ಹೊಸದಿಗಂತ ವರದಿ, ಮೈಸೂರು:
ಮೈಸೂರು ಅರಮನೆ ಮಂಡಳಿಯ ವತಿಯಿಂದ ಕೊರೋನ ಹರಡುವಿಕೆಯ ಕಾರಣದಿಂದ ರದ್ದುಪಡಿಸಲಾಗಿದ್ದ “ಧ್ವನಿ ಮತ್ತು ಬೆಳಕು” ಕಾರ್ಯಕ್ರಮವನ್ನು ಮಾರ್ಚ್ 15ರ ಸೋಮವಾರದಿಂದ ಪುನರಾರಂಭಿಸಲಾಗುವುದು ಎಂದು ಅರಮನೆಯ ಮಂಡಳಿಯ ಉಪನಿರ್ದೇಶಕ ಟಿ.ಎಸ್.ಸುಬ್ರಹ್ಮಣ್ಯ ತಿಳಿಸಿದ್ದಾರೆ.
ಪ್ರತಿ ಭಾನುವಾರ ಮತ್ತು ಸರ್ಕಾರಿ ರಜಾ ದಿನಗಳನ್ನು ಹೊರತುಪಡಿಸಿ, ಧ್ವನಿ ಮತ್ತು ಬೆಳಕು ಕಾರ್ಯಕ್ರಮದ ಕನ್ನಡ ಅವತರಣಿಕೆಯು ಸೋಮವಾರ, ಮಂಗಳವಾರ ಮತ್ತು ಬುಧವಾರ ಸಂಜೆ 7ರಿಂದ 8ರವರೆಗೆ ನಡೆಯಲಿದ್ದು, ದೊಡ್ಡವರಿಗೆ 70ರೂ. ಮಕ್ಕಳಿಗೆ 30 ರೂ. ಪ್ರವೇಶ ದರವಿದೆ.
ಧ್ವನಿ ಮತ್ತು ಬೆಳಕು ಕಾರ್ಯಕ್ರಮ ಇಂಗ್ಲೀಷ್ ಅವತರಣಿಕೆ ಗುರುವಾರ, ಶುಕ್ರವಾರ ಹಾಗೂ ಶನಿವಾರ ಸಂಜೆ 7 ರಿಂದ 8ರವರೆಗೆ ನಡೆಯಲಿದ್ದು, ದೊಡ್ಡವರಿಗೆ 90ರೂ. ಮಕ್ಕಳಿಗೆ 40ರೂ ಇರುತ್ತದೆ. ಕಾರ್ಯಕ್ರಮದ ನಂತರ ಸಂಜೆ 7:45 ಕ್ಕೆ 15 ನಿಮಿಷಗಳ ಕಾಲ ಅರಮನೆ ದೀಪಾಲಂಕಾರ ಇರುತ್ತದೆ
ಕನ್ನಡ ಮತ್ತು ಇಂಗ್ಲೀಷ್ ಧ್ವನಿ ಮತ್ತು ಬೆಳಕು ಕಾರ್ಯಕ್ರಮ (ಇಂಗ್ಲೀಷ್) ಪ್ರತಿ ಶನಿವಾರ ಸಂಜೆ 7 ರಿಂದ 8 ರವರೆಗೆ ನಡೆಯಲಿದ್ದು, ದೊಡ್ಡವರಿಗೆ 90ರೂ. ಮಕ್ಕಳಿಗೆ 40ರೂ. ಇದ್ದು, ರಾತ್ರಿ 8:15 ರಿಂದ 9:15 (ಕನ್ನಡ) ದೊಡ್ಡವರಿಗೆ 70ರೂ. ಮಕ್ಕಳಿಗೆ 30 ರೂ. ಕಾರ್ಯಕ್ರಮದ ನಂತರ ಸಂಜೆ 7:45 ಮತ್ತು ರಾತ್ರಿ 9:15 ನಿಮಿಷ ಅರಮನೆ ದೀಪಾಲಂಕಾರವಿದೆ. ಪ್ರತಿ ಭಾನುವಾರ ಮತ್ತು ಸರ್ಕಾರಿ ರಜಾ ದಿನಗಳಂದು “ಧ್ವನಿ ಮತ್ತು ಬೆಳಕು” ಕಾರ್ಯಕ್ರಮ ಇರುವುದಿಲ್ಲ.
ಪ್ರತಿ ಭಾನುವಾರ ಮತ್ತು ಸರ್ಕಾರಿ ರಜಾ ದಿನಗಳಂದು ಅರಮನೆ ದೀಪಾಲಂಕಾರ ಸಂಜೆ 7 ರಿಂದ 8ರವರಗೆ ಇರುತ್ತದೆ. ಅರಮನೆಗೆ ಆಗಮಿಸುವವರು ಕೋವಿಡ್-19 ಮುಂಜಾಗ್ರತಾ ಕ್ರಮಗಳನ್ನು ಅನುಸರಿಸಬೇಕು ಎಂದು ತಿಳಿಸಿದ್ದಾರೆ.