ಹೊಸದಿಗಂತ ಡಿಜಿಟಲ್ ಡೆಸ್ಕ್:
ಬಾಲಿವುಡ್ ನಟ ಶಾರುಖ್ ಖಾನ್ ಪುತ್ರನನ್ನು ಬಂಧಿಸಲಾಗಿರುವ ಎನ್ಸಿಬಿಯ ಮುಂಬೈ ವಲಯ ನಿರ್ದೇಶಕ ಸಮೀರ್ ವಾಂಖೇಡೆ ಅವರು ‘ನನ್ನನ್ನು ಟಾರ್ಗೆಟ್ ಮಾಡಲಾಗುತ್ತಿದೆ. ಕೆಲವರು ನನ್ನ ವಿರುದ್ಧ ದುರುದ್ದೇಶದಿಂದ ಕೂಡಿದ ಕಾನೂನು ಕ್ರಮ ನಡೆಸುವ ಪ್ರಯತ್ನದಲ್ಲಿದ್ದಾರೆ’ ಎಂದು ದೂರಿದ್ದಾರೆ.
ಡ್ರಗ್ಸ್ ಕೇಸಿನ ತನಿಖೆ ದುರುದ್ದೇಶಪೂರಿತವಾಗಿದೆ ಎಂದು ಬಿಂಬಿಸುವ ಪ್ರಯತ್ನ ರಾಜಕೀಯ ವಲಯದಲ್ಲಿ ನಡೆಯುತ್ತಿದೆ. ಇದಕ್ಕೆ ಪುಷ್ಟಿ ನೀಡುವಂತೆ, ಪ್ರಕರಣದ ಸಾಕ್ಷಿ ಎನ್ನಲಾದ ಪ್ರಭಾಕರ್ ಸೇಲ್ ಎನ್ಸಿಬಿ ಅಧಿಕಾರಿ ವಾಂಖೇಡೆಗೆ ಕೇಸಿನ ಸಂಬಂಧವಾಗಿ 8 ಕೋಟಿ ರೂಪಾಯಿ ನೀಡಲಾಗಿದೆ ಎಂದು ಭಾನುವಾರ ಸಲ್ಲಿಸಿದ ಅಫಿಡೆವಿಟ್ನಲ್ಲಿ ಆರೋಪ ಮಾಡಿದ್ದರು.
ಇದೀಗ ಎನ್ಸಿಬಿ ಪರ ವಕೀಲರು ಎರಡು ಅಫಿಡೆವಿಟ್ಗಳನ್ನು ಇಂದು ಎನ್ಡಿಪಿಎಸ್ ವಿಶೇಷ ನ್ಯಾಯಾಲಯದಲ್ಲಿ ಸಲ್ಲಿಸಿದ್ದಾರೆ. ಎನ್ಸಿಬಿ ತನ್ನ ಕಾರ್ಯಾಚರಣೆಯನ್ನು ಸಮರ್ಥಿಸಿಕೊಂಡಿದ್ದರೆ, ಸಮೀರ್ ವಾಂಖೇಡೆ ವೈಯಕ್ತಿಕವಾಗಿ ಸಲ್ಲಿಸಲಿರುವ ಅಫಿಡೆವಿಟ್ನಲ್ಲಿ, ತಮ್ಮನ್ನು ಟಾರ್ಗೆಟ್ ಮಾಡಲಾಗುತ್ತಿದೆ ಎಂದಿದ್ದಾರೆ. ‘ನನ್ನ ಸೋದರಿ ಮತ್ತು ಮೃತ ತಾಯಿ ಸೇರಿದಂತೆ ನನ್ನ ಕುಟುಂಬವನ್ನು ಟಾರ್ಗೆಟ್ ಮಾಡುತ್ತಿದ್ದಾರೆ’ ಎಂದು ವಾಂಖೇಡೆ ಹೇಳಿದ್ದಾರೆ.
ಎನ್ಸಿಬಿ ಕಾರ್ಯಾಚರಣೆಯನ್ನು ಖಂಡಿಸುತ್ತಾ ಬಂದಿರುವ ಎನ್ಸಿಪಿ ನಾಯಕ ಹಾಗೂ ಮಹಾರಾಷ್ಟ್ರ ಸಚಿವ ನವಾಬ್ ಮಲಿಕ್ ಅವರು ಇತ್ತೀಚೆಗಷ್ಟೆ, ವಾಂಖೇಡೆ ಒಂದು ವರ್ಷದಲ್ಲಿ ತಮ್ಮ ಕೆಲಸ ಕಳೆದುಕೊಳ್ಳುತ್ತಾರೆ ಎಂದು ಹೇಳಿದ್ದರು. ಈ ಅಧಿಕಾರಿಯು ಬಿಜೆಪಿ ಕೈಗೊಂಬೆಯಾಗಿ ಜನರ ವಿರುದ್ಧ ಸುಳ್ಳು ಕೇಸುಗಳನ್ನು ಸೃಷ್ಟಿಸುತ್ತಾನೆ ಎಂದು ಆಪಾದಿಸಿದ್ದರು ಎನ್ನಲಾಗಿದೆ.
ಇದೇ ಹಿನ್ನೆಲೆಯಲ್ಲಿ ಸಮೀರ್ ವಾಂಖೇಡೆ ಮುಂಬೈ ಪೊಲೀಸ್ ಮುಖ್ಯಸ್ಥರಿಗೂ ಪತ್ರ ಬರೆದಿದ್ದಾರೆ ಎನ್ನಲಾಗಿದೆ. ತಮಗೆ ಕೆಲಸದಿಂದ ವಜಾಗೊಳಿಸುವುದಾಗಿ ಮತ್ತು ಜೈಲಿಗೆ ಹಾಕಿಸುವುದಾಗಿ ಸಾರ್ವಜನಿಕ ಹುದ್ದೆಗಳಲ್ಲಿರುವ ಗೌರವಾನ್ವಿತ ವ್ಯಕ್ತಿಗಳಿಂದ ಬೆದರಿಕೆಗಳು ಬಂದಿವೆ ಎಂದು ಆರೋಪಿಸಿದ್ದಾರೆ.