ಪಿಸಿಒಎಸ್, ಪಿಸಿಒಡಿ ಬಗ್ಗೆ ಉದಾಸೀನ ಬೇಡ, ಬಂಜೆತನಕ್ಕೆ ಇವೂ ಕಾರಣ

ಹೊಸದಿಗಂತ ಡಿಜಿಟಲ್ ಡೆಸ್ಕ್:

ಮೊದಲ ಬಾರಿಗೆ ಕೊರೋನಾ ಬಂದಾಗ ಏನೆಲ್ಲಾ ಆಗಿತ್ತು ನೆನಪಿದೆಯಾ? ಮನೆಯಲ್ಲೇ ಕೆಲಸ, ಇನ್ನು ಎಷ್ಟೋ ಮಂದಿ ಕೆಲಸ ಕಳೆದುಕೊಂಡು ಮನೆಯಲ್ಲಿ ಉಳಿದರು.

ಮೊದಮೊದಲು ಲಾಕ್‌ಡೌನ್‌ನಿಂದಾಗಿ ಮನೆಯಲ್ಲೇ ಉಳಿದು, ಯಾವುದೇ ವ್ಯಾಯಾಮ, ಓಡಾಟ ಇಲ್ಲದೆ ಜನರ ತೂಕ ಹೆಚ್ಚಾಯ್ತು, ಬಗೆಬಗೆಯ ಖಾದ್ಯ ಮನೆಯಲ್ಲಿಯೇ ತಯಾರಿಸಿ ತಿಂದು ಎಲ್ಲರೂ ತಮ್ಮ ಹಳೆ ಬಟ್ಟೆಗಳಲ್ಲಿ ಫಿಟ್ ಆಗದಷ್ಟು ದಪ್ಪ ಆಗಿದ್ದರು.

ಈ ತೂಕ ಹೆಚ್ಚಳ ಮಹಿಳೆಯರಲ್ಲಿ ನಾನಾ ಸಮಸ್ಯೆಗೆ ಕಾರಣವಾಗಿದೆ. ಸಾಂಕ್ರಾಮಿಕ ಸಮಯದಲ್ಲಿ ತೂಕ ಹೆಚ್ಚಾಗುವುದರಿಂದ ಮಹಿಳೆಯರಲ್ಲಿ ಪಿಸಿಒಎಸ್ ಸಂಭವ ಹೆಚ್ಚಿಸುತ್ತದೆ.

ಅನಾರೋಗ್ಯಕರ ಜೀವನಶೈಲಿ:
ದೇಶಾದ್ಯಂತ ಪಾಲಿಸಿಸ್ಟಿಕ್ ಓವರಿ ಸಿಂಡ್ರೋಮ್ ಹಾಗೂ ಪಾಲಿಸಿಸ್ಟಿಕ್ ಓವರಿ ಡಿಸಾರ್ಡರ್‌ನಿಂದ ಬಳಲುತ್ತಿರುವ ಮಹಿಳೆಯರ ಸಂಖ್ಯೆ ಹೆಚ್ಚುತ್ತಿದೆ. ಸಾಂಕ್ರಾಮಿಕ ಸಮಯದಲ್ಲಿ ದೈಹಿಕ ಚಟುವಟಿಕೆಗಳ ಕೊರತೆ ಹಾಗೂ ಅನಾರೋಗ್ಯಕರ ಜೀವನಶೈಲಿ ಈ ಸಮಸ್ಯೆಗೆ ಕಾರಣ ಎಂದು ವೈದ್ಯರು ಹೇಳುತ್ತಾರೆ.

