Wednesday, July 6, 2022

Latest Posts

ಭೂಕಂಪನ‌ ಪೀಡಿತ ಗಡಿಕೇಶ್ವರ ಗ್ರಾಮಕ್ಕೆ ಕಂದಾಯ ಸಚಿವ ಆರ್.ಅಶೋಕ ಭೇಟಿ, ಪರಿಶೀಲನೆ

ಹೊಸದಿಗಂತ ವರದಿ, ಕಲಬುರಗಿ:

ಭೂಕಂಪನ‌ ಪೀಡಿತ ಗ್ರಾಮಗಳಲ್ಲಿ ಮನೆ ಮುಂದೆ ಶೆಡ್ ನಿರ್ಮಾಣ ಮಾಡಬೇಕು ಎಂಬ ಗ್ರಾಮಸ್ಥರ ಬೇಡಿಕೆ ಕುರಿತಂತೆ ಮುಖ್ಯಮಂತ್ರಿಗಳೊಂದಿಗೆ ಚರ್ಚಿಸಿ ಸೂಕ್ತ ತೀರ್ಮಾನ ಕೈಗೊಳ್ಳಲಾಗುವುದು ಎಂದು ಕಂದಾಯ ಸಚಿವ ಆರ್.ಅಶೋಕ ಹೇಳಿದರು.
ಮಂಗಳವಾರ ಚಿಂಚೋಳಿ ತಾಲೂಕಿನ ಭೂಕಂಪನ‌ ಪೀಡಿತ ಗಡಿಕೇಶ್ವರ ಗ್ರಾಮಕ್ಕೆ ಭೇಟಿ‌ ನೀಡಿದ ಅವರು ಶಾಲಾ ಆವರಣದಲ್ಲಿ ಸಾರ್ವಜನಿಕರನ್ನು ಉದ್ದೇಶಿಸಿ‌ ಮಾತನಾಡಿದರು.
ಗಡಿಕೇಶ್ವರ ಮತ್ತು ಸುತ್ತಮುತ್ತ ಹಳ್ಳಿಗಳಲ್ಲಿ ಭೂಮಿ ಕಂಪಿಸುತ್ತಿರುವ ಕಾರಣ ಗ್ರಾಮದಲ್ಲಿ ಭೂಕಂಪದ ತೀವ್ರತೆ ಅರಿಯಲು ಹೈದ್ರಬಾದಿನ‌ ಎನ್.ಜಿ.ಆರ್.ಐ. ವಿಜ್ಞಾನಿಗಳ ತಂಡ ಸಿಸ್ಮೋಮೀಟರ್ ಯಂತ್ರ ಅಳವಡಿಸಿದ್ದಾರೆ. ಮುಂದಿನ 1 ತಿಂಗಳ ಕಾಲ ವಿಜ್ಞಾನಿಗಳು ಈ ಯಂತ್ರದ ಮೂಲಕ ದಾಖಲಾಗುವ ಪ್ರತಿಯೊಂದು ಮಾಹಿತಿಯನ್ನು ಅಧ್ಯಯನ ಮಾಡಿ ಸರ್ಕಾರಕ್ಕೆ ವೈಜ್ಞಾನಿಕವಾಗಿ ವರದಿ ಸಲ್ಲಿಸಲಿದ್ದು, ತದನಂತರ ಸರ್ಕಾರ ಮುಂದಿನ ಕ್ರಮ ಕೈಗೊಳ್ಳಲಿದೆ ಎಂದರು.
ಹೈದ್ರಾಬಾದಿನ ಭೂ ವಿಜ್ಞಾನಿಗಳ ಪ್ರಾಥಮಿಕ ವರದಿ ಪ್ರಕಾರ ಇದು ಸಣ್ಣ ಪ್ರಮಾಣದ ಭೂಕಂಪವಾಗಿದ್ದು, ಹೆದರುವ ಅವಶ್ಯಕತೆವಿಲ್ಲ. ಕಳೆದ 2-3 ವರ್ಷದಿಂದ ಹೆಚ್ಚಿನ ಮಳೆಯಾಗಿದೆ. ಜೊತೆಗೆ ಸುಣ್ಣದ ಕಲ್ಲಿನಿಂದ ಕೂಡಿರುವ ಪ್ರದೇಶ ಇದಾಗಿದ್ದರಿಂದ ಭೂಮಿಯೊಳಗೆ ರಸಾಯನಿಕ ಕ್ರಿಯೆಗಳ ಚಲನವಲನದಿಂದ ಶಬ್ದ ಇತ್ತೀಚೆಗೆ ಹೆಚ್ಚಾಗಿ ಕೇಳಿಬರುತ್ತಿದೆ ಎಂದಿದ್ದಾರೆ. ಹೀಗಾಗಿ ಸಾರ್ವಜನಿಕರು ಭಯಪಡುವ ಅವಶ್ಯಕತೆವಿಲ್ಲ. ಸರ್ಕಾರ‌ ನಿಮ್ಮೊಂದಿಗಿದೆ ಧೈರ್ಯದಿಂದಿರಿ ಎಂದು ಗ್ರಾಮಸ್ಥರಿಗೆ ಅತ್ಮ ಸ್ಥೈರ್ಯ ತುಂಬಿದರು.
ಭೂಕಂಪನದಿಂದ ಮನೆಗಳಲ್ಲಿ ಬಿರುಕು ಕಾಣಿಸಿಕೊಂಡಲ್ಲಿ 50 ಸಾವಿರ ರೂ. ಪರಿಹಾರ ನೀಡಲಾಗುವುದು. ಗ್ರಾಮದಲ್ಲಿ ಸರ್ವೆ ಕಾರ್ಯಕ್ಕೆ ಅಧಿಕಾರಿಗಳಿಗೆ ಸೂಚಿಸಲಾಗಿದೆ ಎಂದರು.
