ದ್ವೈತ ಸಿದ್ಧಾಂತ ಮೇರು ವಿದ್ವಾಂಸ ವಿದ್ವಾನ್ ಸಗ್ರಿ ರಾಘವೇಂದ್ರ ಉಪಾಧ್ಯಾಯ ವಿಧಿವಶ

ಹೊಸದಿಗಂತ, ಮಂಗಳೂರು:

ದ್ವೈತ ಸಿದ್ಧಾಂತ ಮೇರು ವಿದ್ವಾಂಸ, ಪ್ರಚನಕಾರ, ಉಡುಪಿ ಶ್ರೀಕೃಷ್ಣ ಮಠದ ಅಷ್ಟಮಠಗಳ ಆಸ್ಥಾನ ವಿದ್ವಾಂಸ ವಿದ್ವಾನ್ ಸಗ್ರಿ ರಾಘವೇಂದ್ರ ಉಪಾಧ್ಯಾಯ ವಿಧಿವಶರಾಗಿದ್ದಾರೆ.

ಅವರಿಗೆ 72 ವರ್ಷ ವಯಸ್ಸಾಗಿತ್ತು.

ಬೆಂಗಳೂರಿನಲ್ಲಿ ಶುಕ್ರವಾರ ಸಂಜೆ ಸರಣಿ ಪ್ರವಚನ ಮಾಲಿಕೆಯಲ್ಲಿ ಪಾಲ್ಗೊಂಡಿದ್ದ ಅವರು, ಶ್ರೀರಾಮ ನಿರ್ಯಾಣದ ವಿಷಯದಲ್ಲಿ ಪ್ರವಚನಗೈದ ಕೆಲವೇ ಸಮಸಯದ ಬಳಿಕ ಅಸ್ವಸ್ಥಗೊಂಡು ಕುಸಿದಿದ್ದರು. ತಕ್ಷಣ ಅವರನ್ನು ಚಿಕಿತ್ಸೆಗೊಳಪಡಿಸಲಾಯಿತಾದರೂ ಶನಿವಾರ ಅವರು ಇಹಲೋಕ ತ್ಯಜಿಸಿದ್ದಾರೆ.

ಮೂಲತಃ ವಿದ್ವಾಂಸರ ಮನೆತನದವರಾದ ಉಪಾಧ್ಯಾಯರು, ಮಧ್ವಶಾಸ್ತ್ರದ ಬಗ್ಗೆ ಇದಮಿತ್ಥಂ ಎಂದು ಅಧಿಕೃತವಾಗಿ ಮಾತನಾಡಬಲ್ಲ ವಿದ್ವಾಂಸರಾಗಿದ್ದರು. ಅವರು ಉಡುಪಿಯ ಶ್ರೀ ಮನ್ನಧ್ವ ಸಿದ್ಧಾಂತ ಸಂಸ್ಕೃತ ಮಹಾವಿದ್ಯಾಲಯದಲ್ಲಿ ಸುದೀರ್ಘ ಕಾಲ ದ್ವೈತ ವೇದಾಂತ ಶಾಸ್ತ್ರ ಪ್ರಾಧ್ಯಾಪಕರಾಗಿ ಸೇವೆ ಸಲ್ಲಿಸಿ ನಿವೃತ್ತರಾಗಿದ್ದರು. ಶ್ರೀಕೃಷ್ಣ ಮಠದಿಂದ ಪ್ರಕಟವಾಗುವ ಸುಗುಣಮಾಲಾ, ಸರ್ವಮೂಲ ತತ್ತ್ವವಾದ ಮೊದಲಾದ ಅನೇಕ ಮಾಸಪತ್ರಿಕೆಗಳಲ್ಲಿ ಅವರು ನಿರಂತರವಾಗಿ ಅಂಕಣಗಳನ್ನು ಬರೆಯುತ್ತಿದ್ದರು. ಉಪಾಧ್ಯಾಯರು,ಇತ್ತೀಚೆಗಷ್ಟೇ ಪೇಜಾವರ ಶ್ರೀಗಳ ನೇತೃತ್ವದಲ್ಲಿ ಅಯೋಧ್ಯೆಯಲ್ಲಿ ಸಂಪನ್ನಗೊಂಡ ಮಂಡಲೋತ್ಸವದಲ್ಲಿ ಭಾಗವಹಿಸಿ ಅಷ್ಠಾವಧಾನ ಸೇವೆಗೈದಿದ್ದರು.
ಉಪಾಧ್ಯಾಯರು ಪತ್ನಿ, ಓರ್ವ ಪುತ್ರ ಹಾಗೂ ಇಬ್ಬರು ಪುತ್ರಿಯರು ಹಾಗೂ ಅಪಾರ ಶಿಷ್ಯರು, ಅಭಿಮಾನಿಗಳನ್ನು ಅಗಲಿದ್ದಾರೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!