ಹೊಸದಿಗಂತ ವರದಿ, ಮಂಗಳೂರು:
ಮಂಗಳೂರಿನ ಪ್ರತಿಷ್ಠಿತ ವಿಕಾಸ್ ಶಿಕ್ಷಣ ಸಂಸ್ಥೆಯೊಂದಿಗೆ ರಾಜಸ್ಥಾನ ಕೋಟದ ಎಲೆನ್ ಕೆರಿಯರ್ ಇನ್ಸ್ಟಿಟ್ಯೂಟ್ ಸಂಸ್ಥೆ ಕೈ ಜೋಡಿಸಿದ್ದು, ಇದರ ಉದ್ಘಾಟನಾ ಕಾರ್ಯಕ್ರಮ ಶುಕ್ರವಾರ ಮಂಗಳೂರಿನ ಖಾಸಗಿ ಹೋಟೆಲ್ ಸಭಾಂಗಣದಲ್ಲಿ ನಡೆಯಿತು. ಐಐಟಿ, ಜೆಇಇ, ನೀಟ್ ಮೊದಲಾದ ಸ್ಪರ್ಧಾತ್ಮಕ ಪರೀಕ್ಷೆಗೆ ಕೋಚಿಂಗ್ ನೀಡುವ ಮೂಲಕ ಈಗಾಗಲೇ ರಾಷ್ಟ್ರಮಟ್ಟದಲ್ಲಿ ಗುರುತಿಸಿಕೊಂಡಿರುವ ಎಲೆನ್ ಸಂಸ್ಥೆ ವಿಕಾಸ್ ಶಿಕ್ಷಣ ಸಂಸ್ಥೆಯೊಂದಿಗೆ ಒಪ್ಪಂದ ಮಾಡಿಕೊಳ್ಳುವ ಮೂಲಕ ಈ ಭಾಗದ ವಿದ್ಯಾರ್ಥಿಗಳು ಸ್ಪರ್ಧಾತ್ಮಕ ಪರೀಕ್ಷೆಗೆ ಸಜ್ಜಾಗಲು ವೇದಿಕೆ ಕಲ್ಪಿಸಿದೆ.
ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ಮಂಗಳೂರಿನ ಖ್ಯಾತ ವೈದ್ಯ, ನಿಟ್ಟೆ ವಿಶ್ವ ವಿದ್ಯಾಲಯದ ಪ್ರೊ ಚಾನ್ಸೆಲರ್ ಡಾ.ಶಾಂತರಾಮ ಶೆಟ್ಟಿ, ಶಿಕ್ಷಣ ಮತ್ತು ವೈದ್ಯಕೀಯ ಕ್ಷೇತ್ರದಲ್ಲಿ ತನ್ನದೇ ಆದ ಹೆಗ್ಗುರುತು ಮೂಡಿಸಿರುವ ಮಂಗಳೂರಿನಲ್ಲಿ ಪ್ರತಿಷ್ಠಿತ ತರಬೇತಿ ಸಂಸ್ಥೆಯಾದ ಎಲೆನ್ ತನ್ನ ಕೇಂದ್ರವನ್ನು ವಿಕಾಸ್ ಕಾಲೇಜಿನ ಸಹಭಾಗಿತ್ವದಲ್ಲಿ ತೆರೆಯುತ್ತಿರುವುದು ಹೆಮ್ಮೆಯ ವಿಷಯ. ಇದರಿಂದ ಸಾವಿರಾರು ವಿದ್ಯಾರ್ಥಿಗಳ ಕಲಿಕೆಗೆ ಪ್ರಯೋಜನಕಾರಿಯಾಗಲಿದೆ ಎಂದರು.
ಎಲೆನ್ ಕೆರಿಯರ್ ಇನ್ಸ್ಟಿಟ್ಯೂಟ್ನ ಮುಖ್ಯಸ್ಥ ಪಂಕಜ್ ಅಗರ್ವಾಲ್ , ಎಲೆನ್ ಸೌತ್ ಇಂಡಿಯಾ ಅಕಡೆಮಿಕ್ ಹೆಡ್ ಮಹೇಶ್ ಯಾದವ್, ವಿಕಾಸ್ ಶಿಕ್ಷಣ ಸಂಸ್ಥೆಯ ಮುಖ್ಯಸ್ಥ ಕೃಷ್ಣ ಜೆ ಪಾಲೆಮಾರ್, ಎಲೆನ್ ಕೆರಿಯರ್ ಇನ್ಸ್ಟಿಟ್ಯೂಟ್ ಮಂಗಳೂರು ವಿಭಾಗದ ಮುಖ್ಯಸ್ಥ ವಿಪಿನ್ ನಾರಾಯಣನ್ ಮತ್ತಿತರರು ಉಪಸ್ಥಿತರಿದ್ದರು.