ಮೋದಿ ಸಂಚರಿಸುವ ರಸ್ತೆಗಳಲ್ಲಿ ದಸರಾ ದೀಪಾಲಂಕಾರ: ಸಚಿವ ಸೋಮಶೇಖರ್

ಹೊಸದಿಗಂತ ವರದಿ ಮೈಸೂರು:

ಯೋಗ ದಿನದ ಕಾರ್ಯಕ್ರಮಕ್ಕೆ ಪ್ರಧಾನಿ ನರೇಂದ್ರ ಮೋದಿಯವರು ಮೈಸೂರಿಗೆ ಭೇಟಿ ನೀಡುವ ಹಿನ್ನೆಲೆಯಲ್ಲಿ ಮೋದಿ ತಂಗುವ ಹೋಟೆಲ್, ಸಂಚರಿಸುವ ರಸ್ತೆಗಳಲ್ಲಿ ಕೈಗೊಳ್ಳಬೇಕಿರುವ ಭದ್ರತೆ, ರಸ್ತೆಗಳ ಸ್ಥಿತಿಗತಿಗಳ ಬಗ್ಗೆ ಸಹಕಾರ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಎಸ್.ಟಿ.ಸೋಮಶೇಖರ್ ಬುಧವಾರ ವೀಕ್ಷಣೆ ಮಾಡಿದರು. ನಂತರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಪ್ರಧಾನಮಂತ್ರಿಗಳು ಮೈಸೂರಿಗೆ ಆಗಮಿಸುವ ಹಿನ್ನೆಲೆಯಲ್ಲಿ ಎಲ್ಲಾ ರೀತಿಯ ವ್ಯವಸ್ಥೆ ಕೈಗೊಳ್ಳಲಾಗುತ್ತಿದೆ. ಪಾದಚಾರಿ ಮಾರ್ಗಗಳ ದುರಸ್ತಿ, ರಸ್ತೆಗಳ ಡಾಂಬರೀಕರಣಕ್ಕೆ 15 ಕೋಟಿ ರೂ. ವೆಚ್ಚವಾಗಲಿದೆ ಎಂದು ಪಾಲಿಕೆ ಅಂದಾಜು ಮಾಡಲಾಗಿದ್ದು, 10 ಕೋಟಿ ರೂ. ಅನುದಾನ ಬಿಡುಗಡೆ ಮಾಡಲಾಗಿದೆ ಎಂದರು.

15 ರಸ್ತೆಗಳ ಡಾಂಬರೀಕರಣ, ಪಾದಚಾರಿ ಮಾರ್ಗ ದುರಸ್ತಿ ಕಾರ್ಯ ಕೈಗೊಳ್ಳಲಾಗಿದೆ. ಮಂಗಳವಾರ ಮಳೆಯಾದ ಹಿನ್ನೆಲೆಯಲ್ಲಿ ಎರಡು ರಸ್ತೆಗಳ ಕಾಮಗಾರಿ ಪೂರ್ಣಗೊಂಡಿಲ್ಲ. ಮಳೆ ನಿಂತ ಕೂಡಲೇ ಆ ರಸ್ತೆಗಳ ಕಾಮಗಾರಿ ಮುಕ್ತಾಯವಾಗಲಿದೆ ಎಂದು ಹೇಳಿದರು. ಪ್ರಧಾನಮಂತ್ರಿಗಳು ಭೇಟಿ ನೀಡುವ ಅರಮನೆ, ಅವರು ಸಂಚರಿಸುವ ರಸ್ತೆಗಳಲ್ಲಿ ದಸರಾ ಸಮಯದಲ್ಲಿನ ದೀಪಾಲಂಕಾರ ಮಾಡಲು ಬೆಸ್ಕಾಂ ಅಧಿಕಾರಿಗಳಿಗೆ ಸೂಚಿಸಲಾಗಿದೆ. ವಾಹನಗಳ ಪಾರ್ಕಿಂಗ್ ಸ್ಥಳಗಳನ್ನು ಹಿರಿಯ ಪೊಲೀಸ್ ಅಧಿಕಾರಿಗಳು ಗುರುತಿಸಲಿದ್ದಾರೆ ಎಂದರು.

ಕಳೆದ ಮೂರು ವರ್ಷಗಳಿಂದ ಕೇಂದ್ರ ಪುರಸ್ಕೃತ ಯೋಜನೆಗಳ ಫಲಾನುಭವಿಗಳೊಂದಿಗೆ ಪ್ರಧಾನಮಂತ್ರಿ ನರೇಂದ್ರ ಮೋದಿ ಅವರು ಸಂವಾದ ನಡೆಸಲಿದ್ದಾರೆ. ಎಷ್ಟು ಜನರೊಂದಿಗೆ ಸಂವಾದ ನಡೆಸಬೇಕು ಎಂಬುದರ ಬಗ್ಗೆ ಕೇಂದ್ರ ಸರ್ಕಾರ ನೀಡುವ ನಿರ್ದೇಶನದಂತೆ ಆಯೋಜಿಸಲಾಗುವುದು ಎಂದು ತಿಳಿಸಿದರು. ಸಂವಾದ ಕಾರ್ಯಕ್ರಮ ವೀಕ್ಷಿಸಲು ಸುಮಾರು 60 ಸಾವಿರ ಜನರಿಗೆ ವ್ಯವಸ್ಥೆ ಮಾಡಲಾಗಿದೆ. ಒಂದು ಕಡೆ 30 ಸಾವಿರ, ಎರಡು ಕಡೆಗಳಲ್ಲಿ ತಲಾ 15 ಸಾವಿರ ಜನರು ಕಾರ್ಯಕ್ರಮ ವೀಕ್ಷಿಸಬಹುದು.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!