ವ್ಯಾಯಾಮದ ಕೊರತೆ:
ಪಿಸಿಒಎಸ್ ಹಾಗೂ ಪಿಸಿಒಡಿ ಬರುವುದಕ್ಕೆ ಮೂಲ ಕಾರಣ ವ್ಯಾಯಾಮದ ಕೊರತೆ ಹಾಗೂ ತೂಕ ಹೆಚ್ಚಳ. ಪ್ಯಾಂಡಮಿಕ್ ವೇಳೆ ಅತಿ ಹೆಚ್ಚು ಮಂದಿಯಲ್ಲಿ ತೂಕ ಹೆಚ್ಚಳವಾಗಿದೆ, ಎರಡೇ ವರ್ಷದಲ್ಲಿ 15-20 ಕೆ.ಜಿ. ತೂಕ ಹೆಚ್ಚಿಸಿಕೊಂಡ ರೋಗಿಗಳನ್ನು ನೋಡಿದ್ದೇವೆ ಎನ್ನುತ್ತಾರೆ ಪರಿಣತರು.

ಬಂಜೆತನದ ಸಾಮಾನ್ಯ ಕಾರಣ:
ಪಿಸಿಒಎಸ್ ಎಂಡೋಕ್ರೈನ್ ಕಂಡೀಷನ್ ಆಗಿದೆ, ಇದು ಸ್ತ್ರೀ ಸಂತಾನೋತ್ಪತ್ತಿ ವ್ಯವಸ್ಥೆಯಲ್ಲಿ ಹಾರ್ಮೋನ್‌ಗಳ ಅಸಮತೋಲನಕ್ಕೆ ಕಾರಣವಾಗುತ್ತವೆ. ಇದರಿಂದಾಗಿ ಅಂಡಾಶಯ ಊದಿಕೊಂಡು, ಬಲಿಯದ ಮೊಟ್ಟೆಗಳ ಸಣ್ಣ ಚೀಲವೊಂದರ ರಚನೆಯಾಗುತ್ತದೆ. ಇದು ಭಾರತದಲ್ಲಿ ಬಂಜೆತನದ ಸಾಮಾನ್ಯ ಕಾರಣಗಳಲ್ಲಿ ಒಂದಾಗಿದೆ.

ಐವರಲ್ಲಿ ಒಬ್ಬರಿಗೆ ಪಿಸಿಒಎಸ್:
ಸೆಪ್ಟೆಂಬರ್ ತಿಂಗಳನ್ನು ಪಿಸಿಒಎಸ್ ಜಾಗೃತಿ ತಿಂಗಳು ಎನ್ನಲಾಗುತ್ತದೆ. ಉದ್ಯೋಗಿ ಆರೋಗ್ಯ ವಿಮಾ ವೇದಿಗೆ ಪ್ಲಮ್‌ನ ಅಧ್ಯಯನದ ಪ್ರಕಾರ ಭಾರತದಲ್ಲಿ ಐವರಲ್ಲಿ ಒಬ್ಬ ಮಹಿಳೆ ಪಿಸಿಒಎಸ್‌ನಿಂದ ಬಳಲುತ್ತಿದ್ದಾರೆ.

ಪಿಸಿಒಎಸ್ ಲಕ್ಷಣಗಳೇನು?
ಕೂದಲು ಉದುರುವಿಕೆ, ಮೊಡವೆ, ಮುಖದ ಮೇಲೆ ಕೂದಲು,ತೂಕ ಹೆಚ್ಚಳ,ಅನಿಯಮಿತ ಪಿರಿಯಡ್ಸ್ ಸೈಕಲ್, ಅಧಿಕ ರಕ್ತಸ್ರಾವ. ಪಿಸಿಒಎಸ್‌ನಿಂದ ಶೇ.80ರಷ್ಟು ಮಹಿಳೆಯರು ಬಂಜೆತನ ಸಮಸ್ಯೆಯನ್ನು ಎದುರಿಸುತ್ತಿದ್ದಾರೆ ಎಂದು ವರದಿ ಹೇಳಿದೆ.

