ದಿಗಂತ ವರದಿ ಮಡಿಕೇರಿ:
ಕುಶಾಲನಗರ ಸಮೀಪದ ಬಸವನಹಳ್ಳಿಯಲ್ಲಿ ಕೊರೋನಾ ಕೇರ್ ಸೆಂಟರ್ ತೆರೆಯಲು ಮುಂದಾಗಿರುವ ಜಿಲ್ಲಾಡಳಿತದ ಕ್ರಮಕ್ಕೆ ಆದಿವಾಸಿಗಳು ವಿರೋಧ ವ್ಯಕ್ತಪಡಿಸಿದ್ದಾರೆ.
ಕೊಡಗು ಜಿಲ್ಲೆಯಲ್ಲಿ ಕೋವಿಡ್ ಪ್ರಕರಣಗಳು ದಿನೇದಿನೇ ಹೆಚ್ಚುತ್ತಿದ್ದು, ಈ ನಿಟ್ಟಿನಲ್ಲಿ ಇದೀಗ ಜಿಲ್ಲೆಯ ಮೂರು ತಾಲೂಕುಗಳಲ್ಲೂ ಹೆಚ್ಚುವರಿಯಾಗಿ ಬೇಡ್ ಗಳ ವ್ಯವಸ್ಥೆ ಮಾಡಿಕೊಳ್ಳಲು ಜಿಲ್ಲಾಡಳಿತ ಮುಂದಾಗಿದೆ. ಅದರಂತೆ ಜಿಲ್ಲಾಡಳಿತ ಬಸವನಹಳ್ಳಿ ಮೊರಾರ್ಜಿ ವಸತಿ ಶಾಲೆಯಲ್ಲಿ ಕೋವಿಡ್ ಸೆಂಟರ್ ತೆರೆಯಲು ಚಿಂತನೆ ನಡೆಸಿದ್ದು,ಈ ಹಿನ್ನೆಲೆಯಲ್ಲಿ ದಿಡ್ಡಳ್ಳಿ ನಿರಾಶ್ರಿತರ ಪುನರ್ವಸತಿ ಕೇಂದ್ರದ ನಿವಾಸಿಗಳು ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಈ ಭಾಗದ ಮೊರಾರ್ಜಿ ಶಾಲೆಯ ಸುತ್ತ ಆದಿವಾಸಿಗಳು ಹೆಚ್ಚಿನ ಸಂಖ್ಯೆಯಲ್ಲಿದ್ದಾರೆ. ಕೋವಿಡ್ ಸೆಂಟರ್ ಆರಂಭಿಸಿದರೆ ತೀವ್ರ ಅನಾನುಕೂಲ ಉಂಟಾಗಲಿದೆ ಎಂದು ರಸ್ತೆಗೆ ಕಲ್ಲುಗಳನ್ನು ಅಡ್ಡ ಹಾಕಿ ಪ್ರತಿಭಟನೆ ನಡೆಸಿದ್ದಾರೆ.
ಶಾಲೆಯ ಸುತ್ತ ಮುನ್ನೂರಕ್ಕೂ ಹೆಚ್ಚು ಕುಟುಂಬಗಳಿವೆ. ಕೋವಿಡ್ ಕೇರ್ ಸೆಂಟರ್ ತೆರೆದಲ್ಲಿ ನಮ್ಮೆಲ್ಲರಿಗೂ ಸೋಂಕು ಹರಡುವ ಸಾಧ್ಯತೆ ಇದೆ. ನಮ್ಮಲ್ಲಿ ಒಬ್ಬರಿಗೆ ಸೋಂಕು ಹರಡಿದರೆ ಎಲ್ಲರಿಗೂ ಹರಡುವುದು ಖಚಿತ. ಇಲ್ಲಿ ಕೋವಿಡ್ ಕೇರ್ ಸೆಂಟರ್ ತೆರೆಯುವ ಬದಲು ಸರ್ಕಾರವೇ ವಿಷ ಕೊಡಲಿ ಎಂದು ಆದಿವಾಸಿಗಳ ಮುಖಂಡ ಸ್ವಾಮಿ ಆಕ್ರೋಶ ವ್ಯಕ್ತಪಡಿಸಿದ್ದಾರೆ.