Wednesday, August 10, 2022

Latest Posts

ಐದನೇ ಮಹಡಿಯ ಅಡುಗೆ ಮನೆಗೆ ಸ್ಕೂಟರ್ ಒಯ್ದರು! ಈ ಚಿತ್ರ ಎಬ್ಬಿಸಿದೆ ಚಾರ್ಜಿಂಗ್ ಸೌಕರ್ಯದ ಪ್ರಶ್ನೆ

ಪ್ರೀತಿಯ ಓದುಗರೇ,

ಕೋವಿಡ್ ನಿರ್ನಾಮ ನಮ್ಮ ಕೈಯಲ್ಲೇ ಇದೆ. ಮಾಸ್ಕ್ ಧರಿಸಿ, ಸಾಮಾಜಿಕ ಅಂತರ ಕಾಯ್ದುಕೊಳ್ಳಿ, ಕೈ, ಮುಖವನ್ನು ಸ್ವಚ್ಛವಾಗಿ ಇಟ್ಟುಕೊಳ್ಳಿ. ನೀವೂ ಸುರಕ್ಷಿತರಾಗಿರಿ, ನಿಮ್ಮವರನ್ನೂ ಸುರಕ್ಷಿತರಾಗಿ ಇರುವಂತೆ ನೋಡಿಕೊಳ್ಳಿ.

………………………………………………………………………..

ಹೊಸದಿಗಂತ ಆನ್ ಲೈನ್ ಡೆಸ್ಕ್:

ಬೆಂಗಳೂರಿನ ಹುಳಿಮಾವುವಿನ ಅಪಾರ್ಟ್ಮೆಂಟ್ ಒಂದರ ನಿವಾಸಿ ತಮ್ಮ ವಿದ್ಯುತ್ ಸ್ಕೂಟರ್ ಅನ್ನು ಲಿಫ್ಟಿನಲ್ಲಿಟ್ಟು ಐದನೇ ಮಹಡಿಯಲ್ಲಿರುವ ತಮ್ಮ ವಸತಿಯಲ್ಲಿನ ಅಡುಗೆಮನೆಗೆ ತೆಗೆದುಕೊಂಡು ಹೋಗಿ ಚಾರ್ಜ್ ಹಾಕಿರುವ ಸಂಗತಿ ಈಗ ವೈರಲ್ ಆಗುತ್ತಿದೆ. ಕಾರ್ಪೋರೇಟ್ ಕಂಪನಿಯೊಂದರ ಉನ್ನತ ಹುದ್ದೆಯಲ್ಲಿರುವ ವಿಶ್ ಘಂಟಿ ಎಂಬುವವರು ಖುದ್ದು ಈ ವಿಷಯವನ್ನು ಲಿಂಕ್ಡ್ ಇನ್ ಸಾಮಾಜಿಕ ತಾಣದಲ್ಲಿ ಫೋಟೊ ಸಮೇತ ಹಂಚಿಕೊಂಡ ನಂತರ ಇದು ವೈರಲ್ ಆಯಿತು.

ವಿದ್ಯುತ್ ವಾಹನ ಕ್ರಾಂತಿ ಹೊಸ್ತಿಲಲ್ಲಿ ಅದಕ್ಕಿರುವ ಸವಾಲುಗಳನ್ನು ಸಮರ್ಥವಾಗಿ ಬಿಂಬಿಸಿರುವ ಚಿತ್ರ ಇದು. ವಿಶ್ ಅವರು ಬರೆದುಕೊಂಡಿರುವ ಪ್ರಕಾರ 300 ಮನೆಗಳ ಅವರ ವಸತಿ ಸಮುಚ್ಛಯದಲ್ಲಿ ಮೂವರು ಮಾತ್ರ ವಿದ್ಯುತ್ ಸ್ಕೂಟರ್ ಬಳಸುತ್ತಿದ್ದಾರೆ. ಹೀಗಾಗಿ ವಸತಿ ಸಮುಚ್ಛಯದ ವಾಹನ ನಿಲುಗಡೆ ಸ್ಥಳದಲ್ಲಿ ವಿದ್ಯುತ್ ಪೂರಣಕ್ಕೆ ಬೇಕಾದ ವ್ಯವಸ್ಥೆ ಕಲ್ಪಿಸುವ ಬಗ್ಗೆ ಯಾರೂ ತಲೆಕೆಡಿಸಿಕೊಂಡಿಲ್ಲ. ಹೀಗಾಗಿ ಇವರಿಗೆ ಅಡುಗೆ ಮನೆಗೆ ತೆಗೆದುಕೊಂಡು ಹೋಗಿ ವಿದ್ಯುತ್ ಪೂರಣ ಮಾಡಿಕೊಳ್ಳಬೇಕಾಗಿ ಬಂತು. 

