ಪ್ರೀತಿಯ ಓದುಗರೇ,
ಕೋವಿಡ್ ನಿರ್ನಾಮ ನಮ್ಮ ಕೈಯಲ್ಲೇ ಇದೆ. ಮಾಸ್ಕ್ ಧರಿಸಿ, ಸಾಮಾಜಿಕ ಅಂತರ ಕಾಯ್ದುಕೊಳ್ಳಿ, ಕೈ, ಮುಖವನ್ನು ಸ್ವಚ್ಛವಾಗಿ ಇಟ್ಟುಕೊಳ್ಳಿ. ನೀವೂ ಸುರಕ್ಷಿತರಾಗಿರಿ, ನಿಮ್ಮವರನ್ನೂ ಸುರಕ್ಷಿತರಾಗಿ ಇರುವಂತೆ ನೋಡಿಕೊಳ್ಳಿ.
…………………………………………………………………
ಹೊಸ ದಿಗಂತ ವರದಿ, ಚಿಕ್ಕಮಗಳೂರು:
ಪರಿಸರವಾದಿ ಡಿ.ವಿ.ಗಿರೀಶ್ ಮೇಲಿನ ಹಲ್ಲೆ ಜೊತೆಗೆ ಅಪ್ರಾಪ್ತ ಬಾಲಕಿಯನ್ನು ಅಶ್ಲೀಲ ಪದಗಳಿಂದ ನಿಂದಿಸಿ ಕೈಹಿಡಿದು ಎಳೆದಾಡಿದ ಆರೋಪದ ಮೇಲೆ 7 ಮಂದಿ ಆರೋಪಿಗಳನ್ನು ಬಂಧಿಸಿ ಪೋಕ್ಸೋ ಪ್ರಕರಣ ದಾಖಲಿಸಲಾಗಿದೆ ಎಂದು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಎಂ.ಹೆಚ್ ಅಕ್ಷಯ್ ತಿಳಿಸಿದರು.
ಶುಕ್ರವಾರ ಸುದ್ದಿಗೋಷ್ಠಿಯಲ್ಲಿ ಈ ಕುರಿತು ನಡೆಸಿ ಮಾಹಿತಿ ನೀಡಿದ ಅವರು ಚಿಕ್ಕಮಗಳೂರು ತಾಲ್ಲೂಕಿನ ಕಂಬಿಹಳ್ಳಿ ಬಳಿ ಆಗಸ್ಟ್ 30 ರ ಸಂಜೆ ಪರಿಸರವಾದಿ ಡಿ.ವಿ ಗಿರೀಶ್ ಹಾಗೂ ಸ್ನೇಹಿತರುಗಳು ಜೀಪಿನಲ್ಲಿ ಪ್ರಯಾಣಿಸುತ್ತಿದ್ದ ವೇಳೆ ಕೆಲವು ಯುವಕರು ಮದ್ಯದ ಅಮಲಿನಲ್ಲಿ ಜೀಪಿನಲ್ಲಿದ್ದ ಅಪ್ರಾಪ್ತ ಬಾಲಕಿಯನ್ನು ಅಶ್ಲೀಲ ಪದಗಳಿಂದ ಚುಡಾಯಿಸಿ ಅವಾಚ್ಯವಾಗಿ ನಿಂದಿಸಿದಾಗ ಇದನ್ನು ಪ್ರಶ್ನಿಸಿದ್ದಕ್ಕೆ ಗಿರೀಶ್ ಮೇಲೆ ಹಲ್ಲೆ ನಡೆಸಿದ್ದರು ಅಲ್ಲದೇ ಬಾಲಕಿಯ ಕೈಹಿಡಿದು ಎಳೆದಾಡಲು ಮುಂದಾಗಿದ್ದರು ಎಂಬ ಆರೋಪದ ಮೇಲೆ ಏಳು ಮಂದಿಯನ್ನು ಬಂಧಿಸಲಾಗಿದೆ ಎಂದು ತಿಳಿಸಿದರು.
