ಹೊಸ ದಿಗಂತ ವರದಿ, ಚಿಕ್ಕಮಗಳೂರು:
ಕೊರೋನಾದಿಂದ ಎದುರಾಗಿರುವ ಆರ್ಥಿಕ ಸಂಕಷ್ಟದ ನಡುವೆಯೂ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಅವರು ಮಂಡಿಸಿರುವ ರಾಜ್ಯ ಬಜೆಟ್ನಲ್ಲಿ ಕರ್ನಾಟಕದ ಸಮಗ್ರ ವಿಕಾಸಕ್ಕೆ ಒತ್ತು ನೀಡಲಾಗಿದೆ ಎಂದು ಜಿಲ್ಲಾ ಬಿಜೆಪಿ ವಕ್ತಾರ ವರಸಿದ್ಧಿ ವೇಣುಗೋಪಾಲ್ ತಿಳಿಸಿದರು.
ಮಂಗಳವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಯಾವುದೇ ಕರ ಭಾರವಿಲ್ಲದೆ ಜನಪರ ಬಜೆಟ್ನ್ನು ಮಂಡಿಸಿದ್ದಾರೆ. ಕೃಷಿ, ತೋಟಗಾರಿಕೆ, ಮಹಿಳೆಯರ ಆರ್ಥಿಕ ಸಬಲೀಕರಣ ಈ ರೀತಿ ಸರ್ವ ವ್ಯಾಪಿ – ಸರ್ವ ಸ್ಪರ್ಶಿ ಬಜೆಟ್ ಇದಾಗಿದೆ ಎಂದರು.
ನರೇಂದ್ರ ಮೋದಿಯವರ ಕನಸಿನ ಆತ್ಮ ನಿರ್ಭರ ಭಾರತ ನಿರ್ಮಾಣಕ್ಕೆ ಮುಖ್ಯಮಂತ್ರಿಗಳು ಒತ್ತು ನೀಡಿದ್ದಾರೆ. ಯಾವುದೇ ಕರ ವಿಧಿಸದೇ ಅಗ್ಗದ ಜನಪ್ರಿಯ ಘೋಷಣೆಗಳಿಗೆ ಮರುಳಾಗದೆ ರಾಜ್ಯದ ಸರ್ವಾಂಗೀಣ ಅಭಿವೃದ್ಧಿಗೆ ಬಜೆಟ್ನಲ್ಲಿ ಒತ್ತು ನೀಡಲಾಗಿದೆ ಎಂದರು.
ರಾಜ್ಯದ ಬೆಂಗಳೂರು ಸೇರಿದಂತೆ ಇತರ ನಗರಗಳಲ್ಲಿ ಅಭಿವೃದ್ಧಿಗೆ ಪೂರಕವಾದ ಹಣವನ್ನು ಮೀಸಲಿರಿಸಿ. ಪ್ರವಾಸೋಧ್ಯಮ, ಶಿಕ್ಷಣ, ಆರೋಗ್ಯ, ಕೃಷಿ ಹೀಗೆ ಎಲ್ಲಾ ವಿಚಾರದಲ್ಲೂ ಮುತುವರ್ಜಿ ವಹಿಸಿ ಆರ್ಥಿಕ ಸಂಕಷ್ಠದ ನಡುವೆಯೂ ಅಭಿವೃದ್ಧಿಗೆ ಒತ್ತು ಕೊಡುವ ಆಯ-ವ್ಯವನ್ನು ರಾಜ್ಯದ ಮುಖ್ಯಮಂತ್ರಿಗಳು ಮಂಡಿಸಿದ್ದಾರೆ. ಇದನ್ನು ಜಿಲ್ಲಾ ಬಿಜೆಪಿ ಸ್ವಾಗತಿಸುತ್ತದೆ ಎಂದರು.
ಜಿಲ್ಲೆಗೆ ಈ ಮೊದಲೇ ವೈದ್ಯಕೀಯ ಕಾಲೇಜು ನಿರ್ಮಾಣಕ್ಕೆ, ಜಿಲ್ಲಾಸ್ಪತ್ರೆ ಮೇಲ್ದರ್ಜೆಗೆ, ಭದ್ರ ಮೇಲ್ದಂಡೆ ಇನ್ನೂ ಹಲವು ಅಭಿವೃದ್ಧಿ ಕಾರ್ಯಗಳಿಗೆ ಅನುದಾನವನ್ನು ನೀಡಲಾಗಿದೆ. ಹಾಗೂ 1,281 ಕೋಟಿ ಗೋಂದಿ ಮತ್ತು ರಣಘಟ್ಟ ನೀರಾವರಿ ಯೋಜನೆಗೆ ಅನುದಾನವನ್ನು ನೀಡಲಾಗಿದೆ. ವಿವಿಧ ಗ್ರಾಮಗಳ ಕೆರೆಗಳಿಗೆ ಭದ್ರಾ ಮೇಲ್ದಂಡೆ ಯೋಜನೆಯಿಂದ ನೀರು ಹರಿಸಲು 700 ಕೋಟಿ ಅನುದಾನವನ್ನು ಮೀಸಲಿರಿಸಲಾಗಿದೆ. ಇದರಿಂದ ತರೀಕೆರೆ, ಕಡೂರು, ಚಿಕ್ಕಮಗಳೂರು ತಾಲ್ಲೂಕಿನ ಹಳ್ಳಿಗಳಿಗೆ ಅನುಕೂಲವಾಗಲಿದೆ. ಇದನ್ನರಿಯದ ವಿರೋಧ ಪಕ್ಷಗಳು ಆಯ-ವ್ಯಯವನ್ನು ಟೀಕಿಸಿದೆ. ಪ್ರತ್ಯೇಕ ಹಾಲು ಒಕ್ಕೂಟ ಸ್ಥಾಪನೆಗೆ ಪೂರಕ ಬಜೆಟ್ನಲ್ಲಿ ಅನುದಾನ ಮೀಸಲಿಡುವಂತೆ ಮುಖ್ಯಮಂತ್ರಿಗಳಲ್ಲಿ ಮನವಿ ಮಡುತ್ತೇವೆ ಎಂದು ತಿಳಿಸಿದರು.
ಬಜೆಟ್ ಅಧಿವೇಶನದಲ್ಲಿ ಭಾಗವಹಿಸದೆ ಸದನವನ್ನು ಬಹಿಷ್ಕರಿಸಿ ಇತಿಹಾಸದಲ್ಲೇ ಯಾರೂ ಮಾಡದ ದುಸ್ಸಾಹಸವನ್ನು ಕಾಂಗ್ರೆಸ್ ಮಾಡಿದ್ದು, ಇದನ್ನು ಜಿಲ್ಲಾ ಬಿಜೆಪಿ ಖಂಡಿಸುತ್ತದೆ ಎಂದರು.
ಸುದ್ದಿಗೋಷ್ಠಿಯಲ್ಲಿ ಬಿಜೆಪಿ ಸಹ ವಕ್ತಾರ ಡಿ.ಸುಧೀರ್, ನಗರ ಬಿಜೆಪಿ ಅಧ್ಯಕ್ಷ ಮಧುಕುಮಾರ ರಾಜ್ ಅರಸ್, ಕಾರ್ಯದರ್ಶಿ ಬಸರಾಜ್, ರಾವನಾಥ್ ಇದ್ದರು.