ಮಾಡುವುದು ಅಲ್ಲ. ರಾಜ್ಯದ ಜನರಿಗೆ ಏನು ಕೊಟ್ಟಿದ್ದಾರೆ ಎಂದು ಆತ್ಮಾವಲೋಕನ ಮಾಡಿಕೊಳ್ಳಬೇಕು. ಪ್ರತಿಮೆ ‌ಲೋಕಾರ್ಪಣೆ ಮತ್ತು ಪುಷ್ಪಾರ್ಚನೆ ಮಾಡಿದ ತಕ್ಷಣ ಮತ ಹೊಡೆಯಲು ಸಾಧ್ಯವಿಲ್ಲ. ಯಾವ ಕಲ್ಲಿಗೆ ಯಾವ ಹಕ್ಕಿ ಬೀಳುತ್ತದೆ ಎಂದು ಜನ ತೀರ್ಮಾನ ಮಾಡುತ್ತಾರೆ ಎಂದು ಹೇಳಿದರು.

ಗುಲಾಮರನ್ನಾಗಿ ಮಾಡುವ ಪ್ರಯತ್ನ:
ಬಿಜೆಪಿಯವರು ಕನ್ನಡದವರನ್ನ ಗುಲಾಮ ರನ್ನಾಗಿ ಮಾಡಲು ಹೊರಟಿದ್ದಾರೆ. ರಾಜ್ಯದಲ್ಲಿ ಹಿಂದಿ ಹೇರಿಕೆಗಾಗಿ ಪ್ರತಿನಿತ್ಯ ಹುನ್ನಾರ ನಡೆಯುತ್ತಿದೆ. ಇವರು ಕರ್ನಾಟಕದ ‌ಅಸ್ಮಿತೆ ಕಾಪಾಡುತ್ತಾರಾ ಎನ್ನುವ ಬಗ್ಗೆ ಅಪನಂಬಿಕೆಯಿದೆ. ಪ್ರಧಾನಮಂತ್ರಿ ನರೇಂದ್ರ ಮೋದಿ ಮುಂದೆ ರಾಜ್ಯ ಬಿಜೆಪಿ ನಾಯಕರ ಪರಿಸ್ಥಿತಿ ಯಾವ ರೀತಿಯಾಗಿದೆ. ಗುಲಾಮರ ರೀತಿಯಲ್ಲಿ ಕೈ‌ ಕಟ್ಟೆ ಹಾಕಿಕೊಂಡು ನಿಂತುಕೊಳ್ಳುತ್ತಿದ್ದಾರೆ. ಇವರಿಗೆ ಹೆಮ್ಮೆಯ ಕನ್ನಡ ನಾಡಿನ ಅಸ್ಮಿತೆ ಕಾಪಾಡುವ ನೈತಿಕತೆ ಇದೀಯಾ ಎಂದು ಆಕ್ರೋಶ ಹೊರಹಾಕಿದ್ದಾರೆ.
ರಾಜ್ಯಕ್ಕೆ ಮೋದಿ ಕೊಡುಗೆಯೇನು?

