Friday, July 1, 2022

Latest Posts

ಮಂಡ್ಯ| ಸಾಧನೆಗೆ ಕನಸು ಕಾಣುವುದು ಮುಖ್ಯ: ಯುವಜನರಿಗೆ ಸಿಇಓ ದಿವ್ಯಾಪ್ರಭು ಕರೆ

ಹೊಸದಿಗಂತ ವರದಿ, ಮಂಡ್ಯ:

ಜೀವನದಲ್ಲಿ ಸಾಧನೆಗೆ ಪೂರಕವಾಗಿರುವ ಕನಸು ಕಾಣುವುದು ಎಷ್ಟು ಮುಖ್ಯವೋ ಅದನ್ನು ಸಾಕಾರಗೊಳಿಸುವುದು ಸಹ ಅಷ್ಟೇ ಮುಖ್ಯವಾಗುತ್ತದೆ ಎಂದು ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಜಿ.ಆರ್.ಜೆ ದಿವ್ಯ ಪ್ರಭು ಅಭಿಪ್ರಾಯಿಸಿದರು.
ನಗರದ ನಾಲ್ವಡಿ ಕೃಷ್ಣರಾಜ ಒಡೆರ್ಯ ಕಲಾಮಂದಿರದಲ್ಲಿ ಜಿಲ್ಲಾಡಳಿತ, ನೆಹರು ಯುವ ಕೇಂದ್ರ, ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆ ವತಿಯಿಂದ ನಡೆದ 2021-22ನೇ ಸಾಲಿನ ಜಿಲ್ಲಾ ಮಟ್ಟದ ಯುವಜನೋತ್ಸವ ಕಾರ್ಯಕ್ರಮದಲ್ಲಿ ಅವರು ಮಾತನಾಡಿದ ಅವರು, ಯಾವುದಾದರೂ ಒಂದು ಕ್ಷೇತ್ರದಲ್ಲಿ ಸಾಧನೆ ಮಾಡಬೇಕು. ಅದು ಗುರಿ ಮುಟ್ಟುವ ತನಕ ಕನಸು ಕಾಣುಬೇಕು ಎಂದು ಯುವಜನರಿಗೆ ಕರೆ ನೀಡಿದರು.
ಕಳೆದ ಎರಡು ವರ್ಷಗಳ ಕಾಲ ಕೋವಿಡ್ ಕಾರಣಗಳಿಂದ ಯುವಜನೋತ್ಸವ ಕಾರ್ಯಕ್ರಮವನ್ನು ನಮ್ಮ ಜಿಲ್ಲೆಯಲ್ಲಿ ವಿಜ್ರಂಭಣೆಯಿಂದ ಆಚರಿಸಲು ಸಾಧ್ಯವಾಗಿರಲಿಲ್ಲ. ನಮ್ಮ ಜಿಲ್ಲೆಯಲ್ಲಿ ಹೆಚ್ಚಿನ ಪ್ರತಿಭಾವಂತರು ಇದ್ದು ಅವರನ್ನು ಗುರುತಿಸಿ ರಾಜ್ಯಮಟ್ಟಕ್ಕೆ ಕಳುಹಿಸುವ ಸುವರ್ಣಾವಕಾಶ ಈ ವರ್ಷ ದೊರೆತಿದೆ ಎಂದರು.
ವಿವಿಧ ಕ್ಷೇತ್ರಗಳಲ್ಲಿ ಸಾಧನೆಗೈದಿರುವ ನಮ್ಮ ಜಿಲ್ಲೆಯ ಪ್ರತಿಭಾನ್ವಿತ ಯುವಕ ಯುವತಿಯರನ್ನು ಗುರುತಿಸಿ ರಾಜ್ಯಮಟ್ಟಕ್ಕೆ ಆಯ್ಕೆ ಮಾಡಲು ವಿವಿಧ ಸ್ಪರ್ಧೆಗಳನ್ನು ಆಯೋಜಿಸಲಾಗಿದೆ ಎಂದರು.
ಜಿಲ್ಲಾ ಮಟ್ಟದಿಂದ ಆಯ್ಕೆಯಾದ ವಿದ್ಯಾರ್ಥಿಗಳು ರಾಜ್ಯಮಟ್ಟದ ಸ್ಪರ್ಧೆಗಳಲ್ಲಿಯೂ ನಾನು ಗೆದ್ದೆ ಗೆಲ್ಲುವೆನೆಂಬ ಗುರಿಯನ್ನು ಇಟ್ಟುಕೊಂಡು ಸ್ಪರ್ಧಿಸಿದರೆ ರಾಜ್ಯಮಟ್ಟದಲ್ಲಿ ನಮ್ಮ ಜಿಲ್ಲೆ ಪ್ರಥಮ ಸ್ಥಾನಗಳಿಸುವುದರಲ್ಲಿ ಸಂಶಯವಿಲ್ಲ ಎಂದರು.
ಇದೇ ವೇಳೆ ಕ್ರೀಡಾ ಕ್ಷೇತ್ರದಲ್ಲಿ ಸಾಧನೆಗೈದ ರಾಜ್ಯ ಮಟ್ಟದ ಪ್ರಶಸ್ತಿ ಪುರಸ್ಕೃತರನ್ನು ಸನ್ಮಾನಿಸಲಾಯಿತು.
ಕಾರ್ಯಕ್ರಮದಲ್ಲಿ ಜಿಲ್ಲಾ ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆಯ ಸಹಾಯಕ ನಿರ್ದೇಶಕ ಜಿ. ಓಂಪ್ರಕಾಶ್, ಸರ್ಕಾರಿ ನೌಕರರ ಸಂಘದ ಜಿಲ್ಲಾ ಅಧ್ಯಕ್ಷ ಎನ್. ಶಂಭುಗೌಡ, ಎ.ಎಸ್.ಪಿ ಧನಂಜಯ ಹಾಗೂ ಮತ್ತಿತರರು ಉಪಸ್ಥಿತರಿದ್ದರು.

ಈ ಸುದ್ದಿ ಇತರರೊಂದಿಗೂ ಹಂಚಿಕೊಳ್ಳಿ

Whatsapp Group
Telegram

Latest Posts

Don't Miss