ಬಿಬಿಎಂಪಿಗೆ ಜನರ ಬೇಡಿಕೆ

ಬೃಹತ್ ಬೆಂಗಳೂರು ಮಹಾನಗರ ಪಾಲಿಕೆಯು ವಸತಿ ಸಮುಚ್ಛಯಗಳಲ್ಲಿ ಚಾರ್ಜಿಂಗ್ ವ್ಯವಸ್ಥೆಯನ್ನು ಕಡ್ಡಾಯವಾಗಿಸಿ ಕಾಯ್ದೆ ತಿದ್ದುಪಡಿ ಮಾಡಬೇಕು ಎಂಬ ಬೇಡಿಕೆ ಜನರಿಂದ ಈಗ ಕೇಳಿಬರುತ್ತಿದೆ. ಈ ಬಗ್ಗೆ 2019ರಲ್ಲಿ ಕಾಯ್ದೆಯ ಕರಡೊಂದು ಸಿದ್ಧಗೊಂಡಿದ್ದು ಅದಿನ್ನೂ ಕಾನೂನಾಗಿಲ್ಲ.

ವಿಷಯ ಅಷ್ಟು ಸರಳವಾಗಿಲ್ಲ

“ಎಲ್ಲ ವಸತಿ ಸಮುಚ್ಛಯಗಳು ಚಾರ್ಜಿಂಗ್ ಸೌಕರ್ಯ ಹೊಂದಿರಬೇಕು” ಎಂಬ ಪರಿಹಾರ ಕೇಳುವುದಕ್ಕೆ ಹಿತವಾಗಿರುವಷ್ಟು ಪ್ರಾಯೋಗಿಕವಾಗಿ ಸುಲಭವಿಲ್ಲ. ಅದಕ್ಕೆ ಕಾರಣಗಳಿವೆ.

ವಸತಿ ಸಮುಚ್ಛಯದ ಎಲ್ಲರೂ ಎಲೆಕ್ಟ್ರಿಕ್ ವಾಹನ ಹೊಂದಿರುವುದಿಲ್ಲ. ಹೀಗಾಗಿ ವಿದ್ಯುತ್ ಬಿಲ್ ಅನ್ನು ವಿಂಗಡಿಸುವುದು ಹೇಗೆ?

ಅಲ್ಲಿ ವಾಸವಿರುವವರ ಭೇಟಿಗೆ ಬಂದವರಿಗೆ ವಿದ್ಯುತ್ ಪೂರಣದ ವ್ಯವಸ್ಥೆಯನ್ನು ಕೊಡಬೇಕೇ?

ಈ ಚಾರ್ಜಿಂಗ್ ವ್ಯವಸ್ಥೆಯ ಸ್ಥಾಪನೆ ಖರ್ಚು ಹಾಗೂ ದೇಖರೇಖಿಯ ವೆಚ್ಚಗಳನ್ನೆಲ್ಲ ಯಾರು ನೋಡಿಕೊಳ್ಳಬೇಕು? 

ಹಾಗಂತ ಇವ್ಯಾವವೂ ಉತ್ತರ ಕಂಡುಕೊಳ್ಳಲಾಗದ ಪ್ರಶ್ನೆಗಳೇನಲ್ಲ. ಚಾರ್ಜ್ ಮಾಡುವವರಿಗೆ ಪ್ರೀಪೇಡ್ ಮೀಟರ್ ಥರದ ವ್ಯವಸ್ಥೆಯನ್ನು ಒದಗಿಸುವ ಅವಕಾಶಗಳಿವೆ. ಪ್ರತಿ ಮನೆಯಿಂದಲೂ ಅವರ ಮೀಟರಿನಿಂದಲೇ ವಿದ್ಯುತ್ ಪೂರೈಕೆ ಸಂಪರ್ಕವನ್ನು ಎಳೆದು ಅದನ್ನು ಅವರವರ ವಾಹನ ನಿಲುಗಡೆ ಜಾಗಕ್ಕೆ ಸಂಪರ್ಕಿಸುವ ವ್ಯವಸ್ಥೆ ಕುರಿತೂ ಆಲೋಚನೆಗಳಿವೆ. ಆದರೆ ಈ ಕುರಿತ ನಿರ್ದಿಷ್ಟ ಶಿಸ್ತು ಇನ್ನಷ್ಟೇ ರೂಪುಗೊಳ್ಳಬೇಕಿದೆ. ಅಲ್ಲಿಯವರೆಗೆ ಪ್ರಾರಂಭಿಕ ಅಡೆತಡೆಯ ತೊಡರುಗಳು ಇದ್ದದ್ದೇ.

ಈ ಸುದ್ದಿ ಇತರರೊಂದಿಗೂ ಹಂಚಿಕೊಳ್ಳಿ

Whatsapp Group
Telegram

Latest Posts

Don't Miss