ಹೊಸ ದಿಗಂತ ಡಿಜಿಟಲ್ ಡೆಸ್ಕ್:
ಬೆಂಗಳೂರು ನಗರ ಜಿಲ್ಲೆಯಲ್ಲಿ ನೋಂದಣಿಯಾಗಿ ಸಕ್ರಿಯವಾಗಿ ಕಾರ್ಯನಿರ್ವಹಿಸದೇ ಇರುವ ರಾಜಕೀಯ ಪಕ್ಷಗಳನ್ನು ನೋಂದಣಿ ಪಟ್ಟಿಯಿಂದ ತೆಗೆದು ಹಾಕಲು ಚುನಾವಣಾ ಆಯೋಗ ನಿರ್ಧರಿಸಿದೆ.
ಈ ಬಗ್ಗೆ ವಿಚಾರಣೆಯನ್ನು ಜುಲೈ 18, 2025 ರಂದು ಕರ್ನಾಟಕದ ಮುಖ್ಯ ಚುನಾವಣಾಧಿಕಾರಿ ಕಚೇರಿಯಲ್ಲಿ ನಡೆಸಲಾಗುವುದು ಎಂದು ಬೆಂಗಳೂರು ನಗರ ಅಪರ ಜಿಲ್ಲಾ ಚುನಾವಣಾಧಿಕಾರಿಯೂ ಆದ ಜಿಲ್ಲಾಧಿಕಾರಿ ಜಗದೀಶ.ಜಿ ತಿಳಿಸಿದ್ದಾರೆ.
ಭಾರತ ಚುನಾವಣಾ ಆಯೋಗವು ಪ್ರಜಾ ಪ್ರಾತಿನಿಧ್ಯ ಕಾಯ್ದೆ 1951ರ ಪ್ರಕರಣ 29(ಎ)ರಡಿ ರಾಜಕೀಯ ಪಕ್ಷಗಳು ನೋಂದಣಿ ಮಾಡಿಕೊಂಡಿವೆ. ಆದರೆ, ಸಕ್ರಿಯವಾಗಿ ಕಾರ್ಯನಿರ್ವಹಿಸದ ಹಾಗೂ ವಿಳಾಸ ಪತ್ತೆ ಹಚ್ಚಲು ಸಾಧ್ಯವಿಲ್ಲದ ನೋಂದಾಯಿತ ಮಾನ್ಯತೆ ಪಡೆಯದ ರಾಜಕೀಯ ಪಕ್ಷಗಳಾದ ನಮ್ಮ ಕಾಂಗ್ರೆಸ್, ಪ್ರಜಾ ರೈತ ರಾಜ್ಯ ಪಕ್ಷ, ಕಲ್ಯಾಣ ಕ್ರಾಂತಿ ಪಾರ್ಟಿ, ಭಾರತೀಯ ಡಾ.ಬಿ.ಆರ್.ಅಂಬೇಡ್ಕರ್ ಜನತಾ ಪಾರ್ಟಿ, ರಕ್ಷಕ ಸೇನೆ, ಮಹಿಳಾ ಪ್ರಧಾನ ಪಕ್ಷ, ಅಂಬೇಡ್ಕರ್ ಜನತಾ ಪಾರ್ಟಿ ಹಾಗೂ ಕರ್ನಾಟಕ ಪ್ರಜಾ ವಿಕಾಸ ಪಾರ್ಟಿಗಳು ಕಳೆದ 6 ವರ್ಷಗಳಿಂದ ಯಾವುದೇ ಲೋಕಸಭೆ, ವಿಧಾನಸಭೆ ಹಾಗೂ ಉಪ ಚುನಾವಣೆಗಳಲ್ಲಿ ಸ್ಪರ್ಧಿಸಿಲ್ಲ.
ಈ ಹಿನ್ನಲೆಯಲ್ಲಿ ಪ್ರಜಾ ಪ್ರಾತಿನಿಧ್ಯ ಕಾಯ್ದೆ 1951ರಡಿಯಲ್ಲಿ ನೋಂದಣಿಯಾದ ರಾಜಕೀಯ ಪಕ್ಷಗಳ ಪಟ್ಟಿಯಿಂದ ತೆಗೆದು ಹಾಕಲು ಮುಖ್ಯ ಚುನಾವಣಾಧಿಕಾರಿ ಮನೋಜ್ ಕುಮಾರ್ ಮೀನಾ ಕಾರಣ ಕೇಳುವ ನೋಟಿಸನ್ನು ಜಾರಿಗೊಳಿಸಿರುತ್ತಾರೆ.