ಈಕೆ ಅಸಹಕಾರ ಚಳವಳಿಯಲ್ಲಿ ಭಾಗಿಯಾದ ಎರಡನೇ ಮಹಿಳೆ, ಪ್ರಖರ ವಾಗ್ಮಿ- ಪ್ರಚಂಡ ಹೋರಾಟಗಾರ್ತಿ

ಹೊಸದಿಗಂತ ಡಿಜಿಟಲ್‌ ಡೆಸ್ಕ್‌ 
ಸ್ವಾತಂತ್ರ್ಯ ಹೋರಾಟಗಾರ್ತಿ ದುವ್ವೂರಿ ಸುಬ್ಬಮ್ಮ ಅವರು ಆಂಧ್ರಪ್ರದೇಶದ ಪೂರ್ವ ಗೋದಾವರಿ ಜಿಲ್ಲೆಯ ದ್ರಾಕ್ಷಾರಾಮ ಗ್ರಾಮದಲ್ಲಿ ಜನಿಸಿದರು.
ಸುಬ್ಬಮ್ಮ ಎಳವೆಯಲ್ಲೇ ಸ್ವಾತಂತ್ರ್ಯ ಹೋರಾಟಗಳತ್ತ ಸೆಳೆಯಲ್ಪಟ್ಟರು. ಅಸಹಕಾರ ಚಳವಳಿ ಅತ್ಯಂತ ಬಿರುಸು ಪಡೆಯುತ್ತಿದ್ದ ಕಾಲವದು. ಬ್ರಿಟೀಷರ ಕಾಯ್ದೆ ಕಟ್ಟಳೆಗಳನ್ನು ವಿರೋಧಿಸಿ ದೇಶದ ಜನರು ಬೀದಿಗಿಳಿದು ಹೋರಾಡುತ್ತಿದ್ದರು. ಸುಬ್ಬಮ್ಮ ಚಳವಳಿಯಲ್ಲಿಗೆ ಧುಮುಕಿದರು. ವಿಶೇಷವೆಂದರೆ ಅಸಹಕಾರ ಚಳವಳಿಯಲ್ಲಿ ಭಾಗವಹಿಸಿದ ಆರಂಭಿಕ ಮಹಿಳೆಯರಲ್ಲಿ ಸುಬ್ಬಮ್ಮ ಎರಡನೆಯವರಾಗಿದ್ದರು. ಸುಬ್ಬಮ್ಮ ತನ್ನ ವಾಕ್ಚಾತುರ್ಯದಿಂದ ಜನರನ್ನು ಓಲೈಸಬಲ್ಲ ಅತ್ಯಂತ ಶಕ್ತಿಶಾಲಿ ವಾಗ್ಮಿ. ಅವರ ಮಾತುಗಳನ್ನು ಕೇಳಿದ ಎಂತಹವರಿಗಾದರೂ ಪ್ರೇರೇಪಣೆ ಸಿಗುತ್ತಿತ್ತು. ಹೋರಾಟಗಾರ್ತಿಯೊಬ್ಬಳು ಹೋರಾಟದ ಮುನ್ನೆಲೆಯಲ್ಲಿ ನಿಂತು ಜನರನ್ನು ಹುರಿದುಂಬಿಸುವುದು ಬ್ರಿಟೀಷರ ಕಣ್ಣು ಕೆಂಪಾಗಿಸಿತ್ತು. ಇದೇ ಕಾರಣಕ್ಕೆ 1922 ರಲ್ಲಿ ಸುಬ್ಬಮ್ಮಈರನ್ನು ಬಂಧಿಸಿ ರಾಜಮಂಡ್ರಿ ಜೈಲಿನಲ್ಲಿ ಸೆರೆವಾಸ ವಿಧಿಸಿದರು.
ಜೈಲಿಂದ ಬಿಡುಗಡೆಯಾದ ಬಳಿಕ ಆಕೆ ಮತ್ತೆ ಉಪ್ಪಿನ ಸತ್ಯಾಗ್ರಹದಲ್ಲಿ ಭಾಗವಹಿಸಿದರು. ಮತ್ತು ಇದಕ್ಕಾಗಿ 1930 ರಲ್ಲಿ ಮತ್ತೊಮ್ಮೆ ಸೆರೆವಾಸ ಅನುಭವಿಸಿದರು. ಅವರನ್ನು ವೆಲ್ಲೂರು ಜೈಲಿನಲ್ಲಿ ಆರು ತಿಂಗಳ ಕಾಲ ಬಂಧಿಸಿಡಲಾಗಿತ್ತು. ಆಕೆ 1942 ರಲ್ಲಿ ಕ್ವಿಟ್ ಇಂಡಿಯಾ ಚಳವಳಿಯಲ್ಲೂ ಸಕ್ರಿಯವಾಗಿ ಭಾಗಿಯಾದರು.
ಆ ಬಳಿಕ ರಾಜಮಂಡ್ರಿಯ ಸ್ತ್ರೀ ಸನಾತನ ವಿದ್ಯಾಲಯದಲ್ಲಿ ಸದಸ್ಯರಾಗಿ ಸೇವೆ ಸಲ್ಲಿಸಿದರು. 1923 ರಲ್ಲಿ ಕಾಕಿನಾಡ ಕಾಂಗ್ರೆಸ್ ಮಹಾ ಸಭಾವು ಅವರಿಗೆ ‘ದೇಶ ಬಾಂಧವಿ’ ಎಂಬ ಬಿರುದನ್ನು ನೀಡಿ ಗೌರವಿಸಿತ್ತು. ಉತ್ಕಟ ಸ್ವಾತಂತ್ರ್ಯ ಹೋರಾಟಗಾರ್ತಿ ಮತ್ತು ನಿಷ್ಠಾವಂತ ಗಾಂಧಿವಾದಿ ಅನುಯಾಯಿಯಾಗಿ, ಅವರು ತಮ್ಮ ಧೈರ್ಯ ಮತ್ತು ಉತ್ಸಾಹಕ್ಕಾಗಿ ಗಾಂಧೀಜಿಯವರ ಮೆಚ್ಚುಗೆಯನ್ನು ಗಳಿಸಿದ್ದರು.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!