ಗತವೈಭವದ ಉತ್ಸವಕ್ಕೆ ಅಣಿಯಾಗಿ: ಡಿಸಿ ವೆಂಕಟೇಶ್

ಹೊಸದಿಗಂತ ವರದಿ,ವಿಜಯನಗರ:

ಹಂಪಿ ಉತ್ಸವದ ಆಚರಣೆಗೆ ನಿಯೋಜನೆಗೊಂಡ ವಿವಿಧ ಸಮಿತಿಯ ಅಧಿಕಾರಿಗಳು, ನೋಡಲ್ ಅಧಿಕಾರಿಗಳು ಎಲ್ಲ ರೀತಿಯಿಂದಲೂ ಅಚ್ಚುಕಟ್ಟಾಗಿ ನಿರ್ವಹಿಸಿ ಕಾರ್ಯಕ್ರಮವನ್ನು ಆಯೋಜಿಸಬೇಕು ಎಂದು ಜಿಲ್ಲಾಧಿಕಾರಿ ಟಿ.ವೆಂಕಟೇಶ್ ಅವರು ಸೂಚಿಸಿದರು.
ನಗರದ ಜಿಲ್ಲಾಧಿಕಾರಿಗಳ ಕಚೇರಿ ಸಭಾಂಗಣದಲ್ಲಿ ಭಾನುವಾರ ನಡೆದ ಹಂಪಿ ಉತ್ಸವ ಆಚರಣೆ ಪೂರ್ವಭಾವಿ ಸಿದ್ಧತಾ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.
ಹಂಪಿ ಉತ್ಸವಕ್ಕೆ ನಿರ್ಮಿಸಲಾದ ನಾಲ್ಕು ವೇದಿಕೆಗಳನ್ನು ಒಳಗೊಂಡಂತೆ ಎಲ್ಲಾ ರೀತಿಯ ವಸ್ತು ಪ್ರದರ್ಶನ ಮಳಿಗೆಗಳು, ಕ್ರೀಡೆ ಹಾಗೂ ಸಾಂಸ್ಕೃತಿಕ ಕಾರ್ಯಕ್ರಮಗಳ ಸಿದ್ಧತೆಯನ್ನು ಹಾಗೂ ಪೂರಕ ಸೌಲಭ್ಯಗಳನ್ನು ಸಂಬಂಧಪಟ್ಟ ವಿವಿಧ ಇಲಾಖೆಯ ಅಧಿಕಾರಿಗಳು ಹಾಗೂ ನೋಡಲ್ ಅಧಿಕಾರಿಗಳು ವಹಿಸಿಕೊಂಡು ಕಾರ್ಯಕ್ರಮಗಳು ಎಲ್ಲಿಯೂ ಲೋಪವಾಗದಂತೆ ನಿರ್ವಹಿಸಬೇಕು ಎಂದು ತಿಳಿಸಿದರು.
ಹಂಪಿ ಉತ್ಸವದ ಮುನ್ನ ದಿನ ಜ.26ರಂದು ಸಂಜೆ ನಗರದಲ್ಲಿ ವಸಂತ ವೈಭವ ಮೆರವಣಿಗೆ ನಡೆಯಲಿದೆ ಎಂದರು.
ನಗರದಲ್ಲಿ ವಸಂತ ವೈಭವ ಮತ್ತು ಲೇಸರ್ ಶೋ:
ಹಂಪಿ ಉತ್ಸವದ ಮುನ್ನ ದಿನ ಜ.26ರಂದು ಸಂಜೆ 4 ಗಂಟೆಯಿಂದ ನಗರದ ವಡಕರಾಯ ದೇವಸ್ಥಾನದಿಂದ ಭವ್ಯ ಮೆರವಣಿಗೆ ನಡೆಯಲಿದೆ. ವಿವಿಧ ಕಲಾತಂಡಗಳ ನೂರಾರು ಕಲಾವಿದರು ಹಾಗೂ ವಿವಿಧ ಇಲಾಖೆಗಳ ಸಿಬ್ಬಂದಿ ಮೆರವಣಿಗೆಯಲ್ಲಿ ಭಾಗವಹಿಸಲಿದ್ದಾರೆ. ಮುಖ್ಯರಸ್ತೆಗಳಿಂದ ಸಾಗಿಬರುವ ಮೆರವಣಿಗೆ ಮುನ್ಸಿಪಲ್ ಮೈದಾನವನ್ನು ತಲುಪಲಿದೆ. ನಂತರ ಮೈದಾನದಲ್ಲಿ ಲೇಸರ್ ಶೋ ಕೈಗೊಳ್ಳಲಾಗುತ್ತದೆ ಎಂದು ಮಾಹಿತಿ ನೀಡಿದರು. ವೇದಿಕೆಗಳಲ್ಲಿ ಚಿಕಿತ್ಸಾ ಸೌಲಭ್ಯ ಮತ್ತು ಕುಡಿಯುವ ನೀರಿನ ವ್ಯವಸ್ಥೆ: ಉತ್ಸವದ ಅಂಗವಾಗಿ ಕಾರ್ಯಕ್ರಮ ನಡೆಯಲಿರುವ ವೇದಿಕೆಗಳು ಸೇರಿದಂತೆ ಹಂಪಿಯ ವಿವಿಧೆಡೆ ಒಟ್ಟು 13 ತಾತ್ಕಾಲಿಕ ಚಿಕಿತ್ಸಾ ಕೇಂದ್ರಗಳಲ್ಲಿ ಆರೋಗ್ಯ ಇಲಾಖೆ ಸಿಬ್ಬಂದಿ ಕಾರ್ಯನಿರ್ವಹಿಸಲು ಕ್ರಮ ಕೈಗೊಳ್ಳಲು ಸೂಚಿಸಿದರು.
ಈ ಸಂದರ್ಭದಲ್ಲಿ ಉಪವಿಭಾಗಧಿಕಾರಿ ಹಾಗೂ ಹಂಪಿ ವಿಶ್ವ ಪಾರಂಪರಿಕಾ ಪ್ರದೇಶ ನಿರ್ವಹಣಾ ಪ್ರಾಧಿಕಾರದ ಅಧ್ಯಕ್ಷ ಸಿದ್ಧರಾಮೇಶ್ವರ, ಹರಪನಹಳ್ಳಿ ಉಪವಿಭಾಗಧಿಕಾರಿ ಟಿ.ವಿ.ಪ್ರಕಾಶ್, ಧ್ವನಿ ಮತ್ತು ಬೆಳಕು ಉಸ್ತುವಾರಿ ಎಲ್.ಡಿ.ಜೋಷಿ, ಕೃಷಿ ಇಲಾಖೆ ಜಂಟಿ ನಿರ್ದೇಶಕ ಶರಣಪ್ಪ ಮುದಗಲ್, ಪ್ರಾದೇಶಿಕ ಸಾರಿಗೆ ಅಧಿಕಾರಿ ವಸಂತ ಚವ್ಹಾಣ್, ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ ಉಪನಿರ್ದೇಶಕ ವೀರನಗೌಡ, ಜಿಲ್ಲಾ ಆರೋಗ್ಯಾಧಿಕಾರಿ ಡಾ.ಸಲೀಂ, ತಹಸೀಲ್ದಾರ್ ವಿಶ್ವಜಿತ್ ಮಹೆತಾ ಇತರರಿದ್ದರು.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!