ಎಲ್ಲ ಸಮಸ್ಯೆಗಳಿಗೆ ಶಿಕ್ಷಣವೇ ಶಾಶ್ವತ ಪರಿಹಾರ, ಕೊಪ್ಪಳದಲ್ಲಿ ಉಸ್ತುವಾರಿ ಸಚಿವ ಆನಂದ್ ಸಿಂಗ್ ಮಾತು

ಹೊಸದಿಗಂತ ವರದಿ ಕೊಪ್ಪಳ:
ದಾನ- ಧರ್ಮ ಮಾಡುವುದರಿಂದ ತಾತ್ಕಾಲಿಕವಾಗಿ ಸಮಸ್ಯೆ ಬಗೆಹರಿಬಹುದು. ಆದರೆ ಶಿಕ್ಷಣ ನೀಡುವುದರಿಂದ ಸಮಸ್ಯೆಗೆ ಶಾಶ್ವತ ಪರಿಹಾರ ಸಿಗಲಿದೆ ಎಂದು ಜಿಲ್ಲಾ ಉಸ್ತುವಾರಿ ಸಚಿವ ಆನಂದ್ ಸಿಂಗ್ ಹೇಳಿದರು.
ಗವಿಮಠದ ಆವರಣದಲ್ಲಿ ಗುರುವಾರ 5 ಸಾವಿರ ವಿದ್ಯಾರ್ಥಿಗಳ ಉಚಿತ ವಸತಿ ಹಾಗೂ ಪ್ರಸಾದ ನಿಲಯಕ್ಕೆ ಭೂಮಿಪೂಜೆ ನೆರವೇರಿಸಿ ಮಾತನಾಡಿದ ಅವರು, ನಮ್ಮ ದೇಶದಲ್ಲಿ ಮೊದಲ ಆದ್ಯತೆ ಶಿಕ್ಷಣಕ್ಕೆ ನೀಡಬೇಕು. ಮಠ, ಸಂಘಟನೆಗಳು ಶಿಕ್ಷಣಕ್ಕೆ ಒತ್ತು ನೀಡಬೇಕು. ಶಿಕ್ಷಣ ದಿಂದ ಮಾತ್ರ ಬಡತನ ನಿರ್ಮೂಲನೆ ಆಗಲಿದೆ ಎಂದರು.
ಅಭಿನವ ಗವಿಸಿದ್ದೇಶ್ವರ ಸ್ವಾಮೀಜಿ ಗಳು ಗವಿಮಠದಲ್ಲಿ ಬೆಳೆದು ವಿದ್ಯಾಭ್ಯಾಸ ಮಾಡಿ ಮಠದ ಪೀಠಾಧಿಪತಿಯಾಗಿದ್ದಾರೆ. ತಾವು ಅನುಭವಿಸಿದ ಕಷ್ಟಗಳು ವಿದ್ಯಾರ್ಥಿಗಳಿಗೆ ಆಗಬಾರದು ಎಂದು ಸಂಕಲ್ಪ ಮಾಡಿದ್ದಾರೆ.
ವಿದ್ಯಾರ್ಥಿ ನಿಲಯ ಕಟ್ಟಲು ಶ್ರೀಗಳ ಜೋಳಿಗೆಗೆ ಶಕ್ತಿ ನೀಡುತ್ತೇವೆ ಎಂದು ತಿಳಿಸಿದರು.
ಗವಿಮಠದ ಅಭಿನವ ಗವಿಸಿದ್ದೇಶ್ವರ ಸ್ವಾಮೀಜಿ ಮಾತನಾಡಿ, ಮರಿಶಾಂತವೀರ ಸ್ವಾಮೀಜಿ 16 ವರ್ಷ ಕಾಶಿಯಲ್ಲಿ ಆಯುರ್ವೇದ, ಸಂಸ್ಕೃತ ಹಾಗೂ ಯೋಗ ವಿದ್ಯಾಭ್ಯಾಸ ಮಾಡಿ ಕೊಪ್ಪಳ ಕ್ಕೆ ಮರಳಿದರು. ಶ್ರೀಗಳು ಊರೂರು ತಿರುಗಿ ಎರಡ್ಮೂರು ರೂಪಾಯಿ ಭಿಕ್ಷೆ ಭೇಡಿ ಮಕ್ಕಳಿಗೆ ಶಿಕ್ಷಣ ನೀಡಿದರು. ಆಗ ಇನ್ನು ಪ್ರಸಾದ ನಿಲಯ ಆರಂಭಿಸಿರಲಿಲ್ಲ. ಮಠಕ್ಕೆ ಬಂದ ಭಕ್ತರು ಮೀಸಲು ತುಪ್ಪದ ದೀಪ ಹಚ್ಚಿದರೆ ಮಕ್ಕಳು ಅದನ್ನು ತಿನ್ನುತ್ತಿದ್ದರು. ಭಕ್ತರು ಅಕ್ರೋಶಗೊಂಡು ಅಂತಹ ಮಕ್ಕಳನ್ನು ಮಠದಿಂದ ಕಳುಹಿಸಲು ತಿಳಿಸಿದ್ದರು. ಆಗ ಶ್ರೀಗಳು ನೀವು ಹಾರುವ ದೀಪಕ್ಕೆ ಮೀಸಲು ತುಪ್ಪ ಹಾಕಿದ್ದೀರಿ. ಈಗ ಅದು ಹಾರದ ದೀಪಕ್ಕೆ ಮೀಸಲಾಗಿದೆ ಎಂದು ತಿಳಿಸಿ ತಕ್ಷಣವೇ ಪ್ರಸಾದ ನಿಲಯ ಆರಂಭಿಸಿದರು ಎಂದು ಭಾವನಾತ್ಮಕ ವಾಗಿ ನುಡಿದರು.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!