Friday, August 19, 2022

Latest Posts

ನ್ಯಾಯಮೂರ್ತಿ ಎ.ಜೆ.ಸದಾಶಿವ ಆಯೋಗ ವರದಿ ಅನುಷ್ಠಾನಕ್ಕೆ ಡಿಎಸ್ ಎಸ್ ಒತ್ತಾಯ

ದಿಗಂತ ವರದಿ ಬಳ್ಳಾರಿ‌:

ನ್ಯಾಯಮೂರ್ತಿ ಎ.ಜೆ.ಸದಾಶಿವ ಆಯೋಗ ವರದಿ ಅನುಷ್ಠಾನಗೊಳಿಸುವಂತೆ ಒತ್ತಾಯಿಸಿ ಇಲ್ಲಿನ ದಲಿತ ಸಂಘರ್ಷ(ಎನ್.ಮೂರ್ತಿ ಬಣ) ಜಿಲ್ಲಾ ಸಮೀತಿ ಪದಾಧಿಕಾರಿಗಳು ಹಾಗೂ ನ್ಯಾಯಮೂರ್ತಿ ಎ.ಜೆ.ಸದಾಶಿವ ಆಯೋಗ ವರದಿ ಜಾರಿ ಹೋರಾಟ ಸಮೀತಿ ಪದಾಧಿಕಾರಿಗಳು ನಗರದ ಜಿಲ್ಲಾಧಿಕಾರಿ ಕಚೇರಿ ಎದುರು ಶನಿವಾರ ಬೃಹತ್ ಪ್ರತಿಭಟನೆ ನಡೆಸಿದರು.
ದಲಿತ ಸಂಘರ್ಷ ಸಮೀತಿ ಜಿಲ್ಲಾಧ್ಯಕ್ಷ ಅರ್ಜುನ್ ಹೆಗಡೆ ಅವರು ಮಾತನಾಡಿ, ದಲಿತರ ಅಭಿವೃದ್ಧಿಗೆ ಪೂರಕವಾಗಿರುವ ನ್ಯಾಯಮೂರ್ತಿ ಎ.ಜೆ.ಸದಾಶಿವ ಆಯೋಗ ವರದಿ ಅನುಷ್ಠಾನಗೊಳಿಸುವಂತೆ ಒತ್ತಾಯಿಸಿ ಸಾಕಷ್ಟು ಬಾರಿ ಹೋರಾಟ ನಡೆಸಿ ಸರ್ಕಾರದ ಗಮನಸೆಳೆದರೂ ಇಲ್ಲಿವರೆಗೆ ಕ್ರಮವಿಲ್ಲ. ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಅವರು ಈ ಕುರಿತು ಕೂಡಲೇ ಅಗತ್ಯ ಕ್ರಮಗಳನ್ನು ಕೈಗೊಳ್ಳಬೇಕು, ನಿರ್ಲಕ್ಷಿಸದರೇ ಹೋರಾಟದ ಸ್ವರೂಪ ಬದಲಾಗಲಿದೆ. ಸರ್ಕಾರ ನಮ್ಮ ನ್ಯಾಯಯುತ ಬೇಡಿಕೆಯನ್ನು ಈಡೇರಿಸಲು ಮುಂದಾಗಬೇಕು, ಕಳೆದ ಸುಮಾರು ವರ್ಷಗಳಿಂದ ಈ ಕುರಿತು ನಮ್ಮ ಬೇಡಿಕೆಯನ್ನು ಇಲ್ಲಿವರೆಗೆ ಆಳಿದ ಯ್ಯಾವ ಸರ್ಕಾರಗಳು ಈಡೇರಿಸಿಲ್ಲ, ಕೇವಲ ಚುನಾವಣೆಯಲ್ಲಿ ಮಾತ್ರ ನಮಗೆ ಭರವಸೆ ನೀಡುವುದು ಸಾಮಾನ್ಯವಾಗಿದೆ. ನಮ್ಮಿಂದ ಮತ ಪಡೆದ ಬಳಿಕ ದಲಿತರನ್ನು ನಿರ್ಲಕ್ಷಿಸಲಾಗುತ್ತಿದೆ. ಈ ಬೆಳವಣಿಗೆ ಸರಿಯಲ್ಲ ಎಂದು ಆಕ್ರೋಶ ವ್ಯಕ್ತಪಡಿಸಿದರು.

