ಪ್ರೀತಿಯ ಓದುಗರೇ,
ಕೋವಿಡ್ ನಿರ್ನಾಮ ನಮ್ಮ ಕೈಯಲ್ಲೇ ಇದೆ. ಮಾಸ್ಕ್ ಧರಿಸಿ, ಸಾಮಾಜಿಕ ಅಂತರ ಕಾಯ್ದುಕೊಳ್ಳಿ, ಕೈ, ಮುಖವನ್ನು ಸ್ವಚ್ಛವಾಗಿ ಇಟ್ಟುಕೊಳ್ಳಿ. ನೀವೂ ಸುರಕ್ಷಿತರಾಗಿರಿ, ನಿಮ್ಮವರನ್ನೂ ಸುರಕ್ಷಿತರಾಗಿ ಇರುವಂತೆ ನೋಡಿಕೊಳ್ಳಿ.
…………………………………………
ಹೊಸದಿಗಂತ ಆನ್ ಲೈನ್ ಡೆಸ್ಕ್:
ಭಾರತ ಬಯೋಟೆಕ್ ಕಂಪನಿಯ ಕೊವ್ಯಾಕ್ಸಿನ್ ಲಸಿಕೆಗೆ ಅಮೆರಿಕದಲ್ಲಿ ತುರ್ತು ಉಪಯೋಗಕ್ಕೆ ಅನುಮತಿ ನೀಡುವುದಕ್ಕೆ ಅಲ್ಲಿನ ಫುಡ್ ಆ್ಯಂಡ್ ಡ್ರಗ್ ಅಡ್ಮಿನಿಸ್ಟ್ರೇಷನ್ (ಎಫ್ ಡಿ ಎ) ನಿರಾಕರಿಸಿದೆ. ಹಾಗಾದರೆ ದೇಸಿ ಲಸಿಕೆಗೆ ಅಮೆರಿಕದ ಬಾಗಿಲು ಮುಚ್ಚಿತು ಎಂದರ್ಥವೇ?
ಹಾಗೇನೂ ಇಲ್ಲ. ಅಮೆರಿಕದ ಔಷಧ ಕಂಪನಿಯೊಂದರ ಜತೆ ಸಹಭಾಗಿತ್ವ ಹೊಂದಿ ಅವರ ಮೂಲಕ ಲಸಿಕೆಯ ಉಪಯೋಗದ ಅನುಮತಿಗೆ ಅರ್ಜಿ ಸಲ್ಲಿಸಲಾಗಿತ್ತು. ಅಮೆರಿಕದ ಎಫ್ ಡಿ ಎ ಕೋವ್ಯಾಕ್ಸಿನ್ ಗೆ ತುರ್ತು ಅನುಮತಿ ನೀಡುವುದಕ್ಕೆ ಇನ್ನೂ ಒಂದಿಷ್ಟು ಪ್ರಯೋಗ ಸಂಬಂಧಿ ದಾಖಲೆಗಳನ್ನು ನೀಡಬೇಕು ಎಂದು ಕೇಳಿತು.
ಇದೀಗ ಆ ಅಮೆರಿಕನ್ ಕಂಪನಿ ಹೇಳಿರುವುದೇನೆಂದರೆ, ತಾನು ಹೆಚ್ಚುವರಿ ಮಾಹಿತಿಗಳನ್ನು ಸಲ್ಲಿಸುವಾಗ ತುರ್ತು ಉಪಯೋಗಕ್ಕಾಗಿ ಅರ್ಜಿ ಸಲ್ಲಿಸುವುದಿಲ್ಲ ಬದಲಿಗೆ ಸಂಪೂರ್ಣ ಉಪಯೋಗದ ಅನುಮತಿಗೆ ಬೇಕಾದ ಮಾಹಿತಿಗಳನ್ನೆಲ್ಲವೂ ನೀಡಿ ಆ ನಿಟ್ಟಿನಲ್ಲಿಯೇ ಅನುಮತಿ ಪಡೆಯುವುದಕ್ಕೆ ನಿರ್ಧರಿಸಿದೆ.
ಎಫ್ ಡಿ ಎ ಸಹ ಜೈವಿಕ ಪರವಾನಗಿ ಅರ್ಜಿಯ ಮೂಲಕವೇ ಅನುಮತಿ ಪಡೆಯುವುದಕ್ಕೆ ಶಿಫಾರಸು ಮಾಡಿರುವುದಾಗಿ ವರದಿಯಾಗಿದೆ. ಅಮೆರಿಕಕ್ಕೆ ಅದಾಗಲೇ ಸಾಕಷ್ಟು ಪ್ರಮಾಣದಲ್ಲಿ ಲಸಿಕೆ ಲಭ್ಯವಿದ್ದು, ‘ತುರ್ತು ಉಪಯೋಗ’ಕ್ಕೆ ಯಾವುದೇ ಲಸಿಕೆಗೆ ಒಪ್ಪಿಗೆ ನೀಡಬಹುದಾದ ಅನಿವಾರ್ಯತೆ ಅದಕ್ಕಿಲ್ಲ. ಆದರೆ ಮತ್ತೊಂದು ವಿಭಾಗದಲ್ಲಿ ದಾಖಲೆಗಳನ್ನು ಸಲ್ಲಿಸಿ ಅನುಮತಿ ಪಡೆಯುವುದಕ್ಕೆ ಕೊವ್ಯಾಕ್ಸಿನ್ ಲಸಿಕೆಗೆ ಹೆಚ್ಚಿನ ಸಮಯ ಹಿಡಿಯಲಿದೆ ಎನ್ನುತ್ತಾರೆ ಪರಿಣತರು.