ಪ್ರೀತಿಯ ಓದುಗರೇ,
ಕೋವಿಡ್ ನಿರ್ನಾಮ ನಮ್ಮ ಕೈಯಲ್ಲೇ ಇದೆ. ಮಾಸ್ಕ್ ಧರಿಸಿ, ಸಾಮಾಜಿಕ ಅಂತರ ಕಾಯ್ದುಕೊಳ್ಳಿ, ಕೈ, ಮುಖವನ್ನು ಸ್ವಚ್ಛವಾಗಿ ಇಟ್ಟುಕೊಳ್ಳಿ. ನೀವೂ ಸುರಕ್ಷಿತರಾಗಿರಿ, ನಿಮ್ಮವರನ್ನೂ ಸುರಕ್ಷಿತರಾಗಿ ಇರುವಂತೆ ನೋಡಿಕೊಳ್ಳಿ.
…………………………………………………………………
ದಿಗಂತ ವರದಿ ರಾಮನಗರ:
‘ಸಕಾಲಕ್ಕೆ ರಕ್ತ ಸಿಗದೆ ಪ್ರತಿನಿತ್ಯ ನೂರಾರು ಮಂದಿ ಸಾವನ್ನಪ್ಪುತ್ತಿದ್ದು, ಯುವಸಮೂಹ ಸ್ವಯಂಪ್ರೇರಿತರಾಗಿ ರಕ್ತದಾನ ಮಾಡಲು ಮುಂದಾಗಬೇಕು’ ಎಂದು ವಿಧಾನ ಪರಿಷತ್ ಸದಸ್ಯ ಸಿ.ಪಿ. ಯೋಗೇಶ್ವರ್ ಸಲಹೆ ನೀಡಿದರು.
ಪಟ್ಟಣದ ಕೊಲ್ಲಾಪುರದಮ್ಮ ದೇವಸ್ಥಾನದ ಆವರಣದಲ್ಲಿ ಸ್ವಾತಂತ್ರ್ಯ ಹೋರಾಟಗಾರರು ಹಾಗೂ ಹುತಾತ್ಮ ಯೋಧರ ಸವಿನೆನಪು, ಕ್ರಾಂತಿಕಾರಿ ಹೋರಾಟಗಾರ ಚಂದ್ರಶೇಖರ್ ಆಜಾದ್ ಸವಿನೆನಪಿನ ಅಂಗವಾಗಿ ಬಿಜೆಪಿ ಗ್ರಾಮಾಂತರ ಯುವ ಮೋರ್ಚಾ ಹಾಗೂ ರಾಷ್ಟ್ರೋತ್ಥಾನ ರಕ್ತನಿಧಿಯ ಸಹಯೋಗದೊಂದಿಗೆ ಶುಕ್ರವಾರ ನಡೆದ ಸ್ವಯಂಪ್ರೇರಿತ ರಕ್ತದಾನ ಶಿಬಿರ ಹಾಗೂ ಉಚಿತ ಕಣ್ಣಿನ ತಪಾಸಣಾ ಶಿಬಿರ ಉದ್ಘಾಟಿಸಿ ಅವರು ಮಾತನಾಡಿದರು.
ಎಲ್ಲೆಡೆ ಕೊರೊನಾ ಸೋಂಕು ಹರಡಿರುವುದರಿಂದ ಕಳೆದ ಒಂದೂವರೆ ವರ್ಷದಿಂದ ರಾಜ್ಯದಲ್ಲಿ ನಡೆಯುತ್ತಿದ್ದ ಸ್ವಯಂಪ್ರೇರಿತ ರಕ್ತದಾನ ಶಿಬಿರಗಳು ನಿಂತು ಹೋಗಿವೆ. ರಾಜ್ಯದಲ್ಲಿ ಕೊರೊನಾ ಕಾಲಿಡುವ ಮುನ್ನ ರಾಜ್ಯದಲ್ಲಿನ ಸಂಘ, ಸಂಸ್ಥೆಗಳು ಐದಾರು ತಿಂಗಳಿಗೊಮ್ಮೆ ರಕ್ತದಾನ ಶಿಬಿರ ಆಯೋಜಿಸಿ ರಕ್ತ ಸಂಗ್ರಹಣೆ ಮಾಡಿ ರಕ್ತನಿಧಿ ಕೇಂದ್ರಗಳಿಗೆ ನೀಡುತ್ತಿದ್ದರು. ಇದರಿಂದ ರಕ್ತ ಅವಶ್ಯಕವಾಗಿದ್ದವರಿಗೆ ಅನುಕೂಲವಾಗುತ್ತಿತ್ತು ಎಂದರು.
ಸ್ವಾತಂತ್ರ್ಯ ಹೋರಾಟಗಾರರ ಸವಿನೆನಪಿನ ಅಂಗವಾಗಿ ರಕ್ತದಾನ ಶಿಬಿರ ಏರ್ಪಡಿಸಿರುವುದು ಉತ್ತಮ ಬೆಳವಣಿಗೆ. ಇಂತಹ ಮಹತ್ಕಾರ್ಯಗಳು ಮತ್ತಷ್ಟು ನಡೆಯಬೇಕು. ಇದು ಶ್ಲಾಘನೀಯ ಕಾರ್ಯ ಎಂದು ಹೇಳಿದರು.
ಶಿಬಿರದಲ್ಲಿ 118 ಯೂನಿಟ್ ರಕ್ತ ಸಂಗ್ರಹ ಮಾಡಲಾಯಿತು. ಇದೇ ವೇಳೆ ದೃಷ್ಟಿ ಐ ಕ್ಲಿನಿಕ್ ಸಹಯೋಗದಲ್ಲಿ ಉಚಿತ ಕಣ್ಣಿನ ತಪಾಸಣಾ ಶಿಬಿರ ಆಯೋಜಿಸಿ 50ಕ್ಕೂ ಹೆಚ್ಚು ಮಂದಿಗೆ ಸೂಕ್ತ ವೈದ್ಯಕೀಯ ಸಲಹೆ, ಚಿಕಿತ್ಸೆ ನೀಡಲಾಯಿತು.
ಜಿ.ಪಂ. ಮಾಜಿ ಸದಸ್ಯ ಸಿ.ಪಿ. ರಾಜೇಶ್, ಚನ್ನಪಟ್ಟಣ ಯೋಜನಾ ಪ್ರಾಧಿಕಾರದ ಅಧ್ಯಕ್ಷ ರಾಂಪುರ ಮಲವೇಗೌಡ, ಬಿಜೆಪಿ ಜಿಲ್ಲಾ ಘಟಕದ ಅಧ್ಯಕ್ಷ ಹುಲುವಾಡಿ ದೇವರಾಜು, ಉಪಾಧ್ಯಕ್ಷ ರವೀಶ್, ತಾಲ್ಲೂಕು ಘಟಕದ ಅಧ್ಯಕ್ಷ ಕೆ.ಟಿ. ಜಯರಾಮು, ನಗರ ಘಟಕದ ಅಧ್ಯಕ್ಷ ಶಿವಕುಮಾರ್, ಮುಖಂಡರಾದ ಎಂ.ಎನ್. ಆನಂದಸ್ವಾಮಿ, ಹರೂರು ರಾಜಣ್ಣ, ರವೀಶ್, ಮಂಜುನಾಥ್, ಚಕ್ಕಲೂರು ಚೌಡಯ್ಯ, ರಾಮಚಂದ್ರು
ಹಾಜರಿದ್ದರು.