ಹೊಸದಿಗಂತ ಡಿಜಿಟಲ್ ಡೆಸ್ಕ್:
ದುಷ್ಕರ್ಮಿಗಳು ವೈದ್ಯರೊಬ್ಬರನ್ನು ಕಾರಿನಿಂದ ಡಿಕ್ಕಿ ಹೊಡೆದು ಬಾನೆಟ್ ಮೇಲೆ 50 ಮೀಟರ್‌ವರೆಗೂ ಎಳೆದೊಯ್ದಿರುವ ಘಟನೆ ಹರಿಯಾಣದದಲ್ಲಿ ನಡೆದಿದೆ. ಘಟನೆಯ ವಿಡಿಯೋ ವೈರಲ್ ಆಗಿದೆ.
ತನಿಖಾಧಿಕಾರಿ ರವಿ ದತ್ ಪ್ರಕಾರ, ಹರಿಯಾಣದ ಪಂಚಕುಲದಲ್ಲಿ ಶನಿವಾರ ಎಂಡಿಸಿ ನಿವಾಸಿ ಡಾ.ಗಗನ್ ಎಂಬುವರು ತಮ್ಮ ಮಗನನ್ನು ಟ್ಯೂಷನ್ ನಿಂದ ಕಾರಿನಲ್ಲಿ ಮನೆಗೆ ಕರೆದುಕೊಂಡು ಹೋಗುತ್ತಿದ್ದರು. ಈ ವೇಳೆ ಪಂಚಕುಲ ಟ್ರಾಫಿಕ್ ಜಂಕ್ಷನ್‌ನ ಸೆಕ್ಟರ್ 8ರಲ್ಲಿ ಡಾ.ಗಗನ್ ಅವರ ವಾಹನವನ್ನು ಓವರ್‌ಟೇಕ್ ಮಾಡಲು ಪ್ರಯತ್ನಿಸುವಾಗ ಕಾರು ಡಿಕ್ಕಿ ಹೊಡೆದಿದೆ.
ಕೂಡಲೇ ಕಾರಿನಲ್ಲಿದ್ದವರನ್ನು ಪ್ರಶ್ನಿಸಲು ಹೋದ ಗಗನ್ ಗೆ ಡಿಕ್ಕಿ ಹೊಡೆದು ಸುಮಾರು 50 ಮೀಟರ್‌ವರೆಗೆ ಬಾನೆಟ್ ಮೇಲೆ ಎಳೆದೊಯ್ದಿದ್ದಾರೆ. ದುಷ್ಕರ್ಮಿಗಳು ಅಲ್ಲಿಂದ ಪರಾರಿಯಾಗಿದ್ದು, ಮಾಹಿತಿ ಪಡೆದ ಪೊಲೀಸರು ಸ್ಥಳಕ್ಕೆ ಆಗಮಿಸಿದರು.
ಡಾ.ಗಗನ್ ಅವರನ್ನು ತಕ್ಷಣವೇ ಸೆಕ್ಟರ್ 6 ಆಸ್ಪತ್ರೆಗೆ ಕರೆದೊಯ್ದು ಚಿಕಿತ್ಸೆ ಕೊಡಿಸಲಾಯಿತು. ಡಾ.ಗಗನ್ ದೂರಿನ ಮೇರೆಗೆ ಪಂಚಕುಲ ಪೊಲೀಸರು ಕಾರು ಮಾಲೀಕರ ವಿರುದ್ಧ ಪ್ರಕರಣ ದಾಖಲಿಸಿಕೊಂಡಿದ್ದಾರೆ. ಸಿಸಿಟಿವಿ ದೃಶ್ಯಾವಳಿಗಳನ್ನು ಪರಿಶೀಲಿಸಿ ಘಟನೆ ಕುರಿತು ಎಫ್‌ಐಆರ್ ದಾಖಲಿಸಿಕೊಂಡು ಪೊಲೀಸರು ಆರೋಪಿಗಳಿಗಾಗಿ ಹುಡುಕಾಟ ನಡೆಸುತ್ತಿದ್ದಾರೆ.