ಹೊಸದಿಗಂತ ಡಿಜಿಟಲ್ ಡೆಸ್ಕ್:
ಹಿಮಾಚಲ ಪ್ರದೇಶ ಸರ್ಕಾರ ಸಾಲ ಪಡೆದು ಸೋನಿಯಾ ಗಾಂಧಿ ಅವರಿಗೆ ನೀಡಿ ರಾಜ್ಯದ ಬೊಕ್ಕಸವನ್ನು ಖಾಲಿ ಮಾಡಿದೆ ಎಂದು ಸಂಸದೆ ಕಂಗನಾ ರಣಾವತ್ ಅವರು ಭಾನುವಾರ ಆರೋಪಿಸಿದ್ದಾರೆ.
ಇಂದು ಶಿಮ್ಲಾದ ಹಳ್ಳಿಯೊಂದರಲ್ಲಿ ಬಿಜೆಪಿ ಸದಸ್ಯತ್ವ ಅಭಿಯಾನಕ್ಕೆ ಚಾಲನೆ ನೀಡಿ ಮಾತನಾಡಿದ ನಟಿ-ರಾಜಕಾರಣಿ, ರಾಜ್ಯ ಸರ್ಕಾರ ಭ್ರಷ್ಟಾಚಾರದಲ್ಲಿ ಮುಳುಗಿದೆ ಮತ್ತು ಕಾಂಗ್ರೆಸ್ ಆಡಳಿತದ ರಾಜ್ಯ ಸರ್ಕಾರಗಳು ಆಯಾ ರಾಜ್ಯಗಳ ಬೊಕ್ಕಸವನ್ನು ಖಾಲಿ ಮಾಡುತ್ತಿವೆ ಎಂದು ಎಲ್ಲರಿಗೂ ತಿಳಿದಿದೆ ಎಂದು ವಾಗ್ದಾಳಿ ನಡೆಸಿದರು.
ಕಾಂಗ್ರೆಸ್ ಚುನಾವಣೆಗೆ ಇಷ್ಟು ಹಣ ಹೇಗೆ ಖರ್ಚು ಮಾಡುತ್ತಿದೆ ಎಂದು ಆಶ್ಚರ್ಯ ವ್ಯಕ್ತಪಡಿಸಿದ ಬಾಲಿವುಡ್ ನಟಿ, ಮುಖ್ಯಮಂತ್ರಿ ಸುಖವಿಂದರ್ ಸಿಂಗ್ ಸುಖು ನೇತೃತ್ವದ ಕಾಂಗ್ರೆಸ್ ಸರ್ಕಾರ ಸಾಲ ಪಡೆದು ಸೋನಿಯಾ ಗಾಂಧಿಗೆ ನೀಡುತ್ತಿದೆ. ಹೀಗಾಗಿ ರಾಜ್ಯ ಸರ್ಕಾರ ದಿವಾಳಿಯಾಗಿದೆ ಎಂದರು.
“ಪ್ರಸ್ತುತ ಸರ್ಕಾರವನ್ನು ಬೇರುಸಹಿತ ಕಿತ್ತೊಗೆಯಲು ನಾನು ಜನರಿಗೆ ಮನವಿ ಮಾಡುತ್ತೇನೆ. ನಾವು ವಿಪತ್ತು ಪರಿಹಾರ ನಿಧಿಗೆ ಹಣ ನೀಡಿದರೆ ಅದು ಸಿಎಂ ಪರಿಹಾರ ನಿಧಿಗೆ ಹೋಗಬೇಕು. ಆದರೆ ಅದು ಸೋನಿಯಾ ಪರಿಹಾರ ನಿಧಿಗೆ ಹೋಗುತ್ತದೆ ಎಂಬುದು ಎಲ್ಲರಿಗೂ ತಿಳಿದಿದೆ ಎಂದು ಕಂಗನಾ ರಣಾವತ್ ಹೇಳಿದರು.