- ಹಿತೈಷಿ
ಭಾರತೀಯ ಕಲಾಪ್ರಕಾರಗಳಲ್ಲಿ ಕೈಮಗ್ಗ – ನೇಯ್ಗೆ ತೊಗಲು ಗೊಂಬೆಗಳು, ಜಾನಪದ ಕಲೆಗಳು, ಕರಕುಶಲಗಳು ನಶಿಸಿ ಹೋಗುತ್ತಿರುವ ಕಾಲಘಟ್ಟ ತಲುಪಿಬಿಟ್ಟಿದ್ದೇವೆ. ಈಗಿನ ಪೀಳಿಗೆಗೆ ಈ ಕಲೆಗಳ ಬಗ್ಗೆ ತಿಳಿದಿರೋದು ತುಂಬಾ ಕಡಿಮೆ. ಎಲ್ಲಾ ಯಂತ್ರ ನಿರ್ಮಿತ, ಡಿಜಿಟಲೀಕರಣಕ್ಕೆ ಮಾರು ಹೋಗಿದ್ದೇವೆ. ಆದರೆ ಈಗಿನ ಕಾಲದಲ್ಲಿ ಭಾರತೀಯ ವೈವಿದ್ಯತೆಗೆ ಮುಖ್ಯ ಉದ್ದೇಶವಾಗಿಸಿ ಚಂಬಾ ವರ್ಣಚಿತ್ರಗಳು, ತೊಗಲುಗೊಂಬೆ ಸೇರಿದಂತೆ ಅನೇಕ ಕಲೆಗಳನ್ನು ಪರಿಚಯಿಸುವ ಕಾರ್ಯದಲ್ಲಿ ಈ ಕಥೆಯ ನಾಯಕ ಶ್ರಮಿಸುತ್ತಿದ್ದಾರೆ.
ಹೌದು, ವೃತ್ತಿಯಲ್ಲಿ ಚಾರ್ಟರ್ಡ್ ಅಕೌಂಟೆಂಟ್ ಆಗಿರುವ 30 ವರ್ಷದ ಯುವಕ ಕಾರ್ತಿಕ್ ಗಗ್ಗರ್ ಭಾರತೀಯ ಕಲೆ ಹಾಗೂ ಪ್ರವಾಸೋದ್ಯಮದ ಬಗ್ಗೆ ವಿಶೇಷವಾದ ಒಲವು ಹೊಂದಿದ್ದರು.
ಆದರೆ ಹೂಡಿಕೆ ಮಾಡಲು ಯಾವುದೇ ಸೂಕ್ತವಾದ ಮಾರ್ಗ ದೊರಕದಿದ್ದಾಗ ಇವರು ಆಯ್ಕೆ ಮಾಡಿದ್ದೇ ಸ್ಟಾರ್ಟ್ ಅಪ್.. ಕಾರ್ತಿಕ್ ಅವರ ಕನಸಿನ ಕೂಸು, ತಮ್ಮ ಕಲ್ಪನೆಯಂತೆ ಮೂಡಿಬಂದಿದೆ “ರಾಜಸ್ಥಾನ್ ಸ್ಟುಡಿಯೋ.” 2018ರಲ್ಲಿ ಆರಂಭವಾದ ಈ ಸ್ಟುಡಿಯೋ, ದೇಶದ ಅನೇಕ ಕಲಾ ಪ್ರಕಾರಗಳನ್ನು ಪ್ರವಾಸಿಗರಿಗೆ ಪರಿಚಯಿಸುವ ಒಂದು ಮಹತ್ಕಾರ್ಯಕ್ಕೆ ಕೈ ಹಾಕಿತು.
ಪ್ರಾರಂಭ ಹೇಗೆ?
ಸುಮಾರು 2 ವರ್ಷಗಳ ಕಾಲ ಸತತ ಅಧ್ಯಯನ, ದಾಖಲಾತಿಗಳೊಂದಿಗೆ ಒಂದು ಉತ್ತಮ ಯೋಜನೆ ತಯಾರಾಗಿಯೇ ಬಿಟ್ಟಿತು. ಆರಂಭದಲ್ಲಿ 15-20 ಜನರ ಕಲಾತಂಡದೊಂದಿಗೆ ರಾಜಸ್ಥಾನ್ ಸ್ಟುಡಿಯೋ ಕಾರ್ಯರಂಭಿಸಿತು. ಈ ವೇಳೆ ಕೇವಲ ಪ್ರವಾಸಿಗರು, ಕಲಾವಿದರನ್ನು ಒಟ್ಟುಗೂಡಿಸುವುದು ಮಾತ್ರವಲ್ಲದೆ ನಾಶವಾಗುತ್ತಿರುವ ಭಾರತೀಯ ಕರಕುಶಲ ಪ್ರಕಾರಗಳಿಗೆ ಮರುಜೀವ ತುಂಬಲು ಮುಂದಾಯಿತು.
ಏನು ಇದೆ ಇಲ್ಲಿ:
ಶಿಲ್ಪಕಲೆ, ಪೇಪಿಯರ್ ಮಾಚೆ, ಜೈಪುರ್ ಬ್ಲು ಪೋಟರಿ, ಸೇರಿದಂತೆ ಅನೇಕ ರೀತಿಯ ಕಲೆಗಳನ್ನು ತರಬೇತಿ ನೀಡಲಾಗುತ್ತದೆ.
Fees ಹೇಗೆ?
