ಅಸಾಹಯಕ ವಿದ್ಯಾರ್ಥಿಗಳಿಗೆ ಶಿಕ್ಷಣ ನೀಡಿದರೆ ದೇಶಕ್ಕೆ ಉತ್ತಮ ಮಕ್ಕಳು ಪ್ರಜೆಗಳಾಗುತ್ತಾರೆ: ನಟ ರಾಘವೇಂದ್ರ ರಾಜಕುಮಾರ್

ಹೊಸದಿಗಂತ ವರದಿ,ಹಾವೇರಿ:

ಸಮಾಜದಲ್ಲಿನ ಅಸಾಹಯಕರಿಗೆ ಒಂದು ಹೊತ್ತು ಆಹಾರವನ್ನು ನೀಡಿದರೆ ಅವರಿಗೆ ಮತ್ತೆ ಹಸಿವಾಗುತ್ತದೆ. ಆದರೆ ಅದೇ ಅಸಾಹಯಕ ವಿದ್ಯಾರ್ಥಿಗಳಿಗೆ ಉತ್ತಮ ಶಿಕ್ಷಣವನ್ನು ನೀಡಿದರೆ ಅವರು ಮನೆಗೆ, ಊರಿಗೆ, ಸಮಾಜಕ್ಕೆ ಮತ್ತು ದೇಶಕ್ಕೆ ಉತ್ತಮ ಮಕ್ಕಳು ಪ್ರಜೆಗಳಾಗುತ್ತಾರೆ. ಉತ್ತಮ ಶಿಕ್ಷಣ ನೀಡುವುದಕ್ಕೆ ಬೇಕಾದ ವ್ಯವಸ್ಥೆಗಳನ್ನು ನಾವೆಲ್ಲ ಸೇರಿ ಮಾಡುವುದರತ್ತ ಗಮನಕೊಡಬೇಕಾಗಿದೆ ಎಂದು ಚಿತ್ರ ನಟ ರಾಘವೇಂದ್ರರಾಜಕುಮಾರ ಹೇಳಿದರು.
ನಗರದ ಮುನ್ಸಿಪಲ್ ಹೈಸ್ಕೂಲಗೆ ಮೂಲಭೂತ ಸೌಲಭ್ಯಗಳನ್ನು ಒದಗಿಸುವ ನಿಟ್ಟಿನಲ್ಲಿ ದತ್ತು ಪಡೆದುಕೊಂಡು ಕಟ್ಟಡಕ್ಕೆ ಸುಣ್ಣ, ಬಣ್ಣ ಹಚ್ಚುವ ಕಾರ್ಯಕ್ಕೆ ಚಾಲನೆ ನೀಡಿದ ನಂತರ ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ಚಿತ್ರ ನಟರ, ಚಿತ್ರ ನಿರ್ಮಾಪಕರು ಸೇರಿದಂತೆ ಒಟ್ಟಾರೆ ಚಿತ್ರ ರಂಗ ರಾಜ್ಯದಲ್ಲಿರುವ ಇಂತಹ ಶಾಲೆಗಳನ್ನು ದತ್ತಕ್ಕೆ ತಗೆದುಕೊಂಡು ಶಾಲೆಗಳಲ್ಲಿನ ಮೂಲಭೂತ ಸೌಲಭ್ಯಗಳನ್ನು ಒದಗಿಸುವುದರೊಂದಿಗೆ ಶಿಕ್ಷಣಕ್ಕೆ ಬೇಕಾದ ಸೌಲಭ್ಯಗಳತ್ತ ಗಮನಕೊಡಬೇಕಾಗಿದೆ. ಈ ಶಾಲೆಯ ವಿದ್ಯಾರ್ಥಿನಿಯರಿಗೆ ಶೌಚಾಲಯ ನಿರ್ಮಾಣ ಮಾಡಿಕೊಡುವ ಆಶಯ ನಮ್ಮದಾಗಿದೆ ಎಂದರು.
ಇಂತಹ ಕಲ್ಪನೆಯನ್ನು ನಿರ್ಮಾಪಕ ನರೇಂದ್ರಬಾಬು ಅವರು ನಮ್ಮ ಗಮನಕ್ಕೆ ತಂದಾಗ ಒಳ್ಳೆಯ ಶಾಲೆಗಳನ್ನು ಗಮನಿಸಿ ಅಲ್ಲಿ ಇಂತಹ ಕಾರ್ಯಗಳನ್ನು ಮಾದೋಣ ಎಂದು ಹೇಳಿದೆ. ಇದು ಪ್ರಾರಂಭಿಕ ಪ್ರಯತ್ನವಾಗಿದೆ. ನಾನು ಮಾಡಿದರೆ ಚಿತ್ರರಂಗದ ನಾಯಕ ನಟರಾದ ದರ್ಶನ, ಸುದೀಪ್, ಯಶ್ ಇಂತಹ ಕಾರ್ಯಗಳನ್ನು ಮಾಡುತ್ತಾರೆ ಎಂದು ಹೇಳಿದರು.
