ಕಾಂಬೋಡಿಯದ ಅಂಕೊರವಾಟ್ ದೇಗುಲದ ಪುನಶ್ಚೇತನಕ್ಕೆ ಭಾರತವೇಕೆ ಕೈಜೋಡಿಸಿದೆ ಗೊತ್ತಾ?

ಹೊಸದಿಗಂತ ಡಿಜಿಟಲ್‌ ಡೆಸ್ಕ್:‌
ಪ್ರಪಂಚದ ಇತರ ಭಾಗಗಳೊಂದಿಗೆ ಭಾರತದ ಪ್ರಾಚೀನ ನಾಗರಿಕತೆಯ ಸಂಬಂಧಗಳನ್ನು ಸ್ಮರಿಸುವ ಮತ್ತು ಅವುಗಳನ್ನು ಪುನಶ್ಚೇತನ ಗೊಳಿಸುವತ್ತ ಭಾರತದ ಪ್ರಯತ್ನಗಳು ನಡೆಯುತ್ತಿವೆ. ಇದಕ್ಕೆ ಪೂರಕವಾಗಿ ಕಾಂಬೋಡಿಯಾದಲ್ಲಿರುವ ಅಂಕೊರವಾಟ್ ದೇಗುಲವನ್ನು ಪುನಶ್ಚೇತನ ಗೊಳಿಸಲು ಕಾಂಬೋಡಿಯಾದೊಂದಿಗೆ ಭಾರತ ಕೈ ಜೋಡಿಸಿದೆ. ಭಾರತದ ಸಾಂಸ್ಕೃತಿಕ ಪರಂಪರೆ ಮತ್ತು ನಾಗರಿಕತೆಯ ಇತಿಹಾಸವು ಭಾರತದಿಂದಾಚೆಗೂ ವಿಸ್ತರಿಸಿದೆ. ಈ ಹಿನ್ನೆಲೆಯಲ್ಲಿ ದೇಗುಲವನ್ನು ಪುನಶ್ಚೇತನ ಗೊಳಿಸುವುದಾಗಿ ವಿದೇಶಾಂಗ ಸಚಿವ ಜೈಶಂಕರ್‌ ಕಾಶಿಯಲ್ಲಿ ನಡೆಯುತ್ತಿರೋ ಕಾಶಿ ತಮಿಳು ಸಂಗಮದಲ್ಲಿ ಘೋಷಿಸಿದ್ದಾರೆ. ಈ ಹಿನ್ನೆಲೆಯಲ್ಲಿ ನೀವು ತಿಳಿದುಕೊಳ್ಳಬೇಕಿರುವ ಕೆಲ ಆಸಕ್ತಿಕರ ಅಂಶಗಳ ವಿವರ ಇಲ್ಲಿದೆ.

ಅಂಕೋರವಾಟ್‌ ದೇವಾಲಯವನ್ನು ಪ್ರಪಂಚದ ಅತ್ಯಂತ ವಿಶ್ವದ ಅತಿದೊಡ್ಡ ಧಾರ್ಮಿಕ ಸಂಕೀರ್ಣವೆಂದು ಕರೆಯಲಾಗುತ್ತದೆ. 400 ಎಕರೆ ಪ್ರದೇಶದಲ್ಲಿ ವಿಸ್ತರಿಸಿರುವ ಈ ದೇವಾಲಯಗಳ ಸಂಕೀರ್ಣವು 12ನೇ ಶತಮಾನದ ಖಮೇರ್‌ ವಾಸ್ತುಶಿಲ್ಪಕ್ಕೆ ಅತ್ಯುತ್ತಮ ಉದಾಹರಣೆಯಾಗಿದೆ. ಈ ಇಡೀ ದೇವಾಲಯದ ಸಂಕೀರ್ಣವು ಹಿಂದೂ ಧರ್ಮದ ಧಾರ್ಮಿಕ ಲಕ್ಷಣಗಳನ್ನು ಹೊಂದಿರುವ ಸುಮಾರು ಸಾವಿರ ಕಟ್ಟಡಗಳನ್ನು ಒಳಗೊಂಡಿದೆ. ಈ ದೇವಾಲಯವು ಹಿಂದೂ ಧರ್ಮದ ಮೂರು ಪ್ರಮುಖ ದೇವತೆಗಳಾದ ಶಿವ, ಬ್ರಹ್ಮ ಮತ್ತು ವಿಷ್ಣುವಿನ ವಿಗ್ರಹಗಳನ್ನು ಹೊಂದಿದೆ. ಅಲ್ಲದೇ ದೇವಾಲಯದ ಗೋಡೆಯ ಮೇಲೆ ರಾಮಾಯಣ, ಮಹಾಭಾರತ ಪುರಾಣಗಳಿಗೆ ಸಂಬಂಧಿಸಿದ ಕೆತ್ತನೆಗಳಿಂದ ಅಲಂಕೃತವಾಗಿದೆ. ಹೀಗೆ ಪ್ರಾಚೀನ ಭಾರತೀಯ ಸಂಸ್ಕೃತಿಯು ವಿಸ್ತಾರವಾಗಿ ಹಬ್ಬಿಕೊಂಡಿತ್ತು ಎಂಬುದಕ್ಕೆ ಸಾಕ್ಷಿಯಾಗಿ ನಿಲ್ಲುತ್ತದೆ ಈ ದೇವಾಲಯ.