ಇಲ್ಲಿ ಹೇಳಿಕೊಡುವ ವಿಭಿನ್ನ ಕಲೆಗಳಿಗೆ ಸುಮಾರು 1200 ರಿಂದ 6000 ರೂ. ಗಳವರೆಗೆ ಫೀಸ್ ನಿಗದಿಪಡಿಸಲಾಗಿದೆ. ಇದರಲ್ಲಿ ಬರುವ ಹಣದಲ್ಲಿ ಶೇ.80ರಷ್ಟು ಹಣವನ್ನು ತರಗತಿ ನಡೆಸುವ ಕಲಾವಿದರಿಗೆ ನೀಡಿದರೆ ಉಳಿದ 20% ಮೊತ್ತವನ್ನು ಲಾಭವಾಗಿ ರಾಜಸ್ಥಾನ್ ಸ್ಟುಡಿಯೋ ಪಡೆಯುತ್ತದೆ.
ಕೊರೋನಾ ದಿನಗಳು:
2020ರಲ್ಲಿ ಭಾರತಕ್ಕೆ ಕೊರೋನಾ ಆವರಿಸಿ, ಎಲ್ಲೆಡೆ ಲಾಕ್ ಡೌನ್ ಘೋಷಣೆಯಾಯಿತು. ಈ ವೇಳೆ ಇವರೆಲ್ಲಾ ತರಬೇತಿಗಳನ್ನು ಆನ್ ಲೈನ್ ಮೂಲಕ ನಡೆಸಲು ಮುಂದಾದರು. ಈವರೆಗೂ 365 ಇನ್ಸ್ಟಾ ಗ್ರಾಮ್ ಲೈವ್ ತರಬೇತಿಗಳನ್ನು ನೀಡಲಾಗಿದ್ದು, ತಿಂಗಳಿಗೆ 10 ವರ್ಕ್ ಶಾಪ್ ಗಳನ್ನು ನಡೆಸಲಾಗುತ್ತಿದೆ. ಇದು ಕಲಾಪ್ರೇಮಿಗಳಿಗೆ, ಉದ್ಯಮಿಗಳನ್ನು ಆಕರ್ಷಿಸುಲ್ಲಿ ಯಶಸ್ವಿಯಾಗಿದೆ.
ರಾಜಸ್ಥಾನ್ ಸ್ಟುಡಿಯೋ- ಪರಿಣಾಮ:
ವರ್ಚುವಲ್ ವೇದಿಕೆ ಮೂಲಕ ರಾಜಸ್ಥಾನ್ ಸ್ಟುಡಿಯೋ ವಿಶ್ವದಾದ್ಯಂತ ಕಾರ್ಯೋನ್ಮುಕವಾಯಿತು. ಸುಮಾರು 250ಕ್ಕೂ ಹೆಚ್ಚು ಕಲಾವಿದರು ಈ ತರಬೇತಿಗಳನ್ನು ನಡೆಸುತ್ತಿದ್ದಾರೆ. ಈವರೆಗೂ ಈ ಸ್ಟುಡಿಯೋ ಸುಮಾರು 20,000 ಮಂದಿ ವಿವಿಧ ಕಲೆಗಳನ್ನು ಕಲಿಯುತ್ತಿದ್ದಾರೆ.
ಕಥಾ ನಾಯಕನ ನುಡಿ:
ಆರಂಭದಲ್ಲಿ 10 ವರ್ಷದ ಯೋಜನೆ ತಯಾರಾಗಿತ್ತು. ಆದರೆ ಕೊರೋನಾ ಸಂಸ್ಥೆಯ ಮೇಲೆ ಹೆಚ್ಚು ಪರಿಣಾಮ ಬೀರಿದ್ದು, ಎರಡು ಲಾಭದಾಯಕ ವರ್ಷಗಳನ್ನು ಹಾಳು ಮಾಡಿದೆ. ಆದರೆ ಈ ಬಗ್ಗೆ ಬೇಸರ ಇಲ್ಲ. ವರ್ಚುವಲ್ ಮೂಲಕ ಮಾಡುವ ತರಬೇತಿಗಳು ಹೆಚ್ಚು ಲಾಭದಾಯಕವಾಗಿದ್ದು, ಪ್ರತಿ ತಿಂಗಳು ಸುಮಾರು ಶೇ.2ರಷ್ಟು ಅಧಿಕ ಮಂದಿ ಹೊಸ ಕಲಾವಿದರು ಜೊತೆಯಾಗಿದ್ದಾರೆ ಎಂದು ಕಾರ್ತಿಕ್ ಸಂತಸ ಹಂಚಿಕೊಂಡರು.
ಈಗಿನ ಕಾಲದಲ್ಲಿ ಎಲ್ಲಾ ಭಾರತೀಯ ಸಂಸ್ಕೃತಿ, ಸಂಸ್ಕಾರಗಳು ಮರುಬಳಕೆಗೆ ಬರುತ್ತಿದಂತೆಯೇ… ಪ್ರಾಚೀನಾ ಭಾರತದ ಕಲೆ, ಕರಕುಶಲಗಳು ಕೂಡ ವಿಭಿನ್ನ ರೀತಿಯಲ್ಲಿ ಜನರಿಗೆ ಪರಿಚಯಿಸುವ ಮೂಲಕ ನಮ್ಮ ದೇಶದ ಅನೇಕ ಕಲೆಗಳನ್ನು ನಶಿಸಿ ಹೋಗದಂತೆ ಕಾಪಾಡಬಹುದಾಗಿದೆ.