ಹೊಸದಿಗಂತ ವರದಿ,ಶಿವಮೊಗ್ಗ:
ಹಬ್ಬಗಳ ಸಂದರ್ಭದಲ್ಲಿ ಉದ್ರೇಕಕಾರಿ ಫ್ಲೆಕ್ಸ್, ಬಂಟಿಂಗ್ಸ್ ಯಾರೂ ಹಾಕಬೇಡಿ. ಈ ಬಾರಿ ಇಲಾಖೆ ಈ ಬಗ್ಗೆ ಗಮನ ಇರಿಸಿದೆ. ಅಂತಹದ್ದು ಕಂಡುಬಂದರೆ ಕೇಸ್ ದಾಖಲಾಗುತ್ತದೆ. ಸುಮ್ಮನೆ ಇರುವುದಿಲ್ಲ ಎಂದು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಜಿ.ಕೆ.ಮಿಥುನ್ ಕುಮಾರ್ ಎಚ್ಚರಿಕೆ ನೀಡಿದ್ದಾರೆ.
ಜಿಲ್ಲಾ ಪೊಲೀಸ್ ಇಲಾಖೆಯಿಂದ ಡಿಎಆರ್ ಸಭಾಂಗಣದಲ್ಲಿ ಶುಕ್ರವಾರ ಆಯೋಜಿಸಿದ್ದ ಶಾಂತಿಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದರು.
ಹಬ್ಬ ವಿಜೃಂಭಣೆಯಿಂದ ಮಾಡಲು ಎಲ್ಲಾ ಸಹಕಾರ ಇಲಾಖೆ ಕೊಡಲಿದೆ ಎಂದರು.
ಕಲ್ಲು ಹೊಡೆಯುವುದು ಸಮಸ್ಯೆ ಪರಿಹಾರದ ಲಕ್ಷಣ ಅಲ್ಲ. ದುರ್ಘಟನೆ ಆದಾಗ ನೋವು ಅಲ್ಲಿನ ಜನರಿಗೆ ಗೊತ್ತಿರುತ್ತದೆ. ಕಳೆದ ವರ್ಷದ ರಾಗಿಗುಡ್ಡ ಘಟನೆ ಬಳಿಕ ಈಗಲೂ 50 ಜನರು ವಾಪಸ್ ಬಂದಿಲ್ಲ. ಕಹಿ ಘಟನೆ ವಾಪಸ್ ಬರಬಾರದು. ಶೇ.0.1 ಗಿಂತ ಕಡಿಮೆ ಕಿಡಿಗೇಡಿಗಳ ಕೃತ್ಯದಿಂದ ಸಮಾಜದಲ್ಲಿ ಅಶಾಂತಿ ಸೃಷ್ಟಿಯಾಗುತ್ತದೆ ಎಂದರು.
ರಾತ್ರಿ ಧ್ವನಿ ವರ್ಧಕ ಇಲ್ಲ…
ಹೆಚ್ಚುವರಿ ಪೊಲೀಸ್ ವರಿಷ್ಠಾಕಾರಿ ಕಾರಿಯಪ್ಪ ಮಾತನಾಡಿ, ಗಣೇಶ ಮೂರ್ತಿ ಕಾಯುವ ಕೆಲಸ ನಿಮ್ಮದೇ ಆಗಿರುತ್ತದೆ. 24 ಗಂಟೆ ಯಾರಾದರೂ ಇರಲೇಬೇಕು. ಪೆಂಡಾಲ್‌ನಲ್ಲಿ ಸಿಸಿಟಿವಿ ಅಳವಡಿಸಿ. ಜನಸಂದಣಿ ಜಾಸ್ತಿ ಇರುವಲ್ಲಿ ತೊಂದರೆ ಆದರೆ ಸಿಸಿಟಿವಿ ಅನುಕೂಲ ಆಗಲಿದೆ. ಅನುಮತಿ ಇಲ್ಲದೇ ಧ್ವನಿ ವರ್ಧಕ ಬಳಕೆ ಇಲ್ಲ. ರಾತ್ರಿ 10 ರಿಂದ ಬೆಳಿಗ್ಗೆ 06 ರವರೆಗೆ ಧ್ವನಿ ವರ್ಧಕ ಬಳಕೆ ಮಾಡುವಂತಿಲ್ಲ ಎಂದು ತಿಳಿಸಿದರು.
ಶಾಸಕ ಚನ್ನಬಸಪ್ಪ ಮಾತನಾಡಿ, ಸ್ವಾತಂತ್ರ್ಯ ಹೋರಾಟಕ್ಕೆ ಬೇಕಾದ ಸಂಗತಿ ಜೋಡಿಸಲು ಹಬ್ಬ ಆರಂಭಆಯಿತು. ವ್ಯವಸ್ಥಿತ, ಶಾಂತಿಯುತ ಹಬ್ಬ ಆಗಬೇಕು. ಎರಡೂ ಹಬ್ಬ ಒಟ್ಟಿಗೆ ಬಂದಿದೆ. ಕಳೆದ ಬಾರಿ ಹಬ್ಬ ಚೆನ್ನಾಗಿ ನಡೆದಿದೆ. ಅನೇಕರು ಶ್ರಮ ಹಾಕಿದ್ದಾರೆ. ನಿರ್ದಾಕ್ಷಿಣ್ಯವಾಗಿ ಶಾಂತಿಭಂಗ ಮಾಡುವವರ ಮಟ್ಟ ಹಾಕಬೇಕು. ಸಮಾಜ ಕೂಡ ಇದಕ್ಕೆ ಕೈಜೋಡಿಸಬೇಕು. ಕೇವಲ ಗಣೇಶೋತ್ಸವ, ಈದ್ ಮಿಲಾದ್ ವೇಳೆ ಮಾತ್ರ ಅಲ್ಲ. ನಿರಂತರ ಈ ಬಗ್ಗೆ ಅಲೋಚನೆ ಮಾಡಬೇಕು. ಜಿಲ್ಲೆಯ ಗೌರವ ಕಾಪಾಡಲು ಮುಂದಾಗೋಣ . ನಮ್ಮ ಹೊಣೆಗಾರಿಕೆ ಇದೆ ಎಂದರು.
ಪ್ರಮುಖರಾದ ಸತ್ತಾರ್ ಬೇಗ್, ರಮೇಶ್ ಜಾಧವ್, ಡಿವೈಎಸ್ಪಿ ಬಾಬು ಅಂಜನಪ್ಪ, ಸುರೇಶ್ ಇದ್ದರು.