Tuesday, June 28, 2022

Latest Posts

ಫ್ಯಾಕ್ಟ್ ಚೆಕ್: ಲಸಿಕೆ ಕೊಂಡವರ ದೇಹದಲ್ಲಿ ಆಯಸ್ಕಾಂತೀಯ ಗುಣ, ವಿದ್ಯುತ್ ಪ್ರವಾಹ ಇವೆಲ್ಲ ನಿಜವಾ?

ಪ್ರೀತಿಯ ಓದುಗರೇ,
ಕೋವಿಡ್ ನಿರ್ನಾಮ ನಮ್ಮ ಕೈಯಲ್ಲೇ ಇದೆ. ಮಾಸ್ಕ್ ಧರಿಸಿ, ಸಾಮಾಜಿಕ ಅಂತರ ಕಾಯ್ದುಕೊಳ್ಳಿ, ಕೈ, ಮುಖವನ್ನು ಸ್ವಚ್ಛವಾಗಿ ಇಟ್ಟುಕೊಳ್ಳಿ. ನೀವೂ ಸುರಕ್ಷಿತರಾಗಿರಿ, ನಿಮ್ಮವರನ್ನೂ ಸುರಕ್ಷಿತರಾಗಿ ಇರುವಂತೆ ನೋಡಿಕೊಳ್ಳಿ.
………………………………………………………………………..

ಹೊಸದಿಗಂತ ಆನ್ ಲೈನ್ ಡೆಸ್ಕ್:

ಕೊರೋನಾಕ್ಕೆ ಲಸಿಕೆ ತೆಗೆದುಕೊಂಡ ನಂತರದಲ್ಲಿ ದೇಹದಲ್ಲಿ ಆಯಸ್ಕಾಂತೀಯ ಗುಣ ಬಂದಿದೆ ಎನ್ನುವ ಹಾಗೂ ದೇಹದಲ್ಲಿ ವಿದ್ಯುತ್ ಪ್ರವಾಹ ಶುರುವಾಗಿದೆ ಎಂದೆಲ್ಲ ಹೇಳುವ ವಿಡಿಯೋಗಳು ಸಾಮಾಜಿಕ ಜಾಲತಾಣಗಳಲ್ಲಿ ಇತ್ತೀಚೆಗೆ ಭಾರಿ ಸದ್ದು ಮಾಡುತ್ತಿವೆ. ಇವುಗಳ ಹಿಂದು-ಮುಂದು ವಿಚಾರಿಸದೇ ಕೆಲವು ಮುಖ್ಯವಾಹಿನಿ ಮಾಧ್ಯಮಗಳೂ ತಮ್ಮ ಡಿಜಿಟಲ್ ಆವೃತ್ತಿಯಲ್ಲಿ ಇದಕ್ಕೆ ಸಂಬಂಧಿಸಿದ ವಿಡಿಯೋಗಳನ್ನು ಬಿಟ್ಟು ಅವಕ್ಕೆ ಬರುವ ಲೈಕು- ಹಂಚಿಕೆಗಳನ್ನು ಲೆಕ್ಕ ಹಾಕಿಕೊಂಡಿವೆ. 

ವಿಡಿಯೋ ಒಂದರಲ್ಲಿ ವ್ಯಕ್ತಿಯೊಬ್ಬರ ಮೈಗೆ ಚಮಚ ಮತ್ತು ಕೆಲ ನಾಣ್ಯಗಳು ಅಂಟಿಕೊಳ್ಳುವುದನ್ನು ತೋರಿಸಲಾಗಿದೆ. ಆ ವ್ಯಕ್ತಿ ಲಸಿಕೆ ತೆಗೆದುಕೊಂಡ ನಂತರ ದೇಹದಲ್ಲಿ ಆಯಸ್ಕಾಂತೀಯ ಗುಣ ಹೆಚ್ಚಿದೆ ಅಂತ ವಿಡಿಯೋ ಮಾಡಿದವರ ವಾದ.
ಇನ್ನೊಂದು ವಿಡಿಯೋದಲ್ಲಿ ವ್ಯಕ್ತಿಯೊಬ್ಬ ತನ್ನ ಮೈಗೆ ಎಲ್ ಇ ಡಿ ಬಲ್ಬು ಹಿಡಿದಾಗ ಅದು ಪ್ರಜ್ವಲಿಸಿದೆ. ಅಲ್ಲೂ ಸಹ ಲಸಿಕೆ ತೆಗೆದುಕೊಂಡ ನಂತರವೇ ಈ ಶಕ್ತಿ ಬಂದಿದ್ದಾಗಿ ಹೇಳಲಾಗಿದೆ. 