ಆರೋಪಿಗಳೆಲ್ಲರೂ ಚಿಕ್ಕಮಗಳೂರು ತಾಲ್ಲುಕು ಹೊಸಪೇಟೆ, ಸಂತವೇರಿ, ಹಾಗೂ ಕಂಬಿಹಳ್ಳಿಯವರಾಗಿದ್ದು, ಮನು, ಸಂದೀಪ್, ರವಿ, ಶಶಿಕುಮಾರ್, ಅರಣ್, ಸಂಪತ್, ರಾಜು ಎಂದು ಗುರುತಿಸಲಾಗಿದೆ. ಇವರೆಲ್ಲರೂ ಪ್ರವಾಸಿಗರಿಗೆ, ದಾರಿಹೋಕರಿಗೆ, ಆಗಾಗ ಸಣ್ಣಪುಟ್ಟ ಕಿರಿಕಿರಿ ಮಾಡುತ್ತಿದ್ದರು ಎಂಬುದು ತಿಳಿದುಬಂದಿದೆ. ಅಪ್ರಾಪ್ತ ಬಾಲಕಿಯನ್ನು ನಿಂದಿಸಿ ಕೈಹಿಡಿದು ಎಳೆದಾಡಲು ಮುಂದಾದ ಕಾರಣಕ್ಕೆ ಪೋಕ್ಸೋ ಕಾಯ್ದೆಯಡಿ ಅವರ ವಿರುದ್ದ ಪ್ರಕರಣ ದಾಖಲಿಸಲಾಗಿದೆ ಎಂದರು.
ಬಂಧಿತ ಆರೋಪಿಗಳೆಲ್ಲರೂ ಟಿಂಬರ್, ಗಣಿ ಪ್ರದೇಶಗಳಲ್ಲಿ ಕೂಲಿಕಾರ್ಮಿಕರಾಗಿ ಕೆಲಸ ಮಾಡಿಕೊಂಡು ಇದ್ದವರು. ಘಟನೆ ನಡೆದ ನಂತರ ಆರೋಪಿಗಳೆಲ್ಲರೂ ತಲೆಮರೆಸಿಕೊಂಡು ರಾಜ್ಯದ ವಿವಿಧೆಡೆ ತಲೆ ಮರೆಸಿಕೊಂಡಿದ್ದರು. ಅವರ ಪತ್ತೆಗೆ ಗ್ರಾಮಾಂತರ ಠಾಣೆ ವೃತ್ತನಿರೀಕ್ಷಕಿ ಜಿ.ಎಸ್. ಸ್ವರ್ಣ, ಪಿಎಸ್ಐ ಎನ್.ಎಸ್. ರವಿ, ಲಿಂಗದಹಳ್ಳಿ ಠಾಣೆಯ ಪಿಎಸ್ಐ ಅನಿಲ್ಕುಮಾರ್ನಾಯಕ್, ಗ್ರಾಮಾಂತರ ಠಾಣೆಯ ಸೆನ್ ವಿಭಾಗ ಪಿಎಸ್ಐ ರಫೀಕ್, ಮತ್ತು ಪ್ರೋಬೆಷನರಿ ಡಿವೈಎಸ್ಪಿ ಜಿ.ತಲಕಟ್ಟಿಯವರ ನೇತೃತ್ವದಲ್ಲಿ ಮೂರು ಪೊಲೀಸ್ ತಂಡಗಳನ್ನು ರಚಿಸಲಾಗಿತ್ತು.
ಪೊಲೀಸರು ಕಾರ್ಯಾಚರಣೆ ನಡೆಸಿ ಬಳ್ಳಾರಿಯಲ್ಲಿ 2 ಮಂದಿಯನ್ನು, ಬೆಂಗಳೂರಿನಲ್ಲಿ 3, ಹಾಗೂ ಸಂತವೇರಿಯಲ್ಲಿ ಓರ್ವನನ್ನು ಸೇರಿ ಒಟ್ಟು 7 ಮಂದಿ ಆರೋಪಿಗಳನ್ನು 48 ಗಂಟೆಯೊಳಗೆ ಬಂಧಿಸಲಾಗಿದೆ ಅವರನ್ನು ನ್ಯಾಯಾಲಯದ ಮುಂದೆ ಹಾಜರುಪಡಿಸಲಾಗಿದೆ ಎಂದು ಮಾಹಿತಿ ನೀಡಿದರು.
