ಹೊಸದಿಗಂತ ಆನ್ ಲೈನ್ ಡೆಸ್ಕ್:
ಸ್ಯಾಂಡಲ್ ವುಡ್ ಡ್ರಗ್ಸ್ ದಂಧೆ ಪ್ರಕರಣದಲ್ಲಿ ಮತ್ತೆ ಸಂಚಲನ ಉಂಟಾಗಿದ್ದು, ನಿರ್ಮಾಪಕರೊಬ್ಬರ ಕಚೇರಿ ಮೇಲೆ ಪೊಲೀಸರು ದಾಳಿ ನಡೆಸಿದ್ದಾರೆ.
ನಟಿಯರಾದ ರಾಗಿಣಿ ದ್ವಿವೇದಿ, ಸಂಜನಾ ಗಲ್ರಾಣಿ ಅವರಿಗೆ ಸುತ್ತಿಕೊಂಡಿದ್ದ ಡ್ರಗ್ಸ್ ಮಾಫಿಯಾ ಪ್ರಕರಣ ಕೆಲದಿನಗಳ ಮಟ್ಟಿಗೆ ತಣ್ಣಗಾದಂತೆ ಅನಿಸಿದರೂ ಇದೀಗ ನಿರ್ಮಾಪಕರೊಬ್ಬರಿಗೆ ಸುತ್ತಿಕೊಳ್ಳುವ ಮೂಲಕ ಸ್ಯಾಂಡಲ್ವುಡ್ನಲ್ಲಿ ಕಾವೇರಿಸಿದೆ.
ನಿರ್ಮಾಪಕ ಶಂಕರೇಗೌಡ ಅವರು ಈಗ ಡ್ರಗ್ಸ್ ಮಾಫಿಯಾ ಸುಳಿಗೆ ಸಿಲುಕಿದ್ದು, ಗೋವಿಂದಪುರ ಠಾಣಾ ಪೊಲೀಸರು ಕಾರ್ಯಾಚರಣೆ ನಡೆಸಿದ್ದಾರೆ.
ಸಂಜಯನಗರದ ಆರ್ಎಂವಿ ಕ್ಲಬ್ ಬಳಿ ನಾಲ್ಕಂತಸ್ತಿನ ಕಟ್ಟದಲ್ಲಿ ಇರುವ ಕಚೇರಿ ಮೇಲೆ ದಾಳಿ ಮಾಡಿರುವ ಪೊಲೀಸರು, ಕಚೇರಿ ಹಾಗೂ ಕಾರುಗಳ ತಪಾಸಣೆ ನಡೆಸಿದ್ದಾರೆ. ಶಂಕರೇಗೌಡ ಮನೆಯಲ್ಲಿದ್ದಾಗ ಸರ್ಚ್ ವಾರಂಟ್ ಹಿಡಿದು ಕಚೇರಿಗೆ ದಾಳಿ ಇಟ್ಟ ಪೊಲೀಸರು ತೀವ್ರ ತಪಾಸಣೆ ನಡೆಸಿದ್ದಾರೆ. ಶಂಕರೇಗೌಡ ‘ಕೆಂಪೇಗೌಡ 2’ ಸಿನಿಮಾ ನಿರ್ಮಾಣ ಮಾಡಿದ್ದರು.
ಬಿಗ್ಬಾಸ್ ಖ್ಯಾತಿಯ ಮಸ್ತಾನ್ ಚಂದ್ರ ಮನೆ ಮೇಲೆ ಮಾರ್ಚ್ 5ರಂದು ದಾಳಿ ನಡೆಸಿ, ವಶಕ್ಕೆ ಪಡೆದಿದ್ದ ಪೊಲೀಸರು ವಿಚಾರಣೆ ನಡೆಸಿದ್ದರು. ಈ ವೇಳೆ ಮಸ್ತಾನ್ ನೀಡಿದ್ದ ಮಾಹಿತಿ ಮೇರೆಗೆ ಪೊಲೀಸರು ನಿರ್ಮಾಪಕ ಶಂಕರೇಗೌಡ ಕಚೇರಿ ಮೇಲೆ ದಾಳಿ ನಡೆಸಿದ್ದಾರೆ.