ಯಾವುದಕ್ಕೂ ಗ್ರಾಮಸ್ಥರು ಎಚ್ಚರಿಕೆಯಿಂದಿರಬೇಕು. ಧೈರ್ಯ ಕಳೆದುಕೊಳ್ಳಬಾರದು. ಸರ್ಕಾರ‌ ನಿಮಗಾಗಿ ಕಾಳಜಿ ಕೇಂದ್ರ ತೆರೆದಿದೆ. ಹಿಂದೆ ಗಂಜಿ ಕೇಂದ್ರ ಎಂದು ಕರೆಯಲಾಗುತ್ತಿತ್ತು. ನಮ್ಮ ಸರ್ಕಾರ ಗೌರವಯುತವಾಗಿ ಕಾಳಜಿ ಕೇಂದ್ರ ಎಂದು ಮರುನಾಮಕರಣಗೊಳಿಸಿ ಕಷ್ಟದ ಕಾಲದಲ್ಲಿ ನಿಮ್ಮ ಕಾಳಜಿ ವಹಿಸುತ್ತಿದ್ದೇವೆ. ಕಿವಿ ಮತ್ತು ಕಣ್ಣಿರುವ ಸರ್ಕಾರ ನಮ್ಮದಾಗಿದೆ ಎಂದರು
ಕಾಳಜಿ ಕೇಂದಲ್ಲಿ ಗುಣಮಟ್ಟದ ಅಹಾರ ಪೂರೈಕೆಗೆ ಸೂಚಿಸಲಾಗಿದೆ. ಇದಕ್ಕೆಂದೆ‌ ಮೆನು ಸಹ ನೀಡಲಾಗಿದೆ. ಅವಶ್ಯಬಿದ್ದರೆ ಇನ್ನಿತರ ಗ್ರಾಮದಲ್ಲಿಯೂ ಕಾಳಜಿ ಕೇಂದ್ರ ತೆರೆಯಲು ಅಧಿಕಾರಿಗಳಿಗೆ ಸೂಚಿಸಿದ್ದಾನೆ. ಹಣದ ಕೊರತೆಯಿಲ್ಲ. ವಿಪತ್ತು ನಿರ್ವಹಣಾ ಅನುದಾನದಡಿ ಎಲ್ಲವು ಭರಿಸಲಾಗುವುದು ಎಂದು ಸಚಿವ ಅರ್.ಅಶೋಕ ತಿಳಿಸಿದರು.
ಇದಕ್ಕೂ ಮುನ್ನ ಕಲ್ಯಾಣ ಕರ್ನಾಟಕ ರಸ್ತೆ ಸಾರಿಗೆ ಸಂಸ್ಥೆಯ ಅಧ್ಯಕ್ಷ ಹಾಗೂ ಸೇಡಂ ಶಾಸಕ ರಾಜಕುಮಾರ ಪಾಟೀಲ ತೇಲ್ಕೂರ ಮಾತನಾಡಿ ಕಳೆದ‌ 10 ವರ್ಷದಿಂದ ಗ್ರಾಮದಲ್ಲಿ ಭೂಕಂಪನದ ಸದ್ದು ಕೇಳಿಸುತ್ತಿದೆ. ಆದರೆ ಕಳೆದ 10-12 ದಿನದಿಂದ‌ ಶಬ್ದದ ತೀವ್ರತೆ ಹೆಚ್ಚಾದ ಕಾರಣ ಜನ ಭಯಭೀತರಾಗಿದ್ದಾರೆ. 3 ದಿನದ ಹಿಂದೆಯೆ ತಾವು ಮತ್ತು ಸಂಸದ ಡಾ.ಉಮೇಶ ಜಾಧವ ಅವರು ಸಧಿಕಾರಿಗಳೊಂದಿಗೆ ರಾತ್ರಿ ವಾಸ್ತವ್ಯ ಜನರಲ್ಲಿ‌ ಧೈರ್ಯ ತುಂಬಿದ್ದೇವೆ. ಆಡಳಿತ‌ ಯಂತ್ರ 24 ಗಂಟೆ ಇಲ್ಲಿ ಕಾರ್ಯನಿರ್ವಹಿಸುತ್ತಿದೆ ಎಂದರು.
ಇಲ್ಲಿನ‌ ಜನರ ಅಪೇಕ್ಷೆಯಂತೆ ಮನೆ ಮುಂದೆ ಶೆಡ್ ನಿರ್ಮಿಸಬೇಕು ಮತ್ತು ಕಚ್ಚಾ ಮನೆಗಳನ್ನು ಸರ್ಕಾರದಿಂದಲೆ‌ ಪಕ್ಕಾ ಮನೆ ನಿರ್ಮಿಸಿ‌ಕೊಡಬೇಕು ಎಂದು ಸಚಿವರಲ್ಲಿ ಗ್ರಾಮಸ್ಥರ ಪರವಾಗಿ ಬೇಡಿಕೆ ಇಟ್ಟರು.

ಈ ಸುದ್ದಿ ಇತರರೊಂದಿಗೂ ಹಂಚಿಕೊಳ್ಳಿ

Whatsapp Group
Telegram

Latest Posts

Don't Miss