ಹಾಗಾಗಿ ಭಾರತೀಯ ಮತ್ತು ಕಾಂಬೋಡಿಯನ್ ನಾಗರಿಕತೆಗಳ ನಡುವಿನ ಪ್ರಮುಖ ಕೊಂಡಿಗಳಲ್ಲಿ ಒಂದಾದ ಅಂಕೋರ್ ವಾಟ್ ದೇವಾಲಯದ ಪುನಶ್ಚೇತನವು ಎರಡು ದೇಶಗಳ ದ್ವಿಪಕ್ಷೀಯ ಸಂಬಂಧಗಳನ್ನು ಹೆಚ್ಚಿಸುತ್ತದೆ. ಈ ಎರಡು ದೇಶಗಳ ನಡುವಿನ ಸಂಬಂಧಗಳಿಗೆ ಬಲವಾದ ಐತಿಹಾಸಿಕ ಹಿನ್ನೆಲೆಯನ್ನು ಒದಗಿಸುವುದರೊಂದಿಗೆ, ಸಮಕಾಲೀನ ವಾತಾವರಣದಲ್ಲಿ ಸಹಕಾರವನ್ನು ಹೆಚ್ಚಿಸಲು ಸಹಾಯಕವಾಗಲಿದೆ. ಅಲ್ಲದೇ ಈ ಪುನಶ್ಚೇತನವು ಉಭಯ ದೇಶಗಳ ನಡುವಿನ ಧಾರ್ಮಿಕ ಸಂಬಂಧಗಳನ್ನು ಗಟ್ಟಿಗೊಳಿಸಲಿದೆ. ಅಲ್ಲದೇ ಅಂಕೋರ್‌ ವಾಟ್‌ ದೇಗುಲವೊಂದೇ ಅಲ್ಲದೇ ಕಾಂಬೋಡಿಯಾದಲ್ಲಿರುವ ಇತರ ಅನೇಕ ದೇವಾಲಯಗಳ ಪುನಶ್ಚೇತನಕ್ಕೂ ಇದು ಸಹಾಯಕವಾಗಲಿದೆ. ಅಂಕೋರ್‌ ವಾಟ್‌ ದೇವಾಲಯನ್ನು ಹೊರತು ಪಡಿಸಿ, ಭಾರತದ ಸಹಯೋಗದಲ್ಲಿ ಟ್ರಾಪೋಮ್‌ ಎಂಬ ಇನ್ನೊಂದು ದೇವಾಲಯದ ಪುನಃ ಸ್ಥಾಪನೆಯ ಕಾರ್ಯವೂ ನಡೆಯುತ್ತಿದೆ. ಈ ನಿದರ್ಶನಗಳು ಬಹುಪಕ್ಷೀಯ ರಾಜತಾಂತ್ರಿಕತೆ ಮತ್ತು ಸಹಕಾರಕ್ಕೆ ವಿಭಿನ್ನ ಹೊಳಹುಗಳನ್ನು ಒದಗಿಸಲಿವೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!