ಪ್ರತಿ ವರ್ಷ ಕರ್ನಾಟಕದಲ್ಲಿ ೪೦೦ ಸಿನೆಮಾಗಳು ಆಗುತ್ತವೆ. ಪ್ರತಿ ವರ್ಷ ೨೦೦ ಶಾಲೆಗಳಲ್ಲಿ ಇಂತಹ ಕಾರ್ಯಗಳನ್ನು ಮಾಡಬಹುದು ಎನ್ನುವ ನಿಟ್ಟಿನಲ್ಲಿ ಇಂತಹ ಕಾರ್ಯವನ್ನು ಮಾಡುತ್ತಿದ್ದೆವೆ. ನಮ್ಮ ಸುತ್ತಲಿನ ಶಾಲೆಗಳನ್ನು ಬೆಳೆಸಿದರೆ ಉತ್ತಮ ಶಿಕ್ಷಣ ನೀಡುವುದಕ್ಕೆ ಸಹಕಾರಿಯಾಗಲಿದೆ ಎಂದು ತಿಳಿಸಿದರು.
ಇಂತಹ ಕಾರ್ಯಗಳನ್ನು ಮಾಡುವುದಕ್ಕೆ ನನ್ನ ತಮ್ಮ ಪುನಿತರಾಜಕುಮಾರ ಪ್ರೇರಣೆ. ಅವನ ನಿಧನದ ನಂತರ ಅವನ ಅಣ್ಣನಾಗಿ ಸಮಾಜಿಕ ಕಾರ್ಯಗಳಲ್ಲಿ ತೊಡಗಿಸಿಕೊಳ್ಳುವ ಪ್ರೇರಣೆ ನನಗಾಗುತ್ತಿದೆ. ಇಂತಹ ಕಾರ್ಯಗಳನ್ನು ಮಾಡುವುದಕ್ಕಾಗಿನೇ ನಾನು ಅವನ ಅಣ್ಣನಾಗಿರುವೆ ಎಂಬ ಭಾವನೆ ನನ್ನದಾಗಿದೆ ಎಂದರು.
ಈ ಶಾಲೆ ೧೯೨೯ರಲ್ಲಿ ಪ್ರಾರಂಭವಾಗಿದೆ. ಇದೇ ವರ್ಷ ನಮ್ಮ ತಂದೆಯವರು ಜನಿಸಿದ ವರ್ಷವಾಗಿದೆ. ಅವರು ಈ ಶಾಲೆಗೆ ಬಂದ ಸಂದರ್ಭದಲ್ಲಿ ಈ ಆವರಣದಲ್ಲಿರುವ ಗಾಂಧೀಜಿಯವರ ಪುತ್ಥಳಿಗೆ ಮಾಲಾರ್ಪಣೆ ಮಾಡುವ ಮೂಲಕ ಗೋಕಾಕ ಚಳುವಳಿಗೆ ಚಾಲನೆ ನೀಡಿದ್ದರು ಎನ್ನುವುದನ್ನು ನೆನಪಿಸಿಕೊಂಡರು.
ಸಿನೆಮಾ ಮಾಡುವುದು ಒಂದು ವ್ಯವಹಾರಿಕ ಪ್ರಕ್ರೀಯೆ. ಕೆಲ ಸಿನೆಮಾಗಳು ಸಕ್ಸ್‌ಸ್ ಆಗುತ್ತವೆ ಇನ್ನು ಕೆಲವು ಆಗುವುದಿಲ್ಲ. ನಾವು ಬೆಳೆಯ ಬೇಕು ನಮ್ಮೊಂದಿಗೆ ನಮ್ಮ ಸುತ್ತಲಿರುವವರನ್ನು ಬೆಳೆಸಬೇಕೆನ್ನುವುದು ನಮ್ಮ ತಂದೆಯವರು ಹಾಕಿಕೊಟ್ಟ ಮಾರ್ಗ ಅದರಂತೆ ನಾವು ನಡೆದುಕೊಳ್ಳುತ್ತಿದ್ದೇವೆ ಎಂದರು.
ಶಾಸಕ ನೆಹರು ಓಲೇಕಾರ ಮಾತನಾಡಿ, ಈ ಶಾಲೆಯ ಅಭಿವೃದ್ಧಿ ಕಾರ್ಯಗಳಿಗೆ ನಮ್ಮಿಂದಾಗುವ ಎಲ್ಲ ಸಹಾಯ ಸಹಕಾರವನ್ನು ನೀಡುತ್ತೇವೆ. ಹೆಗಲಿಗೆ ಹೆಗಲು ಕೊಡುತ್ತೇವೆ. ಡಾ. ಪುನಿತ್‌ರಾಜಕುಮಾರ ಅವರ ವೃತ್ತವನ್ನು ಮಾಡುವುದಕ್ಕೆ ಇಗಾಗಲೇ ನಗರಸಭೆ ಅಧ್ಯಕ್ಷ ಸಂಜೀವಕುಮಾರ ನೀರಲಗಿ ಅವರೊಂದಿಗೆ ಚರ್ಚಿಸಲಾಗಿದೆ ಎಂದು ತಿಳಿಸಿದರು.
ಸುದ್ದಿಗೋಷ್ಠಿಯಲ್ಲಿ ಹೊಸಮಠದ ಬಸವಶಾಂತಲಿಂಗ ಸ್ವಾಮೀಜಿ, ನಗರಸಭೆ ಅಧ್ಯಕ್ಷ ಸಂಜೀವಕುಮಾರ ನೀರಲಗಿ, ಚಿತ್ರ ನಿರ್ಮಾಪಕ ನಾಗೇಂದ್ರಬಾಬು, ರಮೇಶ ತೆವರಿ ಸೇರಿದಂತೆ ಇತರರಿದ್ದರು.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!