ಪ್ರೀತಿಯ ಓದುಗರೇ,
ಕೋವಿಡ್ ನಿರ್ನಾಮ ನಮ್ಮ ಕೈಯಲ್ಲೇ ಇದೆ. ಮಾಸ್ಕ್ ಧರಿಸಿ, ಸಾಮಾಜಿಕ ಅಂತರ ಕಾಯ್ದುಕೊಳ್ಳಿ, ಕೈ, ಮುಖವನ್ನು ಸ್ವಚ್ಛವಾಗಿ ಇಟ್ಟುಕೊಳ್ಳಿ. ನೀವೂ ಸುರಕ್ಷಿತರಾಗಿರಿ, ನಿಮ್ಮವರನ್ನೂ ಸುರಕ್ಷಿತರಾಗಿ ಇರುವಂತೆ ನೋಡಿಕೊಳ್ಳಿ.
………………………………
ಹೊಸ ದಿಗಂತ ಆನ್ ಲೈನ್ ಡೆಸ್ಕ್:
ಒಲಂಪಿಕ್ಸ್ ಫಾರ್ ಕನ್ನಡಿಗ ಎಂದು ಬಂದರೆ ವೈ ನಾಟ್ ? ಕನ್ನಡಿಗರು ಒಲಂಪಿಕ್ಸ್ನಲ್ಲಿ ಸಾಧನೆ ಮಾಡಲು ಏಕೆ ಸಾಧ್ಯವಾಗದು? ನಾವೂ ಸಹ ಒಲಂಪಿಕ್ ಸ್ಪರ್ಧೆಗಳಲ್ಲಿ ಸಾಧನೆ ಮಾಡಬಹುದು ಎಂಬುದೇ ನನ್ನ ನಿಲುವು ಮತ್ತು ಘೋಷಣೆಯಾಗಿರುತ್ತದೆ ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ತಿಳಿಸಿದರು.
ಈ ಬಾರಿ ಮಂಡಿಸಲಿರುವ ಬಜೆಟ್ನಲ್ಲಿ ಕ್ರೀಡಾಕ್ಷೇತ್ರಕ್ಕೆ ಹೆಚ್ಚಿನ ಅನುದಾನ ನೀಡಲಾಗುವುದು. ಮುಂಬರುವ ಮಾರ್ಚ್ ಹೊತ್ತಿಗೆ ಬಜೆಟ್ ರಚನೆಗೆ ಹೆಚ್ಚಿನ ಶಕ್ತಿ ಮತ್ತು ಉತ್ತಮ ವಾತಾವರಣ ನನಗೆ ದೊರಕಬಹುದು. ಕ್ರೀಡಾ ಕ್ಷೇತ್ರದಲ್ಲಿ ಮೂಲಸೌಕರ್ಯ ಅಭಿವೃದ್ಧಿಯ ಜತೆಗೆ ಅಂತಾರಾಷ್ಟ್ರೀಯ ಮಟ್ಟದ ತರಬೇತುದಾರರನ್ನು ಒದಗಿಸುವ ಬಗ್ಗೆಯೂ ಚಿಂತನೆ ಮಾಡಿದ್ದೇವೆ. ಒಲಂಪಿಕ್ಸ್ನಲ್ಲಿ ರಾಜ್ಯದಿಂದ ಅತ್ಯುತ್ತಮ ಕ್ರೀಡಾಪಟುಗಳನ್ನು ರೂಪಿಸಿ ಕಳುಹಿಸಲಾಗುವುದು ಎಂದು ಮುಖ್ಯಮಂತ್ರಿಗಳು ಭರವಸೆ ನೀಡಿದರು. ಕಾರ್ಯಕ್ರಮದಲ್ಲಿ ವಿವಿಧ ಕ್ರೀಡೆಗಳಲ್ಲಿ ಅಂತಾರಾಷ್ಟ್ರೀಯ ಮಟ್ಟದಲ್ಲಿ ಭಾಗವಹಿಸಿದ್ದ ಕ್ರೀಡಾಪಟುಗಳಿಗೆ ರಾಜ್ಯಪಾಲರು, ಹಾಗೂ ಸಿಎಂ ಸನ್ಮಾನಿಸಿದರು.
ಕ್ರೀಡಾಪಟುಗಳಿಗೆ ಹೆಚ್ಚಿನ ಸೌಲಭ್ಯಕ್ಕೆ ಮನವಿ
ರಾಜ್ಯದಲ್ಲಿ ಕ್ರೀಡಾಪಟುಗಳಿಗೆ ಉದ್ಯೋಗ ಸಿಗುವುದು ಕಡಿಮೆ. ಈ ಸಮಸ್ಯೆಯನ್ನು ಹೋಗಲಾಡಿಸಲು ಕ್ರೀಡಾಪಟುಗಳಿಗೆ ಅರಣ್ಯ, ಪೊಲೀಸ್ ಇಲಾಖೆಗಳಲ್ಲಿ ನೇರ ನೇಮಕಾತಿ ಪ್ರಕ್ರಿಯೆ ನಡೆಯಬೇಕು. ಮಂಗಳೂರಿನಲ್ಲಿ ಮಿನಿ ಒಲಿಂಪಿಕ್ಸ್ ನಡೆಸುವ ಚಿಂತನೆಯಿದೆ. ಇದಕ್ಕೆ ಸಿಎಂ ಬೊಮ್ಮಾಯಿಯವರ ಸಹಕಾರ ಬೇಕಾಗಿದೆ. ಕ್ರೀಡಾಪಟುಗಳಿಗೆ ಉತ್ತಮ ಹಾಸ್ಟೆಲ್, ಆಹಾರ ನೀಡಬೇಕಿದೆ. ಕ್ರೀಡಾಪಟುಗಳಿಗೆ ಭತ್ಯೆ ಹೆಚ್ಚಳ ಮಾಡಬೇಕು ಎಂದು ಕರ್ನಾಟಕ ಒಲಂಪಿಕ್ ಸಂಸ್ಥೆ ಅಧ್ಯಕ್ಷ ಗೋವಿಂದರಾಜು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರಿಗೆ ಮನವಿ ಮಾಡಿದರು.