ಪಿಸಿಒಡಿ, ಪಿಸಿಒಎಸ್ ಎರಡೂ ಒಂದೇನಾ?
ಇವೆರಡೂ ಒಂದೇ ಅಲ್ಲ. ಎರಡೂ ದೋಷಪೂರಿತ ಅಂಡೋತ್ಪತ್ತಿ ಹಾಗೂ ಅನಿಯಮಿತ ಪಿರಿಯಡ್ಸ್ ಸೈಕಲ್‌ಗಳನ್ನು ಉಂಟುಮಾಡುತ್ತದೆ. ಆದರೆ ಪಿಸಿಒಡಿಯಲ್ಲಿ ಅಂಡಾಶಯ ಮಾತ್ರ ಪರಿಣಾಮ ಬೀರುತ್ತದೆ. ಇಲ್ಲಿ ಅಪಕ್ವವಾದ ಮೊಟ್ಟೆಗಳು ಉತ್ಪತ್ತಿಯಾಗುವುದಿಲ್ಲ.

ಕ್ಯಾನ್ಸರ್‌ಗೆ ಕಾರಣ
ಪಿಸಿಒಎಸ್ ಪೀಡಿತ ಮಹಿಳೆಯರು ಹಾರ್ಮೋನ್‌ಗಳ ಅಸಮತೋಲನದಿಂದ ಉಂಟಾಗುವ ಬದಲಾವಣೆಗಳನ್ನು ಅನುಭವಿಸುತ್ತಾರೆ. ಇದನ್ನು ಸಿಂಡ್ರೋಮ್ ಎಕ್ಸ್ ಎನ್ನುತ್ತಾರೆ. ಮಧುಮೇಹ, ಅಧಿಕ ರಕ್ತದೊತ್ತಡ ಸಮಸ್ಯೆ ಭೀತಿಯೂ ಇದೆ. ಪಿಸಿಒಎಸ್‌ನ ದೀರ್ಘಾವಧಿಯ ಪರಿಣಾಮ ಎಂದರೆ ಎಂಡೊಮೆಟ್ರಿಯಲ್ ಕ್ಯಾನ್ಸರ್‌ಗೆ ಕಾರಣವಾಗಬಹುದು. ಪಿಸಿಒಎಸ್ ಹೊಂದಿರುವವರು ಪಿಸಿಒಡಿ ಕೂಡ ಹೊಂದಿರುತ್ತಾರೆ.

ಟೀನೇಜರ‍್ಸ್‌ನಲ್ಲಿ ಸಮಸ್ಯೆ ಹೆಚ್ಚು
ಈ ಸಮಸ್ಯೆ ಹೆಚ್ಚು ಕಾಣಿಸುವುದು ಹದಿಹರೆಯದ ಯುವತಿಯರಲ್ಲಿ, 15-35 ವರ್ಷದವರೆಗಿನವರಲ್ಲಿ ಹೆಚ್ಚು ಪ್ರಕರಣ ದಾಖಲಾಗಿವೆ.

ಸಮಸ್ಯೆಗೆ ಪರಿಹಾರ ಏನು?
ಯಾರಿಗೇ ಈ ಸಮಸ್ಯೆ ಬಂದರೂ ಇದನ್ನು ದೂರ ಮಾಡಲು ಇರುವುದು ಒಂದೇ ಮಾರ್ಗ. ಅದು ತೂಕ ಇಳಿಕೆ ಮಾತ್ರ. ವ್ಯಾಯಾಮ, ತೂಕ ಇಳಿಕೆ, ಪೌಷ್ಠಿಕ ಆಹಾರ ಸೇವನೆ ಮುಖ್ಯವಾಗಿದೆ. ಶೇ.5 ರಷ್ಟು ತೂಕ ಇಳಿಕೆಯೂ ಚಿಕಿತ್ಸೆಗೆ ಸಹಕಾರಿಯಾಗಿದೆ. ಪಿರಿಯಡ್ಸ್ ಸೈಕಲ್ ಸುಧಾರಣೆಗೆ ಔಷಧ ಇದೆ, ಆದರೆ ಜೀವನಶೈಲಿಯಲ್ಲಿ ಬದಲಾವಣೆ ಇಲ್ಲದಿದ್ದರೆ ಏನೂ ಪ್ರಯೋಜನ ಇಲ್ಲ ಎನ್ನುವುದು ಪರಿಣತರ ಅಭಿಪ್ರಾಯ.

 

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!