ಹಲ್ಲೆ ನಡೆಸಿದ ಆರೋಪಿಗಳ ಪತ್ತೆ ಕಾರ್ಯದಲ್ಲಿ ಎ.ಎಸ್ಐ ಸುರೇಶ್, ಸಿಬ್ಬಂದಿಳಾದ ಹಾಲಪ್ಪ, ರಮೇಶ್, ಭರತ್, ಭೂಷಣ್, ಸಿದ್ದೇಶ, ಗಿರೀಶ್, ಮಂಜುನಾಥ, ನಾಗರತ್ನಮ ಬಸವರಾಜ್ ಉಪಸ್ಥಿತರಿದ್ದರು. ಕಾರ್ಯಾಚರಣೆ ಮೂಲಕ ಆರೋಪಿಗಳನ್ನು ಬಂಧಿಸುವಲ್ಲಿ ಯಶಸ್ವಿಯಾದ ಪೊಲೀಸ್ ತಂಡಕ್ಕೆ ಪ್ರಶಂಸ ಪತ್ರ ನೀಡುವ ಮೂಲಕ ವೈಯಕ್ತಿಕವಾಗಿ ನಗÀದುಬಹುಮಾನ ನೀಡಿದರು.
ಈ ಸಂದರ್ಭದಲ್ಲಿ ಪಿಐ ಸ್ವರ್ಣ ಜಿ.ಎಸ್, ಗ್ರಾಮಾಂತರ ಠಾಣೆ ಪಿಎಸ್ಐ ಎನ್.ಎಸ್. ರವಿ, ಲಿಂಗದಹಳ್ಳಿ ಠಾಣೆಯ ಪಿಎಸ್ಐ ಅನಿಲ್ಕುಮಾರ್ನಾಯಕ್, ಗ್ರಾಮಾಂತರ ಠಾಣೆಯ ಸೆನ್ ವಿಭಾಗ ಪಿಎಸ್ಐ ರಫೀಕ್, ಮತ್ತು ಪ್ರೋಬೆಷನರಿ ಡಿವೈಎಸ್ಪಿ ಜಿ. ತಲಕಟ್ಟಿ ಸೇರಿದಂತೆ ಮತ್ತಿತರರು ಇದ್ದರು.
ಆನ್ಲೈನ್ ಮೂಲಕ ಜನರನ್ನು ವಂಚಿಸಿ ಹಣ ಸುಲಿಗೆ ಮಾಡಿದ ಘಟನೆಗಳಿಗೆ ಸಂಬಂಧಿಸಿದಂತೆ ಸಾರ್ವಜನಿಕರು ಯಾವುದೇ ಅಪರಿಚಿತ ಸಂಖ್ಯೆಯಿಂದ ದೂರವಾಣಿ ಕರೆ ಬಂದಲ್ಲಿ ಅದಕ್ಕೆ ಸ್ಪಂದಿಸಬಾರದು. ಓಟಿಪಿ ಅಕೌಂಟ್ಸಂಖ್ಯೆ ಮತ್ತಿತರ ವಿಷಯಗಳನ್ನು ಹಂಚಿಕೊಳ್ಳಬಾರದು ಈ ರೀತಿ ಅಪರಿಚಿತ ಕರೆಗಳು ಬಂದಲ್ಲಿ ಕೂಡಲೇ ಸೈಬರ್ಕ್ರೈಮ್ಗೆ ದೂರು ನೀಡುವಂತೆ ಸಲಹೆ ನೀಡಿದರು. ಬ್ಯಾಂಕ್ ಹೆಸರೇಳಿಕೊಂಡು ವಂಚನೆ ಮಾಡುತ್ತಿರುವ ಬಗ್ಗೆ ಲೀಡ್ ಬ್ಯಾಂಕ್ ವ್ಯವಸ್ಥಾಪಕರಿಂದ ಮಾಹಿತಿಯನ್ನು ಸಾರ್ವಜನಿಕರಿಗೆ ತಿಳಿಸಲಾಗುವುದು ಎಂದರು.