ಪ್ರೀತಿಯ ಓದುಗರೇ,
ಕೋವಿಡ್ ನಿರ್ನಾಮ ನಮ್ಮ ಕೈಯಲ್ಲೇ ಇದೆ. ಮಾಸ್ಕ್ ಧರಿಸಿ, ಸಾಮಾಜಿಕ ಅಂತರ ಕಾಯ್ದುಕೊಳ್ಳಿ, ಕೈ, ಮುಖವನ್ನು ಸ್ವಚ್ಛವಾಗಿ ಇಟ್ಟುಕೊಳ್ಳಿ. ನೀವೂ ಸುರಕ್ಷಿತರಾಗಿರಿ, ನಿಮ್ಮವರನ್ನೂ ಸುರಕ್ಷಿತರಾಗಿ ಇರುವಂತೆ ನೋಡಿಕೊಳ್ಳಿ.
…………………………………………………………………
ಹೊಸ ದಿಗಂತ ವರದಿ, ಕಾರವಾರ:
ಭವಿಷ್ಯದಲ್ಲಿ ಕುಡಿಯುವ ನೀರಿನ ಸಮಸ್ಯೆ ನಿವಾರಣೆ ಮಾಡಲು ಜೆಜೆಎಂ ಯೋಜನೆ ಸಹಕಾರಿಯಾಗಲಿದೆ ಎಂದು ಕಾರವಾರ ಅಂಕೋಲಾ ವಿಧಾನಸಭಾ ಕ್ಷೇತ್ರದ ಶಾಸಕರಾದ ಶ್ರೀಮತಿ ರೂಪಾಲಿ ಎಸ್. ನಾಯ್ಕ ಹೇಳಿದರು.
ಕಾರವಾರ ಜಿಲ್ಲಾ ಪಂಚಾಯತಿ ಸಭಾಂಗಣದಲ್ಲಿ ಕಾರವಾರ-ಅಂಕೋಲಾ ತಾಲ್ಲೂಕುಗಳ ಜಲಜೀವನ ಮೀಷನ್ ಯೋಜನೆ ಕುರಿತು ಶುಕ್ರವಾರ ನಡೆದ ಪ್ರಗತಿ ಪರಿಶೀಲನಾ ಸಭೆಯಲ್ಲಿ ಅವರು ಮಾತನಾಡಿದರು.
ಜನರಿಗೆ ನೀರು ನೀಡುವುದಕ್ಕೆ ವಿವಿಧ ಯೋಜನೆಗಳು ಜಾರಿಗೆ ಬಂದಿವೆ. ಆದರೆ, ಅವುಗಳು ಸಮರ್ಪಕವಾಗಿ ಅನುಷ್ಠಾನವಾಗಿಲ್ಲ. ಜೆಜೆಎಂ ಯೋಜನೆಯು ಪ್ರಧಾನಿ ನರೇಂದ್ರ ಮೋದಿ ಅವರ ಕನಸಿನ ಯೋಜನೆಯಾಗಿದೆ. ಈ ಯೋಜನೆಯನ್ನು ಗಂಭೀರವಾಗಿ ಪರಿಗಣಿಸಿ ಇದನ್ನು ಸಾಕಾರಗೊಳಿಸಲು ಎಲ್ಲರೂ ಸಹಕಾರ ನೀಡಬೇಕು. ಫೆಬ್ರುವರಿ ತಿಂಗಳಿನ ನಂತರ ಗ್ರಾಮೀಣ ಪ್ರದೇಶಗಳಲ್ಲಿ ಕುಡಿಯುವ ನೀರಿನ ಸಮಸ್ಯೆ ಹೆಚ್ಚಾಗುತ್ತದೆ. ನೀರಿನ ಸಂಪರ್ಕ ಕಲ್ಪಿಸಿ ಸಮಸ್ಯೆ ನೀವಾರಣೆ ಮಾಡಬೇಕು ಎಂದು ಅಧಿಕಾರಿಗಳಿಗೆ ಸೂಚಿಸಿದರು.
ಉಪ್ಪು ನೀರು ಬರುವ ಸ್ಥಳಗಳಲ್ಲಿ ತಡೆಗೋಡೆ ನಿರ್ಮಾಣಕ್ಕೆ ಸರ್ಕಾರ 300ಕೋಟಿ ಅನುದಾನ ಒದಗಿಸಿದೆ. ತಡೆಗೋಡೆ ನಿರ್ಮಾಣವಾದರೆ ಉಪ್ಪು ನೀರು ಸಮಸ್ಯೆ ನಿವಾರಣೆಯಾಗುತ್ತದೆ. ಜೆಜೆಎಂ ಯೋಜನೆಯಲ್ಲಿ ಹಳೆ ಪೈಪ್ಗಳಿಗೆ ಸಂಪರ್ಕ ನೀಡಿರುವುದರಿಂದ ನೀರು ಸರಿಯಾಗಿ ಬರುತ್ತಿಲ್ಲ ಎಂಬ ದೂರುಗಳಿವೆ. ಅದಕ್ಕಾಗಿ ಯೋಜನೆಯ ಕಾಮಗಾರಿಗಳನ್ನು ನಡೆಸುವಾಗ ಹೊಸ ಪೈಪ್ಗಳನ್ನು ಹಾಕಿ ನೀರಿನ ಸಂಪರ್ಕ ನೀಡಬೇಕು. ಘಾಡಸಾಯಿ ಡೋಲ್ನಲ್ಲಿ ನೀರಿನ ಸಮಸ್ಯೆ ಹೆಚ್ಚಾಗಿದೆ. ಅಲ್ಲಿ ಅಗತ್ಯ ಕ್ರಮ ಕೈಗೊಳ್ಳಬೇಕು ಎಂದು ಅಧಿಕಾರಿಗಳಿಗೆ ಸೂಚನೆ ನೀಡಿದರು.
ಅಂಕೋಲಾ ತಾಲ್ಲೂಕಿನಲ್ಲಿ ಈಗಾಗಲೇ ಒಂದು ತಂಡವನ್ನು ರಚಿಸಿ ಸಮೀಕ್ಷೆ ಮಾಡಲು ಕಳುಹಿಸಲಾಗಿದೆ. ಅದೇ ರೀತಿ ಕಾರವಾರದಲ್ಲೂ ಒಂದು ತಂಡ ರಚನೆ ಮಾಡಿ ಸರ್ವೆ ಮಾಡಲು ಕ್ರಮಕೈಗೊಳ್ಳಬೇಕು ಎಂದು ಅಧಿಕಾರಿಗಳಿಗೆ ಸೂಚಿಸಿದರು.
2020-21ರ ಜೆಜೆಎಂ ಕಾಮಗಾರಿಗಳಲ್ಲಾದ ತೊಡಕುಗಳು 2021-22ರ ಕಾಮಗಾರಿ ಕೈಗೆತ್ತಿಕೊಳ್ಳುವಾಗ ಪುನರಾವರ್ತನೆಯಾಗದಂತೆ ನೋಡಿಕೊಳ್ಳಬೇಕು. ಅಲ್ಲದೇ, 2021-22ರ ಡಿಪಿಆರ್ ಮಾಡುವಾಗ ಎಲ್ಲರನ್ನು ವಿಶ್ವಾಸಕ್ಕೆ ತೆಗೆದುಕೊಂಡು ಕಾಮಗಾರಿಯನ್ನು ಆಯ್ಕೆ ಮಾಡಿಕೊಳ್ಳಬೇಕು ಎಂದು ಗ್ರಾಮೀಣ ಕುಡಿಯುವ ನೀರು ಇಲಾಖೆ ಅಧಿಕಾರಿಗಳಿಗೆ ಸೂಚಿಸಿದರು.
ಈ ಸಂದರ್ಭದಲ್ಲಿ ಜಿಲ್ಲಾ ಪಂಚಾಯತ ಸಿಇಒ ಪ್ರಿಯಾಂಗಾ ಎಂ., ಕಾರವಾರ ತಾಲ್ಲೂಕು ಪಂಚಾಯತ ಇಒ ಆನಂದಕುಮಾರ್, ಅಂಕೋಲಾ ಇಒ ಪಿ.ಸಾವಂತ, ಗ್ರಾಮ ಪಂಚಾಯತಿ ಅಧ್ಯಕ್ಷರು ಉಪಾಧ್ಯಕ್ಷರು, ಪಿಡಿಒಗಳು ಉಪಸ್ಥಿತರಿದ್ದರು.