ನಿವೃತ್ತ ನ್ಯಾಯಮೂರ್ತಿ ಎ.ಜೆ.ಸದಾಶಿವ ಆಯೋಗ ವರದಿಯನ್ನು ಸರ್ಕಾರ ಅಂಗೀಕರಿಸಿ ಕೇಂದ್ರ ಸರ್ಕಾರಕ್ಕೆ ಶಿಫಾರಸ್ಸು ಮಾಡಬೇಕು, ಹಿಂದುಳಿದ ಆಯೋಗದ ಕಾಂತ್ ರಾಜ್ ವರದಿಯನ್ನು ಬಹಿರಂಗಗೊಳಿಸಿ ಅನುಷ್ಠಾನಗೊಳಿಸಿ ಜಾತಿವಾರು ಮೀಸಲಾತಿ ಜಾರಿ ಮಾಡಬೇಕು, ರಾಜ್ಯ ಸರ್ಕಾರ ಮೀಸಲಾತಿಯನ್ನು ಶೇ.50ರಿಂದ 70ಕ್ಕೆ ಏರಿಸಿ ಪರಿಶಿಷ್ಟ ಮೀಸಲಾತಿಯನ್ನು ಶೇ.25ಕ್ಕೆ ಹೆಚ್ಚಿಸಿ ಸಂವಿಧಾನದ 9ನೇ ಶೆಡ್ಯೂಲ್ ಗೆ ಸೇರಿಸಬೇಕು, ಕೇಂದ್ರ ಸರ್ಕಾರ ಇತ್ತೀಚೆಗೆ ಜಾರಿಗೊಳಿಸಿದ ಕೃಷಿಯ ಮೂರು ಕರಾಳ ತಿದ್ದುಪಡಿಗಳನ್ನು ಕೂಡಲೇ ಹಿಂಪಡೆಯಬೇಕು ಎಂದು ಒತ್ತಾಯಿಸಿದರು.
ಈ ಸಂದರ್ಭದಲ್ಲಿ
ಕಲ್ಯಾಣ ಕರ್ನಾಟಕ ವಿಭಾಗೀಯ ಉಪಾಧ್ಯಕ್ಷ ದಾನಪ್ಪ ಗುತ್ತೆವರ್ ,
ಜಿಲ್ಲಾ ಪ್ರಧಾನ ಕಾರ್ಯದರ್ಶಿ ಶ್ರೀನಿವಾಸ್ ಬಂಡಾರ್ ಸೇರಿದಂತೆ ಸಂಘಟನೆಯ ಹುಲಗಪ್ಪ, ಡಿ.ವೆಂಕಮ್ಮ, ಗಿರಿ ಮಲ್ಲಪ್ಪ, ಕೊಂಡಯ್ಯ, ತಿಪ್ಪಯ್ಯ, ಅಂಬೇಡ್ಕರ್ ಸಂಘದ ಅನಂತಕುಮಾರ್, ಸೇರಿದಂತೆ ವಿವಿಧ ಮುಖಂಡರು, ಕಾರ್ಯಕರ್ತರು, ಯುವಕರು, ಮಹಿಳೆಯರು ಇತರರು ಉಪಸ್ಥಿತರಿದ್ದರು.

ಈ ಸುದ್ದಿ ಇತರರೊಂದಿಗೂ ಹಂಚಿಕೊಳ್ಳಿ

Whatsapp Group
Telegram

Latest Posts

Don't Miss

error: Content is protected !!