ಹೊಸದಿಗಂತ ವರದಿ,ಮೈಸೂರು:
ಅರಮನೆ ನಗರಿಯಲ್ಲಿ ಮೈಸೂರಿನಲ್ಲಿ ನಾಡ ಹಬ್ಬ ಮೈಸೂರು ದಸರಾ ಮಹೋತ್ಸವಕ್ಕೆ ಸಿದ್ಧತೆಗಳು ಭರದಿಂದ ನಡೆಯುತ್ತಿದೆ. ಈ ಬಾರಿಯ ದಸರಾದಲ್ಲಿ ಲೋಹದ ಹಕ್ಕಿಗಳ ಕಲರವ ನಡೆಯಲಿದೆ. ಐದು ವರ್ಷಗಳ ಬಳಿಕ ಮೈಸೂರು ದಸರಾದಲ್ಲಿ ಏರ್‌ಶೋ ನಡೆಯುತ್ತಿದೆ. ಅ. 22 ಮತ್ತು 23ರಂದು ನಗರದ ಬನ್ನಿಮಂಟಪದಲ್ಲಿರುವ ಪಂಜಿನ ಕವಾಯತು ಮೈದಾನದಲ್ಲಿ ದಸರಾ ಏರ್‌ಶೋ ನಡೆಯಲಿದೆ. ಅ.22ರಂದು ಏರ್‌ಶೋ ರಿಹರ್ಸಲ್, 23 ರಂದು ಸಂಜೆ 4 ಗಂಟೆಗೆ 45 ನಿಮಿಷಕ್ಕೆ ಮುಖ್ಯ ಏರ್‌ಶೋ ನಡೆಯಲಿದೆ ಎಂದು ಜಿಲ್ಲಾಧಿಕಾರಿ ಡಾ. ಕೆ.ವಿ ರಾಜೇಂದ್ರ ತಿಳಿಸಿದರು.
ಮಂಗಳವಾರ ನಗರದ ಅರಮನೆ ಮಂಡಳಿ ಸಭಾಂಗಣದಲ್ಲಿ ನಡೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ದಸರಾ ಮಹೋತ್ಸವದಲ್ಲಿ ಏರ್ ಶೋ ನಡೆಸಿಕೊಡಲು ರಾಜ್ಯ ಸರ್ಕಾರದ ಮನವಿ ಮೇರೆಗೆ ಕೇಂದ್ರಸರ್ಕಾರ ಒಪ್ಪಿಗೆಯೊಂದಿಗೆ ಅನುಮತಿಯನ್ನು ನೀಡಿದೆ. ಈಗಾಗಲೇ ಸ್ಥಳ ಕೂಡ ಪರಿಶೀಲನೆ ನಡೆದಿದೆ. ಯುದ್ಧ ವಿಮಾನಗಳ ಹಾರಾಟ ಸೇರಿದಂತೆ ಯಾವ್ಯಾವ ವಿಮಾನಗಳು ಪ್ರದರ್ಶನ ನಡೆಯಲಿದೆ ಎಂಬುದು ಗೊತ್ತಾಗಿಲ್ಲ. ಈ ಬಗ್ಗೆ ರಕ್ಷಣಾ ಸಚಿವಾಲಯದ ಅಧಿಕಾರಿಗಳು ತೀರ್ಮಾನ ಮಾಡುತ್ತಾರೆ ಎಂದು ತಿಳಿಸಿದರು.