ಪ್ರಧಾನಮಂತ್ರಿ ನರೇಂದ್ರ ಮೋದಿ ಅವರು ರಾಜ್ಯಕ್ಕೆ ಬಂದಾಗ ಜನರಿಗೆ ಏನು ಸಂದೇಶ ಕೊಟ್ಟಿದ್ದಾರೆ ಎಂಬುದು ತಿಳಿಯುತ್ತಿಲ್ಲ. ಯಾವುದೇ ಸರ್ಕಾರ ಬಂದರೂ ಹೊಸ ರೈಲ್ವೆ ಯೋಜನೆಗಳು ಬರುತ್ತಿರುತ್ತವೆ. ಇವರು ರಾತ್ರೋ ರಾತ್ರಿ ಜಂತರ್ ಮಾಡಿ ರೈಲು ಹೊಸ ಯೋಜನೆ ತಂದಿಲ್ಲ. ಹಿಂದಿನಿಂದಲೂ ಸರ್ಕಾರಗಳು ತೆಗೆದುಕೊಂಡ ಕಾರ್ಯಕ್ರಮಗಳಿಂದ ದೇಶ ಅಭಿವೃದ್ಧಿ ಕಂಡಿದೆ. ನಾನು ಮುಖ್ಯಮಂತ್ರಿ ಆಗಿದ್ದಾಗ ಮೊದಲ ಬಾರಿಗೆ ಮೆಟ್ರೋದ 19 ಕಿ.ಮೀ.ಗೆ ಮಾರ್ಗಕ್ಕೆ ಚಾಲನೆ ನೀಡಲಾಗಿತ್ತು. ಹಾಗಂತ, ಆ ಯೋಜನೆಯನ್ನು ನಾನೇ ಜಾರಿಗೆ ತಂದಿದ್ದೇನೆ ಎಂದು ಹೇಳಿಕೊಳ್ಳಲಾಗುವುದಿಲ್ಲ. ಇನ್ನು ರಾಜ್ಯದಲ್ಲಿ ಬಿಜೆಪಿ ಸರ್ಕಾರ ಅಧಿಕಾರದಲ್ಲಿ ಇದ್ದರೂ ನರೇಂದ್ರ ಮೋದಿ ಹೆಸರು ಹೇಳಿ ಮತ ಕೇಳುತ್ತಿರುವುದು ಅವರ ಪರಿಸ್ಥಿತಿಯನ್ನು ತಿಳಿಸುತ್ತದೆ ಎಂದರು.

ಅಶೋಕ್‌ ಸಂಸ್ಕೃತಿ ಅನಾವರಣ: ರಾಜ್ಯದಲ್ಲಿ ನಿನ್ನೆ ನಡೆದ ಕಾರ್ಯಕ್ರಮದಲ್ಲಿ ಸಚಿವ ಆರ್. ಅಶೋಕ್‌ ಅವರು ಸ್ವಾಮೀಜಿ ಮೇಲೆ ಕೈಹಾಕಿಕೊಂಡು ನಿಂತಿರುವುದು ಅವರ ಸಂಸ್ಕೃತಿಯನ್ನು ತೋರಿಸುತ್ತದೆ. ಯಾವುದೇ ಸಂಸ್ಕೃತಿಯನ್ನು ದುಡ್ಡು ಕೊಟ್ಟು ತರಲು ಸಾಧ್ಯವಿಲ್ಲ. ಅದು ಹುಟ್ಟುಗುಣ ದಿಂದ ಬರುತ್ತದೆ. ಬಿಜೆಪಿಯವರು ನಮಗೆ ಬುದ್ದಿವಾದ ಹೇಳುವ ಮೊದಲು ತಮ್ಮ ನಡುವಳಿಕೆ ತಿದ್ದುಕೊಳ್ಳಬೇಕು. ಇತ್ತೀಚೆಗೆ ಸಿ.ಪಿ. ಯೋಗೇಶ್ವರ್‌ ಆನೆ ಅಂಬಾರಿ ಹೊತ್ತ ಮಾತ್ರಕ್ಕೆ ಮರಿಯಾನೆ ಸಹ ಅಂಬಾರಿ ಹೊರಲು ಆಗುವುದಿಲ್ಲ ಎಂದು ಜೆಡಿಎಸ್‌ ಯುವ ಘಟಕದ ರಾಜ್ಯಾಧ್ಯಕ್ಷ ನಿಖಿಲ್‌ ಕುಮಾರಸ್ವಾಮಿಗೆ ಟಾಂಗ್‌ ನೀಡಿರುವ ಬಗ್ಗೆ ಪ್ರತಿಕ್ರಿಯೆ ನೀಡುವುದಿಲ್ಲ. ಯೋಗೇಶ್ವರ್ ಹೇಳಿಕೆ ಬಗ್ಗೆ ಜನರೇ ಸೂಕ್ತ ತೀರ್ಮಾನ ತೆಗೆದುಕೊಳ್ಳುತ್ತಾರೆ ಎಂದು ಮಾಜಿ ಸಿಎಂ ಕುಮಾರಸ್ವಾಮಿ ಹೇಳಿದರು.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!