ಹೊಸದಿಗಂತ ವರದಿ, ಕಾಸರಗೋಡು:
ಹೆಣ್ಣು ಮಕ್ಕಳನ್ನು ಒತ್ತಾಯಪೂರ್ವಕ ಶಬರಿಮಲೆಗೆ ಕರೆದೊಯ್ಯಲು ಯತ್ನಿಸಿದುದು ಸರಿಯಲ್ಲ ಎಂದು ಸಿಪಿಐ ನೇತಾರ ಸಿ.ದಿವಾಕರನ್ ಹೇಳಿಕೆ ನೀಡಿದ್ದಾರೆ. ಹಾಗಿದ್ದರೆ ಇದು ಸರಕಾರದ ನಿಲುವಾಗಿದೆ. ಆದ್ದರಿಂದ ಇವರ ಹೇಳಿಕೆಯನ್ನು ಸಿಪಿಐ ಮತ್ತು ಎಡರಂಗ ಸರಕಾರವು ಅಂಗೀಕರಿಸುತ್ತದೆಯೇ ಎಂಬುದನ್ನು ಸಿಪಿಐ ಕಾರ್ಯದರ್ಶಿ ಕಾನಂ ರಾಜೇಂದ್ರನ್ ಮತ್ತು ಎಡರಂಗದ ಘಟಕ ಪಕ್ಷಗಳು ಸ್ಪಷ್ಟಪಡಿಸಬೇಕು ಎಂದು ಬಿಜೆಪಿ ಕೇರಳ ರಾಜಾಧ್ಯಕ್ಷ ಕೆ.ಸುರೇಂದ್ರನ್ ಒತ್ತಾಯಿಸಿದ್ದಾರೆ.
ಬಿಜೆಪಿ ಕಾಸರಗೋಡು ಜಿಲ್ಲಾ ಕಾರ್ಯಾಲಯದಲ್ಲಿ ಸೋಮವಾರ ನಡೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಚುನಾವಣೆ ಸಮೀಪಿಸುತ್ತಿದ್ದಂತೆ ಕೇರಳದ ಎಡ ಮತ್ತು ಐಕ್ಯರಂಗಗಳು ವಿವಿಧ ರೀತಿಯ ಪ್ರಚಾರ ನಡೆಸಿ ಜನರನ್ನು ಮೋಸಗೊಳಿಸಲು ಯತ್ನಿಸುತ್ತಿವೆ ಎಂದು ಕೆ.ಸುರೇಂದ್ರನ್ ಆರೋಪಿಸಿದರು.
ಆಳ ಸಮುದ್ರ ಮೀನುಗಾರಿಕೆಗೆ ಸಂಬಂಧಿಸಿ ಮಾಡಲಾದ ನೂತನ ಒಪ್ಪಂದವು ಪಿಣರಾಯಿ ವಿಜಯನ್ ಮತ್ತು ಎಡರಂಗದ ಯೋಜನೆಯಾಗಿದೆ. ಆದರೆ ಈಗ ಇದರ ಹೊಣೆಯನ್ನು ವಿನಾಕಾರಣ ಅಧಿಕಾರಿಗಳ ತಲೆಗೆ ಹಾಕಿ ನುಣುಚಿಕೊಳ್ಳಲು ಯತ್ನಿಸಲಾಗುತ್ತಿದೆ. ಇಂತಹ ಯಾವುದೇ ಒಪ್ಪಂದಕ್ಕೆ ಕೇಂದ್ರ ಸರಕಾರದ ಅನುಮತಿ ಬೇಕಾಗಿದೆ. ಆದರೆ ರಾಜ್ಯ ಸರಕಾರ ಅದನ್ನು ಮಾಡಿಲ್ಲö. ಕಾನೂನು ಉಲ್ಲಂಘನೆಯಲ್ಲಿ ಪ್ರಮುಖ ಸೂತ್ರಧಾರ ಪಿಣರಾಯಿ ವಿಜಯನ್ ಆಗಿದ್ದಾರೆ. ಆದ್ದರಿಂದ ಈ ಬಗ್ಗೆ ಸಮಗ್ರ ತನಿಖೆ ನಡೆಸಬೇಕೆಂದು ಕೆ.ಸುರೇಂದ್ರನ್ ಆಗ್ರಹಿಸಿದರು.
ಆಚಾರ ಅನುಷ್ಠಾನಗಳನ್ನು ಉಲ್ಲಂಘಿಸಿ ಶಬರಿಮಲೆಗೆ ಯುವತಿಯರು ಪ್ರವೇಶಿಸಿದಾಗ ಅದನ್ನು ವಿರೋಧಿಸಿ ಸಂಘ ಪರಿವಾರದ ಕಾರ್ಯಕರ್ತರು ಭಾರೀ ಹೋರಾಟ ನಡೆಸಿದ್ದರು. ಇದರ ಹೆಸರಲ್ಲಿ ಸಂಘ ಪರಿವಾರದ ಅಪಾರ ಮಂದಿ ಕಾರ್ಯಕರ್ತರನ್ನು ವಿನಾಕಾರಣ ಜೈಲಿಗೆ ಅಟ್ಟಲಾಯಿತು. ಅದರೆ ಈ ಸಂದರ್ಭದಲ್ಲಿ ಮಾಜಿ ಮುಖ್ಯಮಂತ್ರಿ ಉಮ್ಮನ್ ಚಾಂಡಿ ಯಾವುದೇ ಹೇಳಿಕೆ ನೀಡದೆ ಸುಮ್ಮನೆ ಕೈಕಟ್ಟಿ ಕುಳಿತಿದ್ದರು ಎಂದರು.
ರಾಜ್ಯದ ಮುಖ್ಯಮಂತ್ರಿ ಹಾಗೂ ಸಚಿವರು ಹಲವಾರು ಬಾರಿ ವಿದೇಶ ಪ್ರಯಾಣ ನಡೆಸಿದ್ದಾರೆ. ಸ್ಪೀಕರ್ ಪಿ.ಶ್ರೀರಾಮಕೃಷ್ಣನ್ 24 ಬಾರಿ ವಿದೇಶ ಪ್ರಯಾಣ ಕೈಗೊಂಡಿದ್ದಾರೆ. ಈ ಬಗ್ಗೆ ಸಮಗ್ರ ತನಿಖೆ ನಡೆಸಬೇಕು. ಹಿಂದೆ ಕೇರಳವನ್ನು ಹೊರತುಪಡಿಸಿ ದೇಶದ ಇತರ ರಾಜ್ಯಗಳ ಹಲವಾರು ನೇತಾರರು ಕೋಟ್ಯಾಧಿಪತಿಗಳಾಗಿದ್ದರು. ಆದರೆ ಈಗ ಕಾರ್ಮಿಕರ ಪಕ್ಷವೆಂದು ಹೇಳಿಕೊಳ್ಳುವ ಕೇರಳದ ಸಿಪಿಎಂ ನೇತಾರರು ಭಾರೀ ದೊಡ್ಡ ಕೋಟ್ಯಾಧಿಪತಿಗಳಾಗಿದ್ದಾರೆ. ಆದುದರಿಂದ ಇವರ ಅನಧಿಕೃತ ಆಸ್ತಿ ಕುರಿತು ಬಹಿರಂಗಪಡಿಸಬೇಕು. ಸಿಪಿಎಂ ನೇತಾರರ ಅನಧಿಕೃತ ಮೊತ್ತವನ್ನು ಸಹಕಾರಿ ಬ್ಯಾಂಕ್ಗಳಲ್ಲಿ ಬೆನಾಮಿ ಹೆಸರಲ್ಲಿ ಠೇವಣಿ ಹೂಡಲಾಗಿದೆ ಎಂದು ಬಿಜೆಪಿ ರಾಜ್ಯಾಧ್ಯಕ್ಷರು ತಿಳಿಸಿದರು.
ಸುದ್ದಿಗೋಷ್ಠಿಯಲ್ಲಿ ಬಿಜೆಪಿ ಮಾಜಿ ರಾಜ್ಯಾಧ್ಯಕ್ಷ ಕುಮ್ಮನಂ ರಾಜಶೇಖರನ್, ಜಿಲ್ಲಾಧ್ಯಕ್ಷ , ನ್ಯಾಯವಾದಿ ಕೆ.ಶ್ರೀಕಾಂತ್ ಉಪಸ್ಥಿತರಿದ್ದರು.