ಹಾಗಾದರೆ ಇವುಗಳ ಸತ್ಯವೇನು? ಮೈಯಲ್ಲಿ ಬೆವರು, ಜಿಡ್ಡಿನಂಶ ಇತ್ಯಾದಿಗಳಿದ್ದಾಗ ನಾಣ್ಯ ಅಥವಾ ಕಡಿಮೆ ಭಾರದ ಪದಾರ್ಥಗಳು ಅಂಟಿಕೊಂಡು ನಿಲ್ಲುವುದು ಅಸಾಧ್ಯದ ವಿಷಯವೇನೂ ಅಲ್ಲ. ಹೀಗೆ ಚಮಚ-ನಾಣ್ಯಗಳನ್ನು ಮೈಗಂಟಿಸಿಕೊಂಡು ವಿಡಿಯೋದಲ್ಲಿ ಕಂಡುಬರುವ ವ್ಯಕ್ತಿಯ ಪರಿವಾರವನ್ನು ಟೈಮ್ಸ್ ಆಫ್ ಇಂಡಿಯಾ ಮಾತನಾಡಿಸಿದಾಗ, “ಲಸಿಕೆ ಪಡೆದ ನಂತರವೇ ಹೀಗಾಯಿತೆನ್ನಲು ಆಧಾರಗಳಿಲ್ಲ. ಏಕೆಂದರೆ ಲಸಿಕೆಗೂ ಮೊದಲು ಈ ಪ್ರಯೋಗವನ್ನು ಮಾಡಿರಲಿಲ್ಲ. ಲಸಿಕೆ ಪಡೆದ ನಂತರ ಆಯಸ್ಕಾಂತೀಯ ಗುಣ ಬರುತ್ತದೆ ಅಂತ ಎಲ್ಲೋ ಕೇಳಿದ್ದನ್ನು ಪರೀಕ್ಷಿಸುವುದಕ್ಕೆ ಹೋದಾಗಲಷ್ಟೇ ಹೀಗಾಯಿತು” ಅಂತ ಹೇಳಿದ್ದಾರೆ. 

ಲಸಿಕೆಯಲ್ಲಿ ಆಯಸ್ಕಾಂತೀಯ ಶಕ್ತಿ ಬರುವಂಥ ಯಾವುದೇ ಪದಾರ್ಥಗಳ ಬಳಕೆಯೇ ಆಗಿರುವುದಿಲ್ಲ. ಕೆಲವರ ದೇಹಕ್ಕೆ ಚಮಚವೋ ನಾಣ್ಯವೋ ಅಂಟಿಕೊಳ್ಳುವುದಕ್ಕೂ ಲಸಿಕೆಗಳಿಗೂ ಸಂಬಂಧವೇ ಇಲ್ಲ ಎಂದು ಪ್ರೆಸ್ ಇನ್ಫರ್ಮೇಷನ್ ಬ್ಯೂರೊ ಸಹ ಮಾಹಿತಿ ಹೊರಡಿಸಿದೆ.

ಇನ್ನು, ಲಸಿಕೆ ಪಡೆದ ಮೇಲೆ ದೇಹದಲ್ಲಿ ವಿದ್ಯುತ್ ಪ್ರವಹಿಸುತ್ತಿದೆ ಎನ್ನುವ ದಾವೆಗಳನ್ನು ಗಮನಿಸೋಣ. ಇವರಂತೂ ತಮ್ಮ ಕೈಗೆ ಎಲ್ ಇ ಡಿ ರಿಚಾರ್ಜೆಬಲ್ ಬಲ್ಬ್ ಹಿಡಿದು ಅದು ಜಗ್ಗನೇ ಹೊತ್ತಿಕೊಳ್ಳುವುದನ್ನು ತೋರಿಸುತ್ತಾರೆ. 

ಕೆಲವರ ದೇಹ ಪ್ರಕೃತಿ ಇಂಥ ಪರಿಣಾಮ ಉಂಟುಮಾಡುವುದು ಹೌದು. ಹಾಗಂತ ಇದಕ್ಕೂ ಲಸಿಕೆಗೂ ಏನೇನೂ ಸಂಬಂಧವಿಲ್ಲ. ಏಕೆಂದರೆ, ಈ ಲಸಿಕೆ ಬರುವುದಕ್ಕೂ ಮೊದಲೇ, ಅಷ್ಟೇಕೆ ಕೊರೋನಾ ಸಾಂಕ್ರಾಮಿಕವೇ ಶುರುವಾಗುವುದಕ್ಕೆ ಮುಂಚೆಯೇ ಇಂಥ ವಿದ್ಯಮಾನಗಳು ವರದಿಯಾಗಿವೆ. 

ಕೇರಳದ ಹುಡುಗನೊಬ್ಬ ರಿಚಾರ್ಜೆಬಲ್ ಎಲ್ ಇ ಡಿ ಬಲ್ಬನ್ನು ಕೈಯಲ್ಲಿ ಹಿಡಿದಾಗ ಅದು ಬೆಳಗುವ ವಿದ್ಯಮಾನ 2018ರಲ್ಲಿ ವರದಿಯಾಗಿದ್ದನ್ನು ಗಮನಿಸಬೇಕು. 

ಆ ಹುಡುಗನ ಪ್ರಕರಣದಲ್ಲಿ ಕಂಡುಬಂದಿದ್ದು ಇಷ್ಟು- ಆತನದ್ದು ಬಹಳ ಬೆವರುವ ದೇಹ. ಹೀಗೆ ಲವಣಾಂಶ ಹೆಚ್ಚಿಸಿಕೊಂಡಿರುವ ಚರ್ಮ ಉತ್ತಮ ವಾಹಕವಾಗಿ ಕೆಲಸ ಮಾಡುತ್ತಿದ್ದುದರಿಂದ ಬಲ್ಬು ಬೆಳಗುತ್ತಿತ್ತು.
ಗಮನಿಸಿ. ಈ ಹುಡುಗನೇ ಆಗಲಿ, ಅಥವಾ ಈಗ ಲಸಿಕೆ ತೆಗೆದುಕೊಂಡ ನಂತರ ಬಲ್ಬು ಬೆಳಗಿಸುತ್ತಿದ್ದೇವೆ ಎನ್ನುವವರಾಗಲೀ ಯಾವುದೇ ಬಲ್ಬನ್ನು ಬೆಳಗಿಸಲಾರರು. ಎಲ್ ಇ ಡಿ ರಿಚಾರ್ಜೆಬಲ್ ಬಲ್ಬು ಮಾತ್ರವೇ. ಏಕೆಂದರೆ ಚಾರ್ಜ್ ಮಾಡಬಹುದಾದ ಈ ಬಲ್ಬಿನ ಹಿಂಬದಿ ಮೊನೆಯ ಎರಡು ತುದಿಗಳು ಚರ್ಮಕ್ಕೆ ಸರಿಯಾಗಿ ಒತ್ತಲ್ಪಟ್ಟಾಗ ಲವಣಾಂಶ ಹೆಚ್ಚಿರುವ ದೇಹ ತನ್ನ ಉಷ್ಣವನ್ನು ವೈರಿನ ರೀತಿಯಲ್ಲಿ ಬಲ್ಬಿಗೆ ಮುಟ್ಟಿಸಿ ಅದು ಬೆಳಗುತ್ತದೆ. 

ಲವಣಾಂಶ ಯುಕ್ತ ದೇಹದವರು ಉಂಟುಮಾಡಬಹುದಾದ ಈ ಬಗೆಯ ಪರಿಣಾಮಕ್ಕೂ ಲಸಿಕೆಗೂ ಯಾವ ಸಂಬಂಧವೂ ಇಲ್ಲ. 

ಈ ಸುದ್ದಿ ಇತರರೊಂದಿಗೂ ಹಂಚಿಕೊಳ್ಳಿ

Whatsapp Group
Telegram

Latest Posts

spot_img
spot_img
spot_img
spot_img

Don't Miss