ಡು ಪ್ಲೆಸಿಸ್‌,ಕೊಹ್ಲಿ ಬ್ಯಾಟಿಂಗ್ ಜೊತೆಗೆ ಸಿರಾಜ್ ಬೌಲಿಂಗ್ ಅಬ್ಬರ: ಬೆಂಗಳೂರಿಗೆ ಗೆಲುವು

ಹೊಸದಿಗಂತ ಡಿಜಿಟಲ್‌ ಡೆಸ್ಕ್ :‌

ಫಾಫ್ ಡು ಪ್ಲೆಸಿಸ್‌, ವಿರಾಟ್ ಕೊಹ್ಲಿ ಅರ್ಧಶತಕ ಹಾಗೂ ಮೊಹಮ್ಮದ್ ಸಿರಾಜ್ ಮಾರಕ ದಾಳಿಯ ನೆರವಿನಿಂದ ಪಂಜಾಬ್ ಕಿಂಗ್ಸ್‌ ಎದುರು ರಾಯಲ್ ಚಾಲೆಂಜರ್ಸ್‌ ಬೆಂಗಳೂರು ತಂಡವು 24 ರನ್‌ಗಳ ಭರ್ಜರಿ ಜಯ ಸಾಧಿಸಿದೆ.

ಐಎಸ್ ಬಿಂದ್ರಾ ಮೈದಾನದಲ್ಲಿ ಆರ್‌ಸಿಬಿ ನೀಡಿದ್ದ ಸವಾಲಿನ ಗುರಿ ಬೆನ್ನತ್ತಿದ ಪಂಜಾಬ್ ಕಿಂಗ್ಸ್‌ ತಂಡವು ಉತ್ತಮ ಆರಂಭ ಪಡೆಯಲು ವಿಫಲವಾಯಿತು. ಇನಿಂಗ್ಸ್‌ನ ಎರಡನೇ ಎಸೆತದಲ್ಲೇ ಮೊಹಮ್ಮದ್ ಸಿರಾಜ್‌, ಆರಂಭಿಕ ಬ್ಯಾಟರ್‌ ಅಥರ್ವ ಟೈಡೆ ಅವರನ್ನು ಎಲ್‌ಬಿ ಬಲೆಗೆ ಕೆಡಹುವಲ್ಲಿ ಯಶಸ್ವಿಯಾದರು. ಇನ್ನು ಮೂರನೇ ಓವರ್‌ನ ಮೊದಲ ಎಸೆತದಲ್ಲೇ ಹಸರಂಗ, ಮ್ಯಾಥ್ಯೂ ಶಾರ್ಟ್‌ ಅವರನ್ನು ಕ್ಲೀನ್‌ ಬೌಲ್ಡ್‌ ಮಾಡುವ ಮೂಲಕ ಪಂಜಾಬ್‌ಗೆ ಮತ್ತೊಂದು ಶಾಕ್ ನೀಡಿದರು.

ಹರ್ಪ್ರೀತ್ ಸಿಂಗ್ ಭಾಟಿಯಾ 13 ರನ್ ಬಾರಿಸಿ ರನೌಟ್ ಆದರೆ, ನಾಯಕ ಸ್ಯಾಮ್ ಕರ್ರನ್‌ 10 ರನ್‌ ಬಾರಿಸಿ ರನೌಟ್ ಆಗಿ ಪೆವಿಲಿಯನ್ ಸೇರಿದರು. ಪಂಜಾಬ್‌ ತಂಡವು 76 ರನ್‌ ಗಳಿಸುವಷ್ಟರಲ್ಲಿ ಅಗ್ರಕ್ರಮಾಂಕದ ಐವರು ಬ್ಯಾಟರ್‌ಗಳು ಪೆವಿಲಿಯನ್‌ ಸೇರಿದರು.

ಮತ್ತೊಂದು ತುದಿಯಲ್ಲಿ ಸ್ಪೋಟಕ ಬ್ಯಾಟಿಂಗ್‌ ನಡೆಸಿದ ಇಂಪ್ಯಾಕ್ಟ್‌ ಪ್ಲೇಯರ್ ಪ್ರಭ್‌ಸಿಮ್ರನ್‌ ಸಿಂಗ್‌ ಚುರುಕಿನ ಬ್ಯಾಟಿಂಗ್ ನಡೆಸಿ ಮಿಂಚಿದರು. ಪ್ರಭ್‌ಸಿಮ್ರನ್‌ ಸಿಂಗ್‌ 30 ಎಸೆತಗಳನ್ನು ಎದುರಿಸಿ 3 ಬೌಂಡರಿ ಹಾಗೂ 4 ಸಿಕ್ಸರ್ ಸಹಿತ ಸ್ಪೋಟಕ 46 ರನ್‌ ಬಾರಿಸಿ ವೇಯ್ನ್ ಪಾರ್ನೆಲ್ ಬೌಲಿಂಗ್‌ನಲ್ಲಿ ಕ್ಲೀನ್‌ ಬೌಲ್ಡ್ ಆಗಿ ಪೆವಿಲಿಯನ್ ಸೇರಿದರು. ಇನ್ನು ಶಾರುಖ್ ಖಾನ್‌ ಕೇವಲ 7 ರನ್‌ ಬಾರಿಸಿ ಹಸರಂಗ ಬೌಲಿಂಗ್‌ನಲ್ಲಿ ಸ್ಟಂಪೌಟ್ ಆಗಿ ಪೆವಿಲಿಯನ್ ಸೇರಿದರು.

8ನೇ ವಿಕೆಟ್‌ಗೆ ಜಿತೇಶ್ ಶರ್ಮಾ ಹಾಗೂ ಹರ್ಪ್ರೀತ್ ಬ್ರಾರ್ 39 ರನ್‌ಗಳ ಜತೆಯಾಟವಾಡುವ ಮೂಲಕ ತಂಡಕ್ಕೆ ಆಸರೆಯಾದರು. ಹಪ್ರೀತ್ ಬ್ರಾರ್‌ 13 ಎಸೆತಗಳಲ್ಲಿ 13 ರನ್‌ ಬಾರಿಸಿ ಸಿರಾಜ್‌ ಬೌಲಿಂಗ್‌ನಲ್ಲಿ ಕ್ಲೀನ್‌ ಬೌಲ್ಡ್‌ ಆಗಿ ಪೆವಿಲಿಯನ್ ಸೇರಿದರು. ಇದರ ಬೆನ್ನಲ್ಲೇ ನೇಥನ್ ಎಲ್ಲಿಸ್‌ ಅವರನ್ನು ಕ್ಲೀನ್‌ ಬೌಲ್ಡ್ ಮಾಡುವ ಮೂಲಕ ಸಿರಾಜ್, ಪಂಜಾಬ್‌ಗೆ ಡಬಲ್‌ ಶಾಕ್ ನೀಡಿದರು.

 

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!