ಬೇರ್ಪಟ್ಟ ಮಕ್ಕಳ ಬಳಿಗೆ ಸಾಗಿತು ‘ತಾಯಿ’ಯ ಪಯಣ: ಕಂದನ ಮುಖಕ್ಕೆ ಹೊಸ ಕಳೆ ನೀಡಿದ ಸುಳ್ಯದ ಅರಣ್ಯಾಧಿಕಾರಿ!

ಹೊಸದಿಗಂತ ಡಿಜಿಟಲ್‌ ಡೆಸ್ಕ್:

ಕಾರಿನ ಬಂಪರ್ ಒಳಗೆ ಸಿಲುಕಿ ಬರೋಬ್ಬರಿ 70 ಕಿಲೋ ಮೀಟರ್ ಚಲಿಸಿ ಭಾರೀ ಸುದ್ದಿ ಮಾಡಿದ್ದ ಶ್ವಾನ ಈಗ ಮತ್ತೆ ತನ್ನ ಕಂದಮ್ಮಗಳೊಂದಿಗೆ ಸೇರಿಕೊಂಡಿದ್ದರೆ, ತನ್ನ ಸತತ ಪ್ರಯತ್ನ ಫಲ ನೀಡಿದ ಖುಷಿಯಲ್ಲಿದ್ದಾಳೆ ಪುಟಾಣಿ ಸಾನ್ವಿ!

ಸಾನ್ವಿ ಯಾರು?

ಈ ಸಾನ್ವಿ, ಸುಳ್ಯದ ಬಳ್ಪ ಉಪ ವಲಯ ಅರಣ್ಯಾಧಿಕಾರಿ ಸಂತೋಷ್ ರೈ ಅವರ ಪುತ್ರಿ. ಶ್ವಾನ ಸುರಕ್ಷಿತವಾಗಿ ಮತ್ತೆ ತನ್ನ ಮರಿಗಳೊಂದಿಗೆ ಸೇರುವಲ್ಲಿ ಈಕೆಯ ಪಾತ್ರ ಮಾತ್ರ ಗಮನಾರ್ಹವಾದುದು.

ದಿನವೂ ಸಾನ್ವಿಯ ಮನೆಗೆ ಬರುತ್ತಿತ್ತು…

ಕಾರೊಂದಕ್ಕೆ ಡಿಕ್ಕಿಯಾಗಿ ಬಂಪರ್ ಒಳಗೆ ಸಿಲುಕಿ ಸುಮಾರು 70 ಕಿಲೋ ಮೀಟರ್ ಸಾಗಿ ಬದುಕಿ ಉಳಿದ ಈ ಶ್ವಾನ ಅರಣ್ಯಾಧಿಕಾರಿ ಸಂತೋಷ್ ರೈ ಅವರ ಕ್ವಾರ್ಟಸ್‌ಗೆ ದಿನವೂ ಬರುತ್ತಿತ್ತು ಮಾತ್ರವಲ್ಲ ಇದಕ್ಕೆ ರೈ ಹಾಗೂ ಅವರ ಪುತ್ರಿ ಸಾನ್ವಿ ಆಹಾರವನ್ನೂ ಹಾಕುತ್ತಿದ್ದರು. ಹೀಗೆ ಇವರ ನಡುವೆ ಒಂದು ರೀತಿಯ ಅವಿನಾಭಾವ ಸಂಬಂಧ ಏರ್ಪಟ್ಟಿತ್ತು. ಇದರ ನಡುವೆಯೇ ಅಪಘಾತದ ಘಟನೆ ನಡೆದಿದ್ದು, ವಿಷಯ ತಿಳಿದ ಸಾನ್ವಿ, ತಂದೆಯಲ್ಲಿ ಹೇಗಾದರೂ ಶ್ವಾನವನ್ನು ಪತ್ತೆಹಚ್ಚಿ ಮರಿಗಳೊಂದಿಗೆ ಸೇರಿಸುವಂತೆ ಪಟ್ಟು ಹಿಡಿದಿದ್ದಳು.

ಶ್ವಾನದ ಶೋಧದಲ್ಲಿ ತೊಡಗಿದ ರೈ ಅವರಿಗೆ ಅದು ಪುತ್ತೂರಿನ ಮನೆಯೊಂದರಲ್ಲಿರುವ ಮಾಹಿತಿ ಸಿಕ್ಕಿತ್ತು. ಆದರೆ ಮನೆ ಯಾವುದು ಎಂದು ಗೊತ್ತಾಗಿರಲಿಲ್ಲ. ತೀವ್ರ ಹುಡುಕಾಟದ ಬಳಿಕ ಶ್ವಾನವನ್ನು ಪತ್ತೆಹಚ್ಚಿದ ಅವರು, ಕಾರಿನಲ್ಲಿ ಕರೆತಂದು ಮತ್ತೆ ಮರಿಗಳೊಂದಿಗೆ ಸೇರಿಸಿದ್ದಾರೆ.
ಇತ್ತ ತನ್ನ ಮನೆ ಹಾಗೂ ಮರಿಗಳ ಬಳಿಗೆ ಶ್ವಾನ ವಾಪಸ್ ಅಗಿದ್ದನ್ನು ಕಂಡು ಸಾನ್ವಿ ಖುಷಿಯಾಗಿದ್ದರೆ, ಅತ್ತ ಮೂಕ ಪ್ರಾಣಿಯೊಂದಕ್ಕೆ ಬದುಕು ಒದಗಿಸುವ ಮೂಲಕ ಮಗಳ ಮುಖದಲ್ಲಿ ಮಂದಹಾಸಕ್ಕೆ ಕಾರಣವಾದ ತೃಪ್ತಿಯಲ್ಲಿದ್ದಾರೆ ಅರಣ್ಯಾಧಿಕಾರಿ ಸಂತೋಷ್ ರೈ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!