Wednesday, August 10, 2022

Latest Posts

ಡ್ರೋನ್ ಕರಡು ನಿಯಮ ಪ್ರಕಟಿಸಿದ ಕೇಂದ್ರ ನಾಗರಿಕ ವಿಮಾನಯಾನ ಸಚಿವಾಲಯ!

ಪ್ರೀತಿಯ ಓದುಗರೇ,
ಕೋವಿಡ್ ನಿರ್ನಾಮ ನಮ್ಮ ಕೈಯಲ್ಲೇ ಇದೆ. ಮಾಸ್ಕ್ ಧರಿಸಿ, ಸಾಮಾಜಿಕ ಅಂತರ ಕಾಯ್ದುಕೊಳ್ಳಿ, ಕೈ, ಮುಖವನ್ನು ಸ್ವಚ್ಛವಾಗಿ ಇಟ್ಟುಕೊಳ್ಳಿ. ನೀವೂ ಸುರಕ್ಷಿತರಾಗಿರಿ, ನಿಮ್ಮವರನ್ನೂ ಸುರಕ್ಷಿತರಾಗಿ ಇರುವಂತೆ ನೋಡಿಕೊಳ್ಳಿ.
………………………………………
 
ಹೊಸದಿಗಂತ ಆನ್ ಲೈನ್ ಡೆಸ್ಕ್:

ಕೇಂದ್ರ ನಾಗರಿಕ ವಿಮಾನಯಾನ ಸಚಿವಾಲಯವು ಗುರುವಾರ ಡ್ರೋನ್ ಕರಡು ನಿಯಮಗಳನ್ನು ಪ್ರಕಟಿಸಿದ್ದು,  ಕಳೆದ ಮಾರ್ಚ್ ತಿಂಗಳಲ್ಲಿ ಪ್ರಕಟಿಸಿದ್ದ ಮಾನವ ರಹಿತ ವೈಮಾನಿಕ ವ್ಯವಸ್ಥೆ ನಿಯಮಗಳ ಬದಲಿಗೆ ಇದೀಗ ಪ್ರಕಟಿಸಿರುವ ಕರಡು ನಿಯಮಗಳು ಜಾರಿಗೆ ಬರಲಿವೆ.
ಇನೂ ಈ ಕರಡು ನಿಯಮಗಳನ್ನು ಪರಿಶೀಲಿಸಿ, ಸಾರ್ವಜನಿಕರು ತಮ್ಮ ಪ್ರತಿಕ್ರಿಯೆಯನ್ನು ತಿಳಿಸಲು ಅವಕಾಶವಿದೆ.
ಹೊಸ ಕರಡು ನಿಯಮಗಳ ಪ್ರಕಾರ,  ವಿಶಿಷ್ಟ ಅನುಮತಿ ಸಂಖ್ಯೆ, ವಿಶಿಷ್ಟ ಪ್ರೊಟೊಟೈಪ್ ಗುರುತಿನ ಸಂಖ್ಯೆ, ದೃಢೀಕರಣ ಪ್ರಮಾಣ ಪತ್ರ, ನಿರ್ವಹಣೆಯನ್ನು ದೃಢೀಕರಿಸುವ ಪ್ರಮಾಣಪತ್ರ, ಆಮದು ಮಾಡಿಕೊಂಡಿರುವ ಡ್ರೋನ್ ಆಗಿದ್ದಲ್ಲಿ ಆಮದು ಅನುಮತಿ ಪತ್ರ, ಕಾರ್ಯಾಚರಣೆಗೆ ಅನುಮೋದನೆ, ವಿದ್ಯಾರ್ಥಿಗಳಿಗೆ ರಿಮೋಟ್ ಪೈಲಟ್ ಲೈಸೆನ್ಸ್ ನೀಡುವುದೂ ಸೇರಿದಂತೆ ಹಲವು ನಿಯಮಗಳು ಮುಂದಿನ ದಿನಗಳಲ್ಲಿ ಅಸ್ತಿತ್ವದಲ್ಲಿರುವುದಿಲ್ಲ.
ಹೊಸದಾಗಿ ಪ್ರಸ್ತಾಪಿಸಲಾಗಿರುವ ಕರಡು ನಿಯಮಗಳಲ್ಲಿ ವಾಯುಸ್ಥಳದ ನಿರ್ವಹಣೆಗೆ ಒತ್ತು ನೀಡಲಾಗುತ್ತದೆ. ಅದರಂತೆ ಭಾರತದ ವಾಯುಗಡಿಯೊಳಗಿನ ಎಲ್ಲ ಪ್ರದೇಶವನ್ನು ಕೆಂಪು, ಹಳದಿ ಹಾಗೂ ಹಸಿರು ವಲಯಗಳಾಗಿ ವಿಂಗಡಿಸಲಾಗುತ್ತದೆ. ಡಿಜಿಟಲ್ ಸ್ಕೈ ರೂಪದಲ್ಲಿ ಇದನ್ನು ಮುಕ್ತವಾಗಿ ಪ್ರದರ್ಶಿಸಲಾಗುತ್ತದೆ. ನಾಗರಿಕ ವಿಮಾನಯಾನ ಮಹಾನಿರ್ದೇಶಕರು ನಿರ್ವಹಿಸುವ ಡಿಜಿಟಲ್ ಸ್ಕೈ ಪ್ಲಾಟ್ಫಾರ್ಮ್ನಲ್ಲಿ ಡ್ರೋಣ್ ಚಟುವಟಿಕೆಗಳಿಗೆ ಸಂಬಂಧಿಸಿದ ಸಮಗ್ರ ಮಾಹಿತಿ ಲಭ್ಯವಿರಲಿದೆ.
ಕರಡು ನಿಯಮಗಳು ಪ್ರಕಟವಾದ 30 ದಿನಗಳ ಒಳಗೆ ಕೇಂದ್ರ ಸರ್ಕಾರವು ಡಿಜಿಟಲ್ ಸ್ಕೈ ಪ್ಲಾಟ್ಫಾರ್ಮ್ ಪ್ರಕಟಿಸಲಿದೆ. ಇದರಲ್ಲಿ ಡ್ರೋಣ್ ಕಾರ್ಯಾಚರಣೆಗೆ ಅವಕಾಶವಿರುವ ದೇಶದ ವಾಯುಗಡಿಯೊಳಗಿನ ನಕಾಶೆ ಲಭ್ಯವಿರಲಿದೆ ಎಂದು ದಾಖಲೆಗಳು ಹೇಳುತ್ತವೆ.
ವಿಮಾನ ನಿಲ್ದಾಣದ ಕೇಂದ್ರದಿಂದ ಈ ಮೊದಲು 45 ಕಿಮೀ ವ್ಯಾಪ್ತಿಯನ್ನು ಹಳದಿ ವಲಯ ಎಂದು ಘೋಷಿಸಲಾಗಿತ್ತು. ಈ ವಲಯದಲ್ಲಿ ಡ್ರೋಣ್ಗಳ ಹಾರಾಟಕ್ಕೆ ನಿರ್ಬಂಧವಿತ್ತು. ಇದೀಗ ಹಳದಿ ವಲಯದ ವಿಸ್ತೀರ್ಣವನ್ನು 12 ಕಿಮೀ ವ್ಯಾಪ್ತಿಗೆ ಸೀಮಿತಗೊಳಿಸಲಾಗಿದೆ.
ಕೆಂಪು ಅಥವಾ ಹಳದಿ ವಲಯ ಎಂಬ ಸೂಚನೆ ಇಲ್ಲದ ಎಲ್ಲ ಪ್ರದೇಶಗಳು ಹಸಿರು ವಲಯ ಎನ್ನಿಸಿಕೊಳ್ಳುತ್ತವೆ. ಈ ವಲಯದಲ್ಲಿ ಸಮುದ್ರದಿಂದ 400 ಅಡಿ (200 ಮೀಟರ್) ಎತ್ತರದವರೆಗಿನ ಪ್ರದೇಶದಲ್ಲಿ ಡ್ರೋಣ್ಗಳ ಹಾರಾಟಕ್ಕೆ ಅವಕಾಶವಿದೆ. ವಿಮಾನ ನಿಲ್ದಾಣದಿಂದ 8 ಕಿಮೀ ವಿಸ್ತೀರ್ಣದ ವಲಯ ಕೆಂಪು ಮತ್ತು 12 ಕಿಮೀ ವಿಸ್ತೀರ್ಣದ ಒಳಗಿನ ಪ್ರದೇಶವು ಹಳದಿ ವಲಯದಲ್ಲಿ ಬರುತ್ತದೆ. ಈ ಪ್ರದೇಶದಲ್ಲಿ ಗರಿಷ್ಠ 200 ಅಡಿ (60 ಮೀಟರ್) ಎತ್ತರದವರೆಗೆ ಡ್ರೋಣ್ ಹಾರಾಟಕ್ಕೆ ಅವಕಾಶವಿದೆ.
ಏರ್ಸ್ಪೇಸ್ ನಕಾಶೆಯು ಮೊಬೈಲ್ಗಳಲ್ಲಿಯೂ ಸುಲಭವಾಗಿ ಸಿಗುವಂತೆ ಮಾಡಲು ವಿಶೇಷ ಅಪ್ಲಿಕೇಶನ್ ಪ್ರೋಗ್ರಾಮಿಂಗ್ ಇಂಟರ್ಫೇಸ್ (ಎಪಿಐ) ಅಭಿವೃದ್ಧಿಪಡಿಸಲಾಗುವುದು. ಡ್ರೋನ್ಗಳ ನಿರ್ವಾಹಕರು ಹಾರಾಟವಲಯವನ್ನು ಸುಲಭವಾಗಿ ಗುರುತಿಸಿಕೊಳ್ಳುವಂತೆ ಆಗಬೇಕು ಎನ್ನುವುದು ಇದರ ಉದ್ದೇಶ. ಯಾವ ವಲಯದಲ್ಲಿ ಹಾರಾಟಕ್ಕೆ ಅನುಮತಿ ಪಡೆಯಬೇಕು ಎಂಬ ಬಗ್ಗೆಯೂ ಸರ್ಕಾರ ಸ್ಪಷ್ಟವಾಗಿ ವಿವರಿಸಲಿದೆ.

ಈ ಸುದ್ದಿ ಇತರರೊಂದಿಗೂ ಹಂಚಿಕೊಳ್ಳಿ

Whatsapp Group
Telegram

Latest Posts

Don't Miss