Wednesday, August 10, 2022

Latest Posts

ಕೊರೋನಾ ಲಸಿಕಾ ಅಭಿಯಾನಕ್ಕೆ ಚಿತ್ರದುರ್ಗದಲ್ಲಿ ಚಾಲನೆ

ಹೊಸ ದಿಗಂತ ವರದಿ, ಚಿತ್ರದುರ್ಗ:

ನಗರದ ಜಿಲ್ಲಾಸ್ಪತ್ರೆ ಸೇರಿದಂತೆ ಜಿಲ್ಲೆಯ ೮ ಕಡೆಗಳಲ್ಲಿ ೨ನೇ ಹಂತದ ಕೋವಿಡ್ ೨.೦ ಲಸಿಕಾ ಕಾರ್ಯಕ್ರಮಕ್ಕೆ ಸೋಮವಾರ ಚಾಲನೆ ನೀಡಲಾಯಿತು. ಜಿಲ್ಲಾಸ್ಪತ್ರೆಯ ಲಸಿಕೆ ಕೇಂದ್ರದಲ್ಲಿ ಜಿಲ್ಲಾಧಿಕಾರಿ ಕವಿತಾ ಎಸ್.ಮನ್ನಿಕೇರಿ ೨ನೇ ಹಂತದ ಲಸಿಕಾ ಕಾರ್ಯಕ್ರಮಕ್ಕೆ ಚಾಲನೆ ಚಾಲನೆ ನೀಡಿದರು.
ನಂತರ ಮಾತನಾಡಿದ ಅವರು, ೨ನೇ ಹಂತದ ಕೋವಿನ್ ೨.೦ ಲಸಿಕೆಯನ್ನು ೪೫ ರಿಂದ ೫೯ ವರ್ಷದ ಕೊಮೊರ್ಬಿಡಿಟಿ ಇರುವವರಿಗೆ ಹಾಗೂ ೬೦ ವರ್ಷ ಮೇಲ್ಪಟ್ಟ ಎಲ್ಲಾ ಸಾರ್ವಜನಿಕರಿಗೆ ಲಸಿಕೆಯನ್ನು ನೀಡಲಾಗುತ್ತಿದೆ. ಸರ್ಕಾರಿ ಆಸ್ಪತ್ರೆಗಳಲ್ಲಿ ಉಚಿತವಾಗಿ ಹಾಗೂ ಖಾಸಗಿ ಆಸ್ಪತ್ರೆಗಳಲ್ಲಿ ಸಾರ್ವಜನಿಕರು ರೂ.೨೫೦ ಶುಲ್ಕ ಪಾವತಿಸಿ ಲಸಿಕೆ ತೆಗೆದುಕೊಳ್ಳಬೇಕು ಎಂದು ಹೇಳಿದರು.
ಯಾವುದೇ ಭಯ, ಆತಂಕವಿಲ್ಲದೇ ಸಾರ್ವಜನಿಕರು ಕಡ್ಡಾಯವಾಗಿ ಕೊರೋನಾ ಲಸಿಕೆ ಹಾಕಿಸಿಕೊಳ್ಳುವುದರ ಮೂಲಕ ಒಟ್ಟಾಗಿ ಕೋವಿಡ್-೧೯ ವಿರುದ್ಧ ಜಯ ಸಾಧಿಸೋಣ ಎಂದರು.
ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಡಾ.ಸಿ.ಎಲ್.ಫಾಲಾಕ್ಷ ಮಾತನಾಡಿ, ಜಿಲ್ಲೆಯಲ್ಲಿ ಇಂದಿನಿಂದ ೨ನೇ ಹಂತದ ಕೋವಿನ್ ೨.೦ ಲಸಿಕಾ ಕಾರ್ಯಕ್ರಮಕ್ಕೆ ಚಾಲನೆ ನೀಡಲಾಗಿದ್ದು, ಜಿಲ್ಲೆಯ ೮ ಲಸಿಕಾ ಕೇಂದ್ರಗಳಲ್ಲಿ ಮಧ್ಯಾಹ್ನ ೧೨ ರಿಂದ ಸಂಜೆ ೫ ಗಂಟೆವರೆಗೆ ಲಸಿಕೆ ಹಾಕಲಾಗುವುದು ಎಂದು ಹೇಳಿದರು.
ಜಿಲ್ಲೆಗೆ ೧೧ ಸಾವಿರ ವ್ಯಾಕ್ಸಿನ್ ಬಂದಿದ್ದು, ಎಲ್ಲವನ್ನು ಸ್ಟೋರೇಜ್ ಮಾಡಲಾಗಿದೆ. ಸರ್ಕಾರಿ ಆಸ್ಪತ್ರೆಯಲ್ಲಿ ಉಚಿತವಾಗಿ ಲಸಿಕೆ ಪಡೆದುಕೊಳ್ಳಬಹುದು. ಖಾಸಗಿ ಆಸ್ಪತ್ರೆಗಳಲ್ಲಿ ೧೫೦ ರೂ. ಲಸಿಕೆ ವೆಚ್ಚ, ೧೦೦ ರೂ. ಸರ್ವಿಸ್ ಚಾರ್ಜ್ ಸೇರಿ ಒಟ್ಟು ೨೫೦ ರೂ. ನೀಡಿ ಲಸಿಕೆ ಪಡೆದುಕೊಳ್ಳಬಹುದು ಎಂದರು.
ಲಸಿಕೆ ಪಡೆದ ತಿಮ್ಮಾರೆಡ್ಡಿ ಮಾತನಾಡಿ, ಕೊರೋನಾದಿಂದ ದೂರವಿರಲು ಲಸಿಕೆ ಪಡೆಯುತ್ತಿದ್ದೇನೆ. ಎಲ್ಲರೂ ಯಾವುದೇ ಭಯ, ಆತಂಕವಿಲ್ಲದೇ ಲಸಿಕೆ ಹಾಕಿಸಿಕೊಳ್ಳಿ ಎಂದರು.
ಕಾರ್ಯಕ್ರಮದಲ್ಲಿ ಜಿಲ್ಲಾ ಶಸ್ತ್ರ ಚಿಕಿತ್ಸಕ ಡಾ.ಹೆಚ್.ಜೆ.ಬಸವರಾಜ್, ಆರ್‌ಸಿಹೆಚ್ ಅಧಿಕಾರಿ ಡಾ.ಪಿ.ಸಿ.ಕುಮಾರಸ್ವಾಮಿ, ಪ್ರಭಾರ ಉಪ ಜಿಲ್ಲಾ ಆರೋಗ್ಯ ಶಿಕ್ಷಣಾಧಿಕಾರಿ ಬಿ.ಮೂಗಪ್ಪ, ಕ್ಷೇತ್ರ ಆರೋಗ್ಯ ಶಿಕ್ಷಣಾಧಿಕಾರಿ ಜಾನಕಿ ಸೇರಿದಂತೆ ಮತ್ತಿತರರು ಹಾಜರಿದ್ದರು.
ಜಿಲ್ಲಾ ಆಸ್ಪತ್ರೆ, ಜಿಲ್ಲೆಯ ಎಲ್ಲ ತಾಲ್ಲೂಕಿನ ಸಾರ್ವಜನಿಕ ಆಸ್ಪತ್ರೆ ಹಾಗೂ ಚಿತ್ರದುರ್ಗ ನಗರದ ಖಾಸಗಿ ಆಸ್ಪತ್ರೆಗಳಾದ ಬಸವೇಶ್ವರ ವೈದ್ಯಕೀಯ ಮಹಾವಿದ್ಯಾಲಯ ಹಾಗೂ ಆಸ್ಪತ್ರೆ, ಲಕ್ಷ್ಮಿ ಬಜಾರ್‌ನ ಕೃಷ್ಣಾ ಆಸ್ಪತ್ರೆ ಸೇರಿ ಜಿಲ್ಲೆಯ ೮ ಕೇಂದ್ರಗಳಲ್ಲಿ ಲಸಿಕೆ ಹಾಕಲಾಯಿತು.

ಈ ಸುದ್ದಿ ಇತರರೊಂದಿಗೂ ಹಂಚಿಕೊಳ್ಳಿ

Whatsapp Group
Telegram

Latest